ಜೂನ್‌ ಮೊದಲ ವಾರ ಮಳೆ ಸಾಧ್ಯತೆ : ಮುಂಜಾಗ್ರತಾ ಕ್ರಮಕ್ಕೆ ಸೂಚನೆ

ದಾವಣಗೆರೆ, ಮೇ 15- ಜಿಲ್ಲೆಯಲ್ಲಿ ಜೂನ್‌ ಮೊದಲ ವಾರದಲ್ಲಿಯೇ ಮಳೆಯಾಗುವ ಸಾಧ್ಯತೆ ಇದ್ದು, ಆಯಾ ತಾಲ್ಲೂಕುಗಳಲ್ಲಿ ಜನ-ಜಾನುವಾರು ಸೇರಿದಂತೆ ಯಾವುದೇ ರೀತಿ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಹಶೀಲ್ದಾರರಿಗೆ ಸೂಚನೆ ನೀಡಿದರು. 

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣಾ ಮುಂಜಾಗ್ರತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆಯ ಪ್ರಮಾಣ, ಹಾನಿ ವಿವರ, ನದಿ ನೀರಿನ ಮಟ್ಟದ ವರದಿಯನ್ನೂ ಉಪವಿಭಾಗಾ ಧಿಕಾರಿಗಳ ಮೂಲಕ ಸಲ್ಲಿಸಬೇಕು. ಜೀವ ಹಾನಿ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಾನುವಾರು ಹಾನಿಗೆ ಸಂಬಂಧಿಸಿದಂತೆ 24 ಗಂಟೆಯೊಳಗೆ ಎನ್‌ಡಿಆರ್‌ಎಫ್‌ ಮಾರ್ಗ ಸೂಚಿ ಅನ್ವಯ ಪರಿಹಾರ ನೀಡಬೇಕೆಂದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ವಿಪತ್ತು ನಿರ್ವಹಣೆಗಾಗಿ ತಲಾ 30 ಲಕ್ಷ ರೂ.ಗಳನ್ನು ನೀಡಿದ್ದು, ಸದ್ಭಳಕೆ ಮಾಡಿಕೊಳ್ಳಬೇಕು. ಬೆಳೆ ಹಾನಿ ಕುರಿತು ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಜಂಟಿಯಾಗಿ ಕಾಲಕಾಲಕ್ಕೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.

ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಬೇಕೆಂದರು.

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಹರಿಹರ ಮತ್ತು ಹೊನ್ನಾಳಿ ತಾಲ್ಲೂಕಿನಲ್ಲಿ ಹೊಳೆ ಇರುವುದರಿಂದ ಬೋಟ್‌ ಮತ್ತು ರಕ್ಷಣಾ ಸಿಬ್ಬಂದಿ ಸಿದ್ದಪಡಿಸಿರಬೇಕೆಂದು ತಹಶೀಲ್ದಾರ್‌ ರಾಮಚಂದ್ರಪ್ಪ ಹಾಗೂ ತುಷಾರ್‌ ಬಿ. ಹೊಸೂರುಗೆ ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮಿಕಾಂತ್ ಬೊಮ್ಮನ್ನಾರ್ ಮಾಹಿತಿ ನೀಡಿದರು.

ಅನ್ಯ ರಾಜ್ಯಗಳಿಂದ ಜಿಲ್ಲೆಗೆ, ತಾಲ್ಲೂಕುಗಳಿಗೆ, ಗ್ರಾಮಗಳಿಗೆ ಜನರು ಬರುತ್ತಿದ್ದಾರೆ. ಅವರನ್ನು ಕ್ವಾರಂಟೈನ್‌ ಮಾಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಸಲಹೆ ನೀಡಿದರು.

ಸಭೆಯಲ್ಲಿ ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ, ಎಎಸ್ಪಿ ರಾಜೀವ್‌, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ತಾಲ್ಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು.