ಗುರುವಿನ ಕಾಠಿಣ್ಯ

ಗುರುವಿನ ಕಾಠಿಣ್ಯ

ವಿದ್ಯಾರ್ಥಿಯೋರ್ವ ಕಠಿಣ ನಿಲುವಿನ ಗುರುವಿನ ಬಳಿ ಹಾಡು ಕಲಿಯುತ್ತಿದ್ದ. ಒಂದೊಂದು ಸಾಲೂ ಪಕ್ಕಾ ಆಗುವವರೆಗೂ ಗುರು ಬಿಡುತ್ತಿರಲಿಲ್ಲ. ಪದೇ ಪದೇ ಅದೇ ಸಾಲು ಹೇಳಿಸುತ್ತಿದ್ದ. ಒಂದು ಸಾಲು ಕಲಿಯಲೂ ಸಹ ವಿದ್ಯಾರ್ಥಿಗೆ ಕಠಿಣವಾಗುತ್ತಿತ್ತು. ಪರಿಪೂರ್ಣತೆ ಬರುವವರೆಗೂ ಗುರು ಬಿಡುತ್ತಿರಲಿಲ್ಲ.

ಇದರಿಂದ ಹತಾಶನಾದ ವಿದ್ಯಾರ್ಥಿ ಒಮ್ಮೆ ಹಾಡಿನ ಶಾಲೆಯಿಂದ ಓಡಿ ಹೋಗಲು ನಿರ್ಧರಿಸಿದ. ಇಷ್ಟು ಕಷ್ಟದ ಬದಲು ಬೇರೆ ಯಾವುದಾದರೂ ಕೆಲಸ ಹುಡುಕಿಕೊಂಡರಾಯಿತು ಎಂದು ಭಾವಿಸಿದ.

ಅಂದು ರಾತ್ರಿಯೇ ಆತ ಬೇರೆ ಊರಿನ ಕಡೆಗೆ ತೆರಳಿದ. ಹೀಗೆ ಸಾಗುವಾಗ ಹಳ್ಳಿಯೊಂದರಲ್ಲಿ ಸಂಗೀತ ಸ್ಪರ್ಧೆ ಇರುವುದು ಗಮನಕ್ಕೆ ಬಂದಿತು. ಕಳೆದುಕೊಳ್ಳುವುದೇನೂ ಇಲ್ಲ ಎಂದು ವಿದ್ಯಾರ್ಥಿ ಹಾಡಿನ ಸ್ಪರ್ಧೆಯಲ್ಲಿ ಭಾಗಿಯಾದ.

ಆತನ ಹಾಡು ಕೇಳಿ ನೆರೆದಿದ್ದವರೆಲ್ಲಾ ಆಶ್ಚರ್ಯ ಚಕಿತರಾದರು, ಎಂತಹ ಅದ್ಭುತ ಹಾಡು ಎಂದು ಪ್ರಶ್ನಿಸಿದರು.

ಇದರಿಂದ ಮುಜುಗರಕ್ಕೀಡಾದ ವಿದ್ಯಾರ್ಥಿ, §ಹಾಗೇನೂ ಇಲ್ಲ. ನಾನಿನ್ನೂ ಹಾಡು ಕಲಿಯುತ್ತಿದ್ದೇನೆ¬ಎಂದು ಎಷ್ಟು ಹೇಳಿದರೂ ಜನ ನಂಬಲಿಲ್ಲ.

§ನಿನಗೆ ಹಾಡು ಹೇಳಿ ಕೊಟ್ಟವರು ಯಾರು? ಅವರು ಮಹಾನ್ ಗಾಯಕರೇ ಇರಬೇಕು¬ ಎಂದು ಜನರೆಲ್ಲಾ ಹೇಳಿದರು.

ತಕ್ಷಣ ವಿದ್ಯಾರ್ಥಿ ತನ್ನ ಹಾಡಿನ ಗುರು ಬಳಿ ಮರಳಿದ.