ಕೊರೊನಾ ಆಟ! ನಮ್ಮ ಪರದಾಟ!!

ಕೊರೊನಾ ಆಟ! ನಮ್ಮ ಪರದಾಟ!!

ಕೊಟ್ರ : ಏನ್ಲೇ ಈರ ಇದು. ಈ ಹಸುರಿರೋ ಜಿಲ್ಲೆಗೆ ಯಾವನದೋ ಕಣ್ಣು ಕಿಸರಾಗೇತಿ ನೋಡು.

ಈರ : ಅದು ಹೆಂಗೆ ಹೇಳ್ತೀ?

ಕೊಟ್ರ: ಮತ್ತಿನ್ನೇನು? ಹಸುರಾಗೇತಿ ಅಂತಾ ನಿಟ್ಟುಸಿರು ಬಿಡೋದ್ರಾಗೆ ಒಬ್ಬರು ಕೆಮ್ಮಿದ್ರು. ಆಮ್ಯಾಲೆ ಇಬ್ಬರು. ಈಗ ಹತ್ತು! ರಾತ್ರಿ ಒಬ್ಬರಿಗೆ ಮುಕ್ತಿ ಸಿಕ್ತು. ಇದು ಹಿಂಗೇ ಮುಂದುವರೆದರೇ ನಮ್ಮದೂ ರೆಡ್ ಲೈಟ್ ಏರಿಯಾ ಆಗ್ತತಿ!

ಈರ: ಹೇ..ಹೇ..ಹೇ…ತಪ್ಪಾರ್ಥ ಬರೋ ಹಂಗೆ ಮಾತಾಡಬ್ಯಾಡ. ರೆಡ್ ಲೈಟ್ ಅಲ್ಲಾ ರೆಡ್ ಜೋನು.

ಕೊಟ್ರ: ಅದೇ, ಕೊರೊನಾ ಬೋನು! ಒಳಗೇ ನಾವು ಸಿಕ್ಕಿ ಹಾಕಿಕೊಂಡಿದ್ದೀವಿ. ಮನೆಯಾಗೇ ಇದ್ದು ಇದ್ದೂ ಸಾಕಾಗೇತಿ. ಈ ಕೊರೊನಾ ಕೊರೆತ ಬೇಜಾರಗೇತಿ ಬೇರೆ. ಏನಾದ್ರೂ ಮಾತಾಡೋಣ?

ಈರ: ಈ ಕೊರೊನಾ ಎಲ್ಲರಿಗೂ ರಜಾ ಕೊಡಿಸಿ, ಕೆಲವರಿಗೆ ಸಜಾ ನೀಡಿ, ತಾನು ಮಜಾ ತಗಂತಾ ಐತಿ ನೋಡು. ಜೊತೆಗೆ ಬಹಳ ಜನಕ್ಕೆ ಪಾಠ ಕಲಿಸ್ತಾ ಐತಿ! ನೀ ಏನೇನು ಪಾಠ ಕಲ್ತಿಯಪಾ?

ಕೊಟ್ರ : ಮೊದಲಿಗೇ ನಮ್ಮನ್ನು ನಾವು ಸ್ವಚ್ಛ ಇಟ್ಕೋಬೇಕು. ನಮ್ಮ ಮನೆ ಕಸ ನಾವೇ ಹೊಡಿಬೇಕು. ಹಾಳಮೂಳ ತಿನ್ನಬಾರದು, ನಾವೇ ತೊಳ್ಕಬೇಕು.

ಈರ : ಹಾಂ!

ಕೊಟ್ರ : ಬಚ್ಚಲ ಮನೆ ಮತ್ತು ಟಾಯಲೆಟ್ಟಪಾ!

ಈರ : ಮತ್ತೇ, ನೀನು ಇವುಗಳ ಜೊತೆಗೆ ಅಡುಗೆ ಮಾಡೋದು ಕಲಿತಿಲ್ಲೇನು?

ಕೊಟ್ರ: ಟ್ರೈ ಮಾಡೇನಿ. ಹೆಂಗಿದ್ರೂ ಹೆಂಡ್ರು ಅದಾರಲ್ಲ, ಅವರಿಗೆ ತರಕಾರಿ ಹೆಚ್ಚಿಕೊಡೋದು ಇಂತಾವು ಮಾಡ್ತೀನಿ.

ಈರ : ಆದರೆ, ಈ ಬರೀ ಗಂಡಸರು ಮನೆಯಾಗೆ ಇರ್ತಾರಲ್ಲಾ ಅವರದ್ದು ಹೆಂಗೇ ಅಂತಾ?

ಕೊಟ್ರ: ಹೇ ಅವರೇ ಮಾಡ್ಕೆಂತಾರೋ. ನಮ್ಮ ಕಡೇ ಮನೆ ಕಲಾವಿದ ಹೇಳ್ತಿದ್ದಾ! ಅವನ ಮನಿಯಾಗೆ ಇರೋ ಮಧುಕೇಶಪ್ಪ ಒಂದೊಂದು ದಿನಾ ಒಂದೊಂದು ಡಿಷ್ ಮಾಡ್ತಾನಂತಪಾ? ಬರ್ಗರೂ, ಉತ್ತಪ್ಪ, ಮಸಾಲಾ ಆಮ್ಲೇಟು ಹಿಂಗೇ ಒಂದು ದೊಡ್ಡ ಪಟ್ಟೀನೇ ಹೇಳಿದಾ!

ಈರ: ಅವರಿಗೇ, ಆ ಐಟಂ ಹೆಂಗೆ ಸಿಗ್ತಾವು?

ಕೊಟ್ರ: ಸಿಂಪಲ್ಲಲೇ! ಅವರಿವರು ಇವರಿಗೆ ಕಳಿಸಿಕೊಟ್ಟ ಸಾರು, ಪಲ್ಯ, ಇಡ್ಲಿ ಹಿಟ್ಟು ಸ್ವಲ್ಪ ಉಳಿಸ್ಕೆಂಡು ಫ್ರಿಡ್ಜಿನಾಗೆ ಇಟ್ಕಂಡಿರ್ತಾರಂತೆ. ಟೋಸ್ಟ್ ತಿನ್ನಂಗನಿಸ್ತು ಅಂದ್ರೆ ತಂಗಳು ಸಾರನ್ನ ಬಿಸಿ ಮಾಡ್ಕೆಂತಾರಂತೆ. ಅದಕ್ಕೆ ಚಟ್ನಿ ಪುಡಿ ಮಿಕ್ಸ್ ಮಾಡಿ ಎರಡು ಬ್ರೆಡ್ಡಿನ ಪೀಸೊಳಗೆ ಹಚ್ಕೆಂಡು ತಿಂತಾರಂತೆ. ಇನ್ನೂ ಬರ್ಗರ್ ತಿನ್ನಂಗೆ ಆಸೆ ಆತು ಅಂದ್ರೆ ಉಳಿದಿದ್ದ ಪಲ್ಯ, ಪುಂಡಿಸೊಪ್ಪು ಬಿಸಿ ಮಾಡ್ತಾರೆ. ಅದನ್ನು ಬನ್ನಿನೊಳಗೆ ತುರುಕಿ ಬಾಯಿಯೊಳಗೆ ಹಾಕ್ಯಂತಾರಂತೆ! ಇದೇ ರೀತಿ, ರಾತ್ರಿ ಉಳಿದ ಇಡ್ಲಿ ಹಿಟ್ಟಿಗೆ ಈರುಳ್ಳಿ ಪೀಸು ಕೊತ್ತಂಬ್ರಿ ಕಲಿಸ್ಕೆಂಡ್ರೆ ಹೋಂ ಆನಿಯನ್ ಉತ್ತಪ್ಪ, ಮೊಟ್ಟೆ ಒಡೆದು ತಂಗಳು ಸಾರಿನಾಗೆ ಮಿಕ್ಸ್ ಮಾಡ್ಕೆಂಡು, ಕಾದ ಹಂಚಿನ ಮೇಲೆ ಸುರುವಿದ್ರೇ ಮಸಾಲೆ ಆಮ್ಲೆಟ್ ಆಗ್ತತಿ ಅಂದಾ!

ಈರ: ಇವರದ್ದೇ ಒಂದು ರೆಸಿಪಿ ಆತಲ್ಲೋ!

ಕೊಟ್ರ: ಅವನೂ ಇನ್ನೊಂದು ರೆಸೀಪಿ ಹೇಳಿದಾ! ಈ ದ್ರಾಕ್ಷಿನಾ ತಿಂಗಳಗಂಟಲೇ ಬಾಟ್ಲಿಯಾಗೆ ಇಟ್ಟು ಹುಳಿ ರಸ ಮಾಡ್ಕ್ಯಬಹುದಂತೆ. ಕಾಂಟ್ರ್ಯಕ್ಟರ್ ಮೌನಪ್ಪ, ಜಲ್ಲಿ ವಾಲಿ, ಪಾಲಿಸಿ ಉಮ್ಮಣ್ಣ ಇದನ್ನಾ ತಂದಿದ್ರಂತೆ! ಇವರ ಮನಿಯಾಗೆ ಹೆಂಗಸರು ಯಾರೂ ಇಲ್ಲ ಅಂತಾ ಅಲ್ಲಿಗೆ ಗುಟ್ಟಾಗಿ ಬಂದು ಔಷಧಿ ಕುಡ್ದಂಗೆ ಕುಡುದು ಹೋದ್ರಂತೆ.

ಈರ : ಔಷಧಿ ಅಂದ ತಕ್ಷಣ ನೆನಪಾತು ನೋಡು. ಆ ಕಡೆ ಮನೆ ಕಲಾವಿದ ಮತ್ತವನ ಫ್ರೆಂಡು, ಪ್ರತಿ ದಿನಾ ಸಂಜೆ ಕೊರೊನಾ ಕೆಮ್ಮಿನ ಔಷಧಿ ಕುಡೀತಾರಂತಲ್ಲಾ! ಎಲ್ಲಿ?

ಕೊಟ್ರ: ಆ ನಡುಮನೆ ನರೇಂದ್ರಣ್ಣನ ಮನೆಯಾಗೆ! ನಮ್ಮ ಮಹಾಲಿಂಗಪ್ಪ ಮೇಷ್ಟ್ರು ಮಗ ಡಾಕ್ಟ್ರು ಇವರನ್ನು ಒಂದೆರಡು ಸರ್ತಿ ಕರೆಸಿ, ಇದೂ ಗಂಟಲಿಗೆ ಬಹಳ ಒಳ್ಳೆಯದು. ಕೊರೊನಾ ಬರಲ್ಲ ಕುಡಿಯಿರಿ ಅಂತಾ ಕುಡಿಸಿದ್ದರಂತೆ. ಆ ನರೇಂದ್ರಣ್ಣನ ಪರಿಚಯ ಮಾಡ್ಕೆಂಡ ಇವರು, ದಿನಾ ಸಾಯಂಕಾಲ ಆ ಔಷಧಿ ಕುಡಿಯಾಕೆ ಹೋಗ್ತಾರಂತೆ. ಜೊತೆಗೆ ಇವರ ಸ್ನೇಹಿತರನ್ನೂ ಕರಕೊಂಡು ಹೋಗ್ತಾರಂತೆ. ಪಾಪ ನರೆಂದ್ರಣ್ಣನ ಹೆಂಡ್ತಿ ನಾಗರತ್ನಮ್ಮ ಬೇಜಾರಿಲ್ಲದಂಗೆ ಔಷಧಿ ಮಾಡಿ ಕೊಡ್ತಾರಂತೆ ನೋಡು!

ಈರ : ಹಂಗಾರೇ, ನಿಜವಾಗಲೂ ಈ ಕೊರೊನಾ ಕೆಮ್ಮಿಗೆ ಅವರು ಔಷಧೀನ ಕಂಡು ಹಿಡಿದಾರೆ ಅಂದಂಗಾತು. ಆ ಔಷಧಿ ಹೆಸರೇನು!?

ಕೊಟ್ರ : ಶುಂಠಿ, ಮೆಣಸಿನ ಕಷಾಯ…!

ಆರ್.ಟಿ. ಅರುಣ್‌ಕುಮಾರ್
arunartist@gmail.com