ಚಿನ್ನ – ಬೆಳ್ಳಿ ಸ್ವರ್ಣಕಾರರ ಉದ್ಯಮಕ್ಕೆ ಕೋವಿಡ್- 19 ಪರಿಹಾರಕ್ಕಾಗಿ ಆಗ್ರಹ

ದಾವಣಗೆರೆ, ಮೇ 8- ಕೋವಿಡ್- 19 ಪರಿಹಾರವನ್ನು ಚಿನ್ನ-ಬೆಳ್ಳಿ ಸ್ವರ್ಣ ಕಾರರ ಉದ್ಯಮಕ್ಕೆ ಕೊಡುವಲ್ಲಿ ರಾಜ್ಯ ಸರ್ಕಾರ ನಿರಾಸಕ್ತಿ ತೋರಿಸಿರುವುದಾಗಿ ಕರ್ನಾಟಕ ಸ್ವರ್ಣಕಾರ ಸಂಘದ ದಾವಣ ಗೆರೆ ಘಟಕವು ಆರೋಪಿಸಿದೆಯಲ್ಲದೇ, ತಮ್ಮ ಉದ್ಯಮಕ್ಕೂ ಪರಿಹಾರ ಘೋಷಿಸುವಂತೆ ಒತ್ತಾಯಿಸಲಾಗಿದೆ.  

ಈ ಸಂಬಂಧ ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರ ಆಪ್ತ ಕಾರ್ಯದರ್ಶಿ ಸಿ.ಹೆಚ್. ದೇವರಾಜ್ ಮತ್ತು ಜಿಲ್ಲಾಧಿಕಾರಿಗಳಿಗೆ ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. 

ಲಾಕ್ ಡೌನ್ ಆಗಿ ಇಲ್ಲಿಗೆ ಸುಮಾರು 46 ದಿನಗಳಾಯಿತು. ಬಡ ಬಗ್ಗರಿಗೆ ಸರ್ಕಾರ ಪ್ಯಾಕೇಜ್ ಗಳನ್ನು ಘೋಷಿಸುತ್ತದೆ. ಆದರೆ, ಈ ಸಂದರ್ಭದಲ್ಲಿ ಚಿನ್ನ – ಬೆಳ್ಳಿ ಕೆಲಸಗಾರರೂ ಕೂಡ ಬಡತನ ರೇಖೆಯಲ್ಲಿ ಬರುತ್ತಾರೆಂದು ಸರ್ಕಾರಕ್ಕೆ ತಿಳಿಸುವ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರುಗಳು ಸಾಕಷ್ಟು ಹಿಂದೆ ಬಿದ್ದಿದ್ದಾರೆ ಎಂದು ಘಟಕವು ಆಪಾದಿಸಿದೆ.

ಕರ್ನಾಟಕ ಸ್ವರ್ಣಕಾರ ಸಂಘದಲ್ಲಿ ಚಿನ್ನ-ಬೆಳ್ಳಿ ಕೆಲಸಗಾರರು ದೈವಜ್ಞ ಸಮಾಜ, ವಿರಾಟ ವಿಶ್ವಕರ್ಮ ಬಳಗ, ಶೀಲವಂತ ಮತ್ತು ಚಿತ್ರಗಾರರು ಇನ್ನು ಮುಂತಾದ ಅದರಲ್ಲೂ ಮುಖ್ಯವಾಗಿ ಸಾಂಪ್ರದಾಯಿಕ ಚಿನ್ನ-ಬೆಳ್ಳಿ ಕೆಲಸಗಾರರು ತುಂಬಾ ಕಷ್ಟದಲ್ಲಿದ್ದಾರೆ ಎಂದು ಅಳಲಿಡಲಾಗಿದೆ.

ಕೇಂದ್ರ ಸರ್ಕಾರದ ಜಿಜೆಇಪಿಸಿ ಸಂಸ್ಥೆಯಿಂದ ಪರಿಚಯ ಕಾರ್ಡ್ ಇರುವವರಿಗೆ ಸಾಕಷ್ಟು ಜನ ಪರಿಚಯ ಕಾರ್ಡ್ ಮಾಡಿದೆ. ಇದ್ದವರಿಗೆ ಒಂದು ಆನ್ಲೈನ್ ಲಿಂಕ್ ಕಳಿಸಿ ಅದರಲ್ಲಿ ಅವರ ಬಯೋಡೇಟಾ ಕಳಿಸಲು ಹೇಳಿದ ಪ್ರಕಾರವಾಗಿ ಆನ್ ಲೈನ್ ನಲ್ಲಿ ಸುಮಾರು ದಕ್ಷಿಣ ಭಾರತದಲ್ಲಿ 16 ಸಾವಿರ ಜನರ ಬಯೋಡೇಟಾ ಹೋಗಿದ್ದು, ಅದರಲ್ಲಿ ಇಲ್ಲಿವರೆಗೂ ಕೇವಲ 1,200 ಜನರ ಬಯೋಡೇಟಾ ಅಪ್ಡೇಟ್ ಆಗಿದೆ. ಜನರ ಬಯೋಡೇಟಾ ಹೋಗಿದೆ. ಆದರೆ ಕರ್ನಾಟಕ ಒಂದರಲ್ಲೇ ಸುಮಾರು ಲಕ್ಷಾಂತರ ಜನರು ಈ ವೃತ್ತಿಯಲ್ಲಿ ತೊಡಗಿದ್ದಾರೆ. ಇಲ್ಲಿಯವರೆಗೂ ಈ ಸಂಸ್ಥೆಯಿಂದ ಇನ್ನೂ ಅರ್ಜಿದಾರರ ಮಾಹಿತಿ ಕಲೆ ಹಾಕುತ್ತಿದೆಯೇ ಹೊರತು ಪರಿಹಾರ ಬಂದಿಲ್ಲ ಎಂದು ದೂರಲಾಗಿದೆ.

ಮುಂದಿನ ಆರು ತಿಂಗಳವರೆಗೆ ಈ ಉದ್ಯಮ ಅಭಿವೃದ್ಧಿ ಹೊಂದುವುದು ತುಂಬಾ ಕಷ್ಟ. ಆದ್ದರಿಂದ ಸರ್ಕಾರ ಸಾಂಪ್ರದಾಯಿಕ ಚಿನ್ನ-ಬೆಳ್ಳಿ ಕೆಲಸಗಾರರಿಗೆ ಸಹಾಯಕ್ಕೆ ಮುಂದೆ ಬರಬೇಕು. ಕರ್ನಾಟಕದಲ್ಲಿ ಸಾಂಪ್ರದಾಯಿಕ ಚಿನ್ನ-ಬೆಳ್ಳಿ ಕೆಲಸಗಾರರ ನಿಗಮ ಮಂಡಳಿ ಸ್ಥಾಪನೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಬೇಕು ಎಂದು ಘಟಕದ ಸದಸ್ಯ ರಮೇಶ್ ರಾಯ್ಕರ್ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಘಟಕದ ಸದಸ್ಯರಾದ ಮುರಳಿಧರ್ ಆಚಾರ್, ರೋಹಿತ್ ರಾಯ್ಕರ್, ರವೀಂದ್ರ ಚಾರ್ ಸೇರಿದಂತೆ ಇತರರು ಮನವಿ ಸಲ್ಲಿಸಿದರು.