ಮತ್ತೆ ನಕ್ಕನು ಬುದ್ಧ!

ಮತ್ತೆ ನಕ್ಕನು ಬುದ್ಧ!

ಈರ : ನಿನ್ನೆ ಬೆಳಿಗ್ಗೆ ಬುದ್ಧ ದೇವನಿಗೆ ನಮಸ್ಕಾರ ಮಾಡಿ ಪ್ರಾರ್ಥಿಸಿದೆ.

ಕೊಟ್ರ: ಏನಂತಾ?

ಈರ: ಕೊರೊನಾ ಕತ್ತಲನ್ನು ಓಡಿಸಿ, ಜಗದಲ್ಲಿ ಬೆಳಕನ್ನು ಮೂಡಿಸಪ್ಪಾ ಎಂದು.

ಕೊಟ್ರ: ಒಳ್ಳೆಯ ಕೆಲಸ ಮಾಡೀದಿ. ಪ್ರಾರ್ಥನೆಗಳು ಮನೋಸ್ಥೈರ್ಯ ತುಂಬುತ್ತವೆ. ಆದರೆ, ಕೇವಲ ಪ್ರಾರ್ಥನೆ ಮಾಡ್ತಾ ಕುಂತ್ರೆ ಬೆಳಕು ಮೂಡೋದಿಲ್ಲ. ಮನಸ್ಸಿನ್ಯಾಗಿರೋ ಕತ್ತಲನ್ನು ನಾವೇ ಓಡಿಸಬೇಕು. ಒಳ್ಳೆಯ ಕೆಲಸ ಮಾಡಬೇಕು ಅಂತಾ ನಮ್ಮ ಗುರುಗಳು ಹೇಳ್ತಿದ್ರು.

ಈರ: ಮನಸ್ಸಿನ ಕತ್ತಲನ್ನು ಓಡಿಸೋದು ಹೆಂಗೆ?

ಕೊಟ್ರ :  ನೋಡೋ ನಾವು ಬುದ್ಧ, ಬಸವ, ಗಾಂಧೀ, ಅಂಬೇಡ್ಕರ್, ಮುಂತಾದವರ ಫೋಟೋಗಳಿಗೆ ನಮಸ್ಕಾರ ಮಾಡಿ, ಪೂಜೆ ಮಾಡಿ
ಕೈ ತೊಳ್ಕೊಂಡು ಬಿಡ್ತೇವಿ. ಬೆಳಕು ಬರಲಿ ಅಂದ್ರೆ ಹೆಂಗೆ ಬರ್ತತಿ?

ಈರ: ಅವರು ದೇವರಲ್ಲೇನು? ಬೆಳಕು ಕೊಡ್ತಾರಪ್ಪ.

ಕೊಟ್ರ: ನಮ್ಮ ಗುರುಗಳು ಹೇಳ್ತಿದ್ರು. ದೇವರು ನಮ್ಮ ಕಲ್ಪನೆಯಲ್ಲಿರುವ ಅಗೋಚರ ಶಕ್ತಿ. ಬುದ್ಧ, ಬಸವ ಇವರೆಲ್ಲಾ ಮನುಷ್ಯರು. ಮಾನವತಾವಾದಿಗಳು. ಮನಸ್ಸನ್ನು ಸಾಕ್ಷಾತ್ಕಾರಗೊಳಿಸಿಕೊಂಡ ಮಹಾ ಪುರುಷರು. ಆದರೆ, ನಾವು ಇವರನ್ನು ಫೋಟೋ ಫ್ರೇಮಿನಾಗೆ ಹಾಕ್ಯಂಡು, ಮೂರ್ತಿ ಮಾಡಿ ದೇವರು ಅಂತಾ ಬರೇ ಪೂಜೆ ಮಾಡೋದಿಕ್ಕೆ ಇಟ್ಟುಕೊಂಡಿದ್ದೀವಿ.             


ಈರ: ಅಷ್ಟು ಸಾಕು. ಇವರಿಗೆ ಪೂಜೆ ಮಾಡಿದ್ರೆ ಬೆಳಕು ಮೂಡೋದಿಲ್ಲೇನು?

ಕೊಟ್ರ: ತಮ್ಮಾ ನಾವೆಲ್ಲಾ ಕೇವಲ ಬಲ್ಪಿನ ಮುಂದೆ ನಿಂತು ಸ್ವಿಚ್ ಹಾಕಿದ್ರೆ ಬೆಳಕು ಬರ್ತತಿ ಅಂದುಕೊಂಡೇವಿ. ಅದರೊಳಗೆ ಕರೆಂಟು ಪಾಸಾಗಬೇಕು. ಅಂದರೇ ಬಲ್ಬು ಹತ್ತುತ್ತೆ. ಕರೆಂಟೇ ಇಲ್ಲಾ ಅಂದ್ರೇ? ಬಲ್ಪು ಹತ್ತೋದಿಲ್ಲ. ಬೆಳಕು ಮೂಡೋದಿಲ್ಲ. ಅದೇ ರೀತಿ, ಮಹಾತ್ಮರುಗಳ ಫೋಟೋಗಳಿಗೆ ಕೇವಲ ನಮಸ್ಕಾರ ಮಾಡಿದ್ರೆ ಅಷ್ಟೇ ಸಾಲದು. ಅವರ ವಿಚಾರಧಾರೆಗಳ ಕರೆಂಟನ್ನು ನಮ್ಮ ಮನಸ್ಸಿನೊಳಗೆ ಹರಿಸಬೇಕು. ಬರೇ ಓದೋದರಿಂದ ಅಲ್ಲಾ, ಪಾಲಿಸೋದರಿಂದ. ಹಿಂಗೆ ಮಾಡ್ತಾ ಹೋದರೆ ಜೀವನದಲ್ಲಿ ಬೆಳಕು ಮೂಡಬಹುದು ನೋಡು.

ಈರ: ಅರ್ಥಾತು. ಆದರೆ, ಎಲ್ಲಿ ನೋಡಿದ್ರೂ ಇವರ ವಿಚಾರ, ಪುಸ್ತಕಗಳಿಗಿಂತ ಇವರ ಫೋಟೋ, ಸ್ಟ್ಯಾಚುಗಳೇ ಕಾಣ್ತವಲ್ಲಾ?

ಕೊಟ್ರ: ಲೇ ನಮಗೆಲ್ಲಾ ವಿಚಾರ ಬೇಕಿಲ್ಲ. ಆಚಾರ ಬೇಕು. ಆಡಂಬರ ಬೇಕು. ಅಷ್ಟೇ ಅಲ್ಲ ಈ ಮಹಾಪುರುಷರನ್ನು ನಾವೆಲ್ಲಾ ಕಾಂಟ್ರ್ಯಾಕ್ಟ್ ತಗೊಂಡು ಬಿಟ್ಟೇವಿ. ಅವರ ಕಾಪಿರೈಟ್ ನಮ್ಮದೇ ಅಂತಾ. ಈಗ, ಅವರ ಫೋಟೋ ಇಟ್ಗೊಂಡು ನಮ್ಮದೇ ಒಂದು ಜಾತಿ, ಸಮಾಜ, ದೇಶದ ಸ್ವತ್ತು ಅಂತ ಸೃಷ್ಟಿಯಾಗಿ ಬಿಟ್ಟೇತಿ.

ಈರ: ಸ್ವಲ್ಪ ಬಿಡಿಸಿ ಹೇಳು.

ಕೊಟ್ರ: ನೋಡಪಾ, ಜಾತೀನೇ ಇರಬಾರದು. ನಾವೆಲ್ಲಾ ಒಂದೇ ಎಂದ ಬಸವಣ್ಣನವರನ್ನ ಲಿಂಗಾಯತರು ಕಾಂಟ್ರ್ಯಾಕ್ಟ್ ತಗೊಂಡು ಬಿಟ್ಟೇವಿ. ದಲಿತ ಮುಖಂಡರಾದ ತಿಪ್ಪೇಸ್ವಾಮಿ ಅವರು ಬೇಸರದಿಂದ ಹೇಳ್ತಿದ್ರು. ಸಂವಿಧಾನದ ಸೃಷ್ಟಿಕರ್ತ ಅಂಬೇಡ್ಕರ್‌ರನ್ನ ಬಹಳಷ್ಟು ದಲಿತ ಸಂಘಟನೆಗಳು ಕಾಂಟ್ರ್ಯಾಕ್ಟ್ ತಗೊಂಡಾವೆ ಅಂತ. ಇನ್ನು ಭಾರತದ ಬುದ್ಧನನ್ನು ಚೈನಾ ದೇಶ ಕಾಂಟ್ರ್ಯಾಕ್ಟ್ ತಗೊಂಡೇತಿ. ಬುದ್ಧನ ಬರ್ತ್ ಪ್ಲೇಸ್ ನಮ್ಮ ದೇಶದಲ್ಲಿಯೇ ಇರೋದು ಅಂತಾ ಇತಿಹಾಸವನ್ನೇ ಅವರು ತಿರುಚೋಕೆ ಹೊಂಟಾರೆ. ಬಿಹಾರದ ಬುದ್ಧ ಗಯಾ. ಇವರ ದೃಷ್ಟಿಯೊಳಗೆ ಇಲ್ಲ. ಅದು ಗಯಾ! ವಾಸ್ತವ ಅಂದ್ರೆ, ನಾವೆಲ್ಲಾ ಯಾವ ರಿಜಿಸ್ಟ್ರಾರ್ ಆಫೀಸಿಗೆ ಹೋಗಿ ಹಕ್ಕು ತಗೊಂಡು ಬಂದೀವಿ. ಇವರ ಹಕ್ಕು ನಿಮ್ಮದೇ ಅಂತಾ ಸಹಿ ಹಾಕಿ, ಸೀಲು ಹೊಡ್ದೋರು ಯಾರು ಒಂದೂ ಗೊತ್ತಿಲ್ಲ ನೋಡು.

ಈರ: ಅದು ನಿಜ. ಆ ಮಹಾಪುರುಷರು ನಮ್ಮ ಸ್ವತ್ತು ಅನ್ನೋದನ್ನ ನಾವು ಬಿಡಬೇಕು. ಅವರು ಎಲ್ಲಾ ಮನುಷ್ಯರಿಗೆ ಬೇಕಾದವರು. ಅವರು ನುಡಿದಂತೆ ನಡೆದವರು. ಅವರ ನುಡಿಗಳು ನಮ್ಮ ನಡೆಯಾಗಬೇಕು.

ಕೊಟ್ರ : ಮೊನ್ನೆಯಿಂದಾ, ನಮ್ಮ ಜನಾ ಎಣ್ಣೆ ಹೊಡೆದು ವಾಲಾಡ್ತಾ ನಡೆಯೋದನ್ನ ನೋಡಿ ಗೌತಮ ಬುದ್ಧ ಮತ್ತೆ ನಕ್ಕಾನ. ‘ಆಸೆಯೇ ದುಃಖಕ್ಕೆ ಮೂಲ’ ಎಂಬ ತನ್ನ ನುಡಿಯನ್ನ ಈಗ ಚೇಂಜ್ ಮಾಡ್ಯಾನಂತೆ.

ಈರ : ಏನಂತಾ?

ಕೊಟ್ರ : ಚಟವೇ ಚಟ್ಟಕ್ಕೆ ಮೂಲ !

ಈರ : ಸರಿಯಾಗಿ ಐತಿ ನೋಡು. ಬುದ್ಧ, ಬಸವ ಇಂತಹ ಮಹಾತ್ಮರ ಪ್ರಭಾವ ಜಗತ್ತಿನ ತುಂಬಾ ಹರಡಬೇಕಿತ್ತು. ಎಲ್ಲರೂ ಬುದ್ಧಿ ಕಲೀತಿದ್ವಿ.
ಈ ಕಾಲದಲ್ಲಿ ನಮ್ಮ ಜನಕ್ಕೆ ಬುದ್ಧಿ ಕಲಿಸೋಕೆ ಒಬ್ಬ ಅವತರಿಸಬೇಕು. ಪ್ರಪಂಚಾನೇ ನನ್ನದು, ನಾನೇ ಹಕ್ಕುದಾರ ಅನ್ನೋ ಜೀವಿ ಸೃಷ್ಟಿಯಾಗಬೇಕು ನೋಡು. ಆವಾಗ ಎಲ್ಲರೂ ಒಬ್ಬರ ಕಂಟ್ರೋಲಿಗೆ ಬರ್ತಾರೆ. ಆ ಜೀವಿಗೆ ಹೆದರಿ ನಡ್ಕೋತಾರೆ.

ಕೊಟ್ರ: ಸದ್ಯಕ್ಕೆ ಆ ಜೀವಿ ಸೃಷ್ಟಿಯಾಗೈತಲ್ಲಾ.

ಈರ: ಯಾರು?

ಕೊಟ್ರ : ಕೊರೊನಾ !!!

ಆರ್.ಟಿ. ಅರುಣ್‌ಕುಮಾರ್
arunartist@gmail.com