ವಿದ್ಯುತ್ ಬಿಲ್‌ : ಗೊಂದಲದಲ್ಲಿ ಗ್ರಾಹಕ

ದಾವಣಗೆರೆ, ಮೇ 7- ಕರ್ನಾಟಕ ರಾಜ್ಯ ವಿದ್ಯುತ್ ನಿಗಮ ಹಗಲು ದರೋಡೆ ಮಾಡುತ್ತಿದೆ ಯೇ? ಈ ಬಾರಿ ಬಂದಿರುವ ವಿದ್ಯುತ್ ಬಿಲ್ ನೋಡಿದ ಜನರು ಇಂತಹದ್ದೊಂದು ಪ್ರಶ್ನೆ ಕೇಳಲಾರಂಭಿಸಿದ್ದಾರೆ. ನಿಗಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಇಲಾಖೆ ತನ್ನ ಗ್ರಾಹಕರಿಗೆ ಬಿಲ್ ನೀಡಿಲ್ಲ, ಆದರೆ ಮೇ ತಿಂಗಳಂದು 3 ತಿಂಗಳ ಬಿಲ್ ನೀಡಿದೆ.

ಹಿಂದಿನ ಎರಡು ತಿಂಗಳು ಎಷ್ಟು ಯೂನಿಟ್ ಬಳಸಿರಬಹುದೆಂಬ ಅಂದಾಜಿನ ಮೇಲೆ ಇಲಾಖೆ ಬಿಲ್ ಮಾಡಿದೆ. ಆದರೆ ಗ್ರಾಹಕರಿಗೆ ನೀಡಿಲ್ಲ. ಈ ಮೊತ್ತವನ್ನು ಹಲವಾರು ಗ್ರಾಹಕರು ಆನ್‌ಲೈನ್ ಮೂಲಕ ಪಾವತಿಸಿದ್ದಾರೆ. ಆದರೂ ಕೆಲವರ ಪಾವತಿಯನ್ನು ವಜಾ ಗೊಳಿಸದೆ ಬಿಲ್ ನೀಡಿ ಗ್ರಾಹಕರಿಗೆ ಮತ್ತಷ್ಟು ಶಾಕ್ ನೀಡಿದೆ.

ಮೇ ತಿಂಗಳಲ್ಲಿ ನೀಡಿರುವ ಬಿಲ್‌ನಲ್ಲಿ ಮೂರು ತಿಂಗಳ ಯೂನಿಟ್‌ಗೆ ಲೆಕ್ಕ ಹಾಕಿ ಬಿಲ್ ನೀಡಿ, ಅದರಲ್ಲಿ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಅಂದಾಜಿಸಿ ನೀಡಲಾಗಿದ್ದ ಬಿಲ್ ಮೊತ್ತವನ್ನು ಕಡಿತಗೊಳಿಸಲಾಗಿದೆ. ಆದರೆ ಸ್ಲಾಬ್ ಲೆಕ್ಕದಲ್ಲಿ ಬಿಲ್ ನೀಡಿದ್ದರಿಂದ ಹೊರೆ ಯಾಗುತ್ತದೆ ಎಂದು ಗ್ರಾಹಕರು ದೂರಿದ್ದಾರೆ.

ಸಾಮಾನ್ಯವಾಗಿ ಆರಂಭದ ಕೆಲ ಯೂನಿಟ್‌ಗಳಿಗೆ ಕಡಿಮೆ ಮೊತ್ತ, ನಂತರದ ಇಂತಿಷ್ಟು ಯೂನಿಟ್‌ಗಳಿಗೆ ಹೆಚ್ಚಿನ ಮೊತ್ತವಿರುತ್ತದೆ. ಆದರೆ ಮೂರು ತಿಂಗಳ ಯೂನಿಟ್ ಕೂಡಿದಾಗ ಆರಂಭದ ಯೂನಿಟ್‌ಗೆ ನೀಡುವ ರಿಯಾಯಿತಿಯಿಂದ ವಂಚಿತರಾಗುತ್ತೇವೆ. ಇದು ಇಲಾಖೆಯ ಹಗಲು ದರೋಡೆ ಎಂದು ಕೆಲವರು ಆರೋಪಿಸಿದ್ದಾರೆ.

ನಗರದ ನ್ಯಾಯವಾದಿ ರೇವಣ್ಣ ಬಳ್ಳಾರಿಯವರೂ ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಇಲಾಖೆಗೆ ಎಚ್ಚರಿಸಿದ್ದಾರೆ.

ಇಲಾಖೆ ಗ್ರಾಹಕರಿಂದ ಹೆಚ್ಚಿನ ಹಣ ಸಂಗ್ರಹಿಸುತ್ತಿದೆ. ಹೆಚ್ಚಿನ ಬಿಲ್ ಮೊತ್ತವನ್ನೂ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿ ಇಲಾಖೆಗೆ ನೋಟಿಸ್ ನೀಡಿದ್ದಾರೆ.

ನೋಟಿಸ್ ತಲುಪಿದ ಮೇಲೂ  ಗ್ರಾಹಕರಿಗೆ ಆಗುವ ಅನ್ಯಾಯ ಸರಿಪಡಿಸದಿದ್ದರೆ ಹಗಲು ದರೋಡೆ ತಡೆಯಲು ಉಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಎಲ್ಲಾ ನೊಂದ ಗ್ರಾಹಕರ ಪರವಾಗಿ ನಿರ್ದೇಶನ ಕೋರಿ ಪರಿಹಾರ ಕೇಳುವುದೇ ಸೂಕ್ತ ಮಾರ್ಗ ಎಂದವರು ಅಭಿಪ್ರಾಯಿಸಿದ್ದಾರೆ.

ಈ ಕೂಡಲೇ ಪ್ರತಿ ತಿಂಗಳ ಅಂದರೆ ಮಾರ್ಚ್, ಏಪ್ರಿಲ್ ತಿಂಗಳಿಗೆ, ಮುಂದೆ ಬರುವ ತಿಂಗಳಿಗೆ ಸಹ ಪ್ರತ್ಯೇಕ ಬಿಲ್ ನೀಡಿ ಈ ಗೊಂದಲಕ್ಕೆ ತೆರೆ ಎಳೆಯಬೇಕು.  

ಸರ್ಕಾರದ ಆದೇಶ ಮಾರ್ಚ್ 2020 ರ ಬಿಲ್ ಸಂಗ್ರಹ ಮಾಡಬಾರದಿತ್ತು ಎಂದು
ಇತ್ತೇ ವಿನಃ, ಇಲಾಖೆಯವರು ಬಿಲ್ ಕೊಡ ಬಾರದು, ಮೀಟರ್ ರೀಡಿಂಗ್ ಮಾಡಬಾರದು ಎಂದು ಅಲ್ಲ. ಇಲಾಖೆಯವರು ಮೈ ಗಳ್ಳತನ ಮಾಡಿರುವುದು ಈ ಗೊಂದಲಕ್ಕೆ ಕಾರಣವಾಗಿದೆ ಎಂದವರೂ ಹೇಳಿದ್ದಾರೆ.