ಭಾವೈಕ್ಯತೆಯ ಬುನಾದಿ ಶಿಕ್ಷಣ

ಭಾವೈಕ್ಯತೆಯ ಬುನಾದಿ ಶಿಕ್ಷಣ

‘ರಾಷ್ಟ್ರೀಯ ಐಕ್ಯತೆಯನ್ನು ಇಟ್ಟಿಗೆ ಹಾಗೂ ಗಾರೆಯಲ್ಲಿಯಾಗಲಿ ಚಾನ ಮತ್ತು ಸುತ್ತಿಗೆಯಿಂದಾಲಿ ಕಟ್ಟಲಾಗುವುದಿಲ್ಲ. ಅದು ಜನರ ಜೀವನ ಮತ್ತು ಹೃದಯದಲ್ಲಿ ನಿಶ್ಯಬ್ಧವಾಗಿ ಬೆಳೆಯಬೇಕು. ಇದಕ್ಕೆ ಒಂದೇ ಕ್ರಮವೆಂದರೆ ಶಿಕ್ಷಣದ ಕ್ರಮ’

– ಡಾ. ಎಸ್. ರಾಧಕೃಷ್ಣನ್

ಾರತದಲ್ಲಿ ಆಂಗ್ಲರಿಂದ ಪ್ರವರ್ತಿತವಾದ ಶಿಕ್ಷಣ ಪದ್ಧತೆ, ಭಾರತದ ಜಾಯಮಾನಕ್ಕೂ, ಅಗತ್ಯಕ್ಕೂ ಹೊಂದುವಂತೆ ಹೊಸ ರೀತಿಯ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಹಾಗೂ ಈ ಮಣ್ಣಿನ ಮಕ್ಕಳ ಪ್ರತಿಭೆಯನ್ನು ಹೊರಕ್ಕೆಳೆಯುವ, ರಾಷ್ಟ್ರನಿಷ್ಠೆಯನ್ನು ರೂಢಿಸಬಲ್ಲ ಹೊಸ ಶಿಕ್ಷಣ ಪದ್ಧತಿ ಬೇಕಾಗಿದೆ. ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ಇದು ಕೇವಲ ಘೋಷಣೆ ಮಾತ್ರವಾಗಿ ಉಳಿದಿದೆ. ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಪೊಳ್ಳು ಮಾತುಗಳಂತೆಯೇ ಶೈಕ್ಷಣಿಕ ಘೋಷಣೆಗಳೂ ಆಗಿವೆ, ಅವುಗಳಂತೆ ಇದೂ ಸಹ ಮಾತಿನಷ್ಟೇ ಉಳಿದಿದೆ” ವಿಶ್ವವೇ ಒಂದು ಕುಟುಂಬ, ನಾವೆಲ್ಲರೂ ಅದರ ಸದಸ್ಯರು’ ಎಂಬ ವಿಶ್ವಕವಿ ರವೀಂದ್ರನಾಥ ಟ್ಯಾಗೋರರ ವಾಣಿಯಂತೆ ಭಾವೈಕ್ಯತೆ ಅರ್ಥವು ರಾಷ್ಟ್ರದ ಜನರಲ್ಲಿ ಯಾವುದೇ ಭೇದಭಾವವಿಲ್ಲದೆ, ಪರಸ್ಪರ ಸಹಾಯ, ಸಹಕಾರ ಸಮಾನತೆಯಿಂದ ನಾವೆಲ್ಲಾ ಭಾರತೀಯರು ಎಂಬ ವಿಶಾಲ ಮನೋಭಾವನೆಯಾಗಿದೆ. ಇದರ ಪರಿಣಾಮದಿಂದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಎಲ್ಲಾ ಭಾರತೀಯರು ಏಕ ಲಾಂಛನದಡಿ ಒಗ್ಗೂಡಿ, ಶಾಂತಿ, ಅಹಿಂಸೆ, ತ್ಯಾಗದಿಂದ ದೇಶಕ್ಕೆ ಸ್ವಾತಂತ್ರ್ಯವನ್ನು ಪಡೆದರು.

ಭಾರತ ವರ್ಷದ ಪರಂಪರೆಯಲ್ಲಿ ಸಾಮಾಜಿಕ ಗಣ್ಯತೆ ಪಡೆದಿದ್ದವರು ಶ್ರೀಮಂತ ವ್ಯಕ್ತಿಗಳಲ್ಲಿ, ಅಧಿಕಾರಸ್ಥರಲ್ಲಿ, ರಾಜನೂ ಅಲ್ಲ, ಆಚಾರ್ಯ, ಆಚಾರ್ಯರನ್ನು ದೇವರ ಸಮಾನರೆಂದು ಪರಿಗಣಿಸಲಾಗಿತ್ತು, ಬಾಲ್ಯಾವಸ್ಥೆಯಲ್ಲಿಯೇ ಪ್ರತಿಯೊಂದು ಮಗುವೂ ಆಚಾರ್ಯ ದೇವೋಭವ ಎಂಬ ಮಂತ್ರವನ್ನು ಕರೆಯುತ್ತಿದ್ದು, ಉನ್ನತ ಮಟ್ಟದಲ್ಲಿದ್ದ ಗುರುವು ಬ್ರಹ್ಮ, ವಿಷ್ಣು, ಮಹೇಶ್ವರ ಈ ತ್ರಿಮೂರ್ತಿಗಳಿಗೆ ಸಮಾನವಾದ ಸ್ಥಾನವನ್ನು ಹೊಂದಿದ್ದರು. ಈ ರೀತಿಯ ಗೌರವ ದೊರೆಯುತ್ತಿದ್ದುದು ಆತನ ಶಾಸ್ತ್ರಪಾಂಡಿತ್ಯದಿಂದಲ್ಲ, ಅದಕ್ಕಿಂತ ಹೆಚ್ಚಾಗಿ ಅಪಾರ ಎಂಬ ಶಬ್ಧದಲ್ಲಿಯೇ ಧ್ವನಿತವಾಗಿರುವ ಪ್ರಾಮಾಣಿಕ ನಡತೆಯಿಂದ “A Teacher as a friend, philosoper and guide”.

ಇನ್ನೂ ಮಗುವಿನಲ್ಲಿ ತಾನು ಈ ಭಾರತದ ವರಪುತ್ರನೆಂಬ ಅರಿವನು, ಹೆಮ್ಮೆಯ ಭಾವನೆಯನ್ನು ಹುಟ್ಟಿಸುವುದು ಶಿಕ್ಷಣದ ಮೊದಲ ಕೆಲಸವಾಗಬೇಕಾಗಿದೆ. ಭಾರತವನ್ನು ತಾಯಿಯಂತೆ ಪ್ರೀತಿಸಲು ಅವನನ್ನು ಪ್ರೇರೇಪಿಸಬೇಕು, ಭಾರತವನ್ನು ತಾಯಿ (ಭಾರತ ಮಾತಾ) ಎಂದು ಕರೆಯುವುದು ನಮ್ಮ ಸಂಸ್ಕೃತಿಯ ಉತ್ತುಂಗತೆಯ ಚಿಹ್ನೆ. ಈ ಉನ್ನತ ದೇಶ ಪ್ರೇಮದ ಭಾವನೆಯು ವೇದಕಾಲದ ಋಷಿಗಳಿಂದಲೇ ಬೆಳಗಿಸಲ್ಪಟ್ಟಿತು, ಆ ನಂತರದ ಸಾಧು-ಸಂತರಿಂದ ಅದು ಮತ್ತಷ್ಟು ಪ್ರಖರಗೊಳಿಸಲ್ಪಟ್ಟಿತು.

ಆಧುನಿಕ ತತ್ವ ಚಿಂತಕರಾದ ಸ್ವಾಮಿ ವಿವೇಕಾನಂದ, ಬಂಕಿಮಚಂದ್ರ, ರವೀಂದ್ರನಾಥ ಟ್ಯಾಗೋರರು, ಯೋಗಿ ಅರವಿಂದರು, ಗೋಳವಲ್ಕರ್ ಗುರೂಜಿ ಇವರೆಲ್ಲ ರಾಷ್ಟ್ರಪ್ರೇಮವನ್ನು ಅಧ್ಯಾತ್ಮಿಕ ಸಾಧನೆಯ ಮಾರ್ಗವನ್ನಾಗಿ ಕಂಡವರು. ಈ ಭಾವ ಸಂಪತ್ತನ್ನು ನಾವು ನಮ್ಮ ನಂತರದ ಪೀಳಿಗೆಗೆ ದಾಟಿಸುವುದು ಅತ್ಯಾವಶ್ಯಕ, ತನ್ನ ಪತ್ನಿಯ ವಿನಃ ಇಡೀ ಸ್ತ್ರೀಕುಲ ತನಗೆ ಮಾತೃ ಸಮಾನರೆಂಬ ಪವಿತ್ರ ಭಾವನೆಯನ್ನು ಹೊಂದಿ ತಾಯಿಯ ಸ್ವರೂಪವನ್ನು ಕಾಣುವುದು ಇಂದಿಗೂ ಮಾನವ ನಾಗರಿಕತೆಯ ಒಂದು ಉನ್ನತ ಲಾಂಛನವಾಗಿ ಉಳಿದಿದೆ. ಇಂತಹ ಪವಿತ್ರ ಭಾವನೆ ಕೀಳು-ಕಾಮನೆಗಳನ್ನು ಪ್ರಭಾವಿಯಾಗಿ ತಡೆಯಬಲ್ಲದು. ತಾಯ್ನಾಡಿಗಾಗಿ ಸಮರ್ಪಣೆಯ ಸೇವಾ ಮನೋಭಾವನೆಯ ಉತ್ಸಾಹ ಅವರಲ್ಲಿ ಸ್ಫುಟಿಸಿತು, ಆಧುನಿಕ ಯುವಕರನ್ನು ಸತ್ವಯುತ ಚೈತನ್ಯವಂತರ ನ್ನಾಗಿ ಮಾಡಬಲ್ಲದು, ಹಾಗೂ ಮಾನವನ ಉನ್ನತಿಗೆ ಸ್ವಾರ್ಥ ಹಾಗೂ ಸಮಯ ಸಾಧಕತೆ ತುಂಬಿರುವ ಇಂದಿನ ಯುವಕರನ್ನು ಸುಧಾರಿಸುತ್ತದೆ.

ಅನಾದಿ ಕಾಲದಿಂದ ನಮ್ಮ ಎಳೆಯರಿಗೆ ಉಪದಿಷ್ಟವಾದ ಮಂತ್ರ “ಪಿತೃದೇವೋಭವ, ಮಾತೃದೇವೋಭವ” ಎಂಬುದು, ಅವರ ಮನಸ್ಸು ಪಾಲಕರೊಂದಿಗೆ ಬೆರೆತುಕೊಂಡಿರುತ್ತಿತ್ತು, ಅವರಿಂದ ಏಕತೆಗೆ ಧಕ್ಕೆ ಬರದಂತೆ ಮಾಡುವ ದಿವ್ಯಸೂತ್ರ ಅದಾಗಿತ್ತು ಇಂದಿನ ಯಾಂತ್ರಿಕ ಜೀವನದ ಅಬ್ಬರದಿಂದಾಗಿ ಹದಗೆಟ್ಟಿರುವ ಮಾನಸಿಕ ನೆಮ್ಮದಿಯನ್ನು ಪುನಃ ತರಬಹುದು, ಭರತ ಮಾತೆ ಎಂಬ ದರ್ಶನ ಅಂಕುರಿಸಿದಲ್ಲಿ ಜಾತೀಯತೆ, ಪ್ರಾಂತೀಯತೆ, ಭಾಷಾವಾದ, ಮತೀಯವಾದ ಮುಂತಾದ ಎಲ್ಲಾ ಸಂಕುಚಿತ ಭಾವನೆಗಳನ್ನು ಮಾಯವಾಗಿಸುತ್ತದೆ, ನಾವೆಲ್ಲ ಸಹೋದರರೆಂಬ ಭಾವನೆ ಮೂಡುತ್ತದೆ. ಕೋಮುವಾದ ಮರೆಯಾಗಿ ಏಕತೆಯ ಮನೋಭಾವನೆ ಎದ್ದು ನಿಲ್ಲುತ್ತದೆ.

ಅಂತೂ ನಮ್ಮ ಸಾಂಸ್ಕೃತಿಕ, ನೈತಿಕ ಮತ್ತು ಅಧ್ಯಾತ್ಮಿಕ ಶಿಕ್ಷಣ, ಸಾಮಾಜಿಕ, ರಾಜಕೀಯ ಜೀವನದ ಪ್ರಕಾರದ ಹೊರಗೆ ಉಳಿದಿರುವವರೆಗೆ ನಮ್ಮ ರಾಷ್ಟ್ರದ ಸ್ವಭಾವ ವಿಕಸಿಸಲಾರದು, ನೈತಿಕ ಅಧ್ಯಾತ್ತ್ಮಿಕತೆ ರಾಷ್ಟ್ರೀಯತೆ ಇವು ಪ್ರತ್ಯೇಕ, ಪ್ರತ್ಯೇಕ ವಿಷಯಗಳಲ್ಲಿ ಪರಸ್ಪರ ಅಂತಃ ಸಂಬಂಧವುಳ್ಳವು, ಇವು ಶೈಕ್ಷಣಿಕ ಜೀವನದ ಉಸಿರಾಗಬೇಕು.

– ಜೆಂಬಿಗಿ ಮೃತ್ಯುಂಜಯ, ಕನ್ನಡ ಉಪಾನ್ಯಾಸಕರು, ದಾವಣಗೆರೆ.