ಮದ್ಯ ಮುಕ್ತ ಸಮಾಜವಾಗಲಿ

ಮಾನ್ಯರೇ,

ಕೊರೊನಾ ವೈರಸ್‌ನಿಂದ ಭಾರತದಲ್ಲಿ ಬಹುತೇಕ ಎಲ್ಲಾ ಉದ್ಯಮಗಳು ನೆಲಕಚ್ಚಿವೆ. ವ್ಯಾಪಾರ, ವಹಿವಾಟಿನ ಮೇಲೆ ವೈರಸ್ ಪ್ರಭಾವ ಬೀರಿದೆ. ದಿನನಿತ್ಯದ ಅವಶ್ಯಕತೆಯ ಸರಕುಗಳು ಸಿಗುತ್ತಿವೆ.

ದೇಶದಲ್ಲೆಡೆ ಮದ್ಯ ಮಾರಾಟವಿಲ್ಲ, ಎಲ್ಲೆಡೆ ಅಂಗಡಿಗಳು ಬಂದ್ ಆಗಿದ್ದು ಮದ್ಯ ಪ್ರಿಯರು ಯಾವಾಗ ವೈನ್ ಶಾಪ್ ತೆರೆಯುತ್ತದೋ ಎನ್ನುವಷ್ಟರ ಮಟ್ಟಿಗೆ ಕಾದಿದ್ದಾರೆ.

ಕರ್ನಾಟಕ ಸರ್ಕಾರವೂ ಕೂಡ ಈ ಆದಾಯವನ್ನು ನೆಚ್ಚಿಕೊಂಡಿತ್ತು. ಆದರೆ ಇದೇ ಒಳ್ಳೆಯ ಸಮಯ ಮದ್ಯವನ್ನು ಜನರು ಹೆಚ್ಚು ಕಡಿಮೆ ಮರೆತಂತಿದೆ ಅಥವಾ ಮದ್ಯ ಇಲ್ಲದೇ ಬದುಕು ನಡೆಯುತ್ತಿದೆ ಅನ್ನುವ ಸತ್ಯವನ್ನು ಒಪ್ಪಿಕೊಂಡಿರಲೂಬಹುದು ಅಂದರೆ ಆಶ್ಚರ್ಯವಿಲ್ಲ..!

`ಮದ್ಯಪಾನ ನಿಷೇಧ ಅತ್ಯಂತ ಕಠಿಣವಾದ ಕ್ರಮ. ಆದರೆ, ಅತ್ಯಂತ ಶ್ರೇಷ್ಠವಾದ ಕೆಲಸವೂ ಕೂಡ’..!

ಕೊರೊನಾ ವೈರಸ್ ರೂಪಿಸಿರುವ ಪರಿಸ್ಥಿತಿಯು ನಿಜಕ್ಕೂ ಉತ್ತಮ ಹಾಗೂ ಮದ್ಯದ ವಿಷಯದಲ್ಲಿ ಸಂತಸ ಕೂಡ. ಎಷ್ಟೋ ಕುಟುಂಬಗಳು ಒಂದೊತ್ತು ಊಟವಿಲ್ಲದೆ ಇದ್ದರೂ ನೆಮ್ಮದಿ, ತೃಪ್ತಿಯಿಂದ ಸಮಾಜದಲ್ಲಿ ಹೆಜ್ಜೆಯನ್ನಿಡಲು ಪ್ರಾರಂಭಿಸಿವೆ.  ಎಲ್ಲಾ ಕಡೆ ನಿರ್ಮಲ ವಾತಾವರಣ ಸೃಷ್ಟಿಯಾಗಿದೆ.  ಕುಡಿದ ಅಮಲಿನಲ್ಲಿ ಜಗಳ, ಅಶಾಂತಿ, ಭ್ರಷ್ಟಾಚಾರ, ಅತ್ಯಾಚಾರ, ಕಳ್ಳತನ ಮುಕ್ತ ಸಮಾಜವಾಗಿ ನಿರ್ಮಾಣವಾಗಿದೆ.

ದುಡಿದ ದುಡ್ಡಿನಲ್ಲಿ ಮದ್ಯ ಸೇವಿಸಿ ಹಸಿವಿನಿಂದ ಇಡೀ ಕುಟುಂಬ ಕಂಗೆಡುವಂತೆ ಮಾಡುವವರು ಅನೇಕರಿದ್ದಾರೆ. ಇದರಿಂದಾಗಿ ತತ್ತರಿಸಿರುವವರು ಬಡವರು ಸಂದೇಹವಿಲ್ಲ. ಹಗಲು, ಇರುಳು ಶ್ರಮ ಪಡುವ ಜೀವಿಗಳು ತಾತ್ಕಾಲಿಕ ಸಮಾಧಾನಕ್ಕಾಗಿ ಮದ್ಯಪಾನದ ಮೊರೆ ಹೋಗುತ್ತಾರೆ. ಆದರೆ ಇದರಿಂದಾಗಿ ಆಗುವ ಅನಾಹುತಗಳು, ಆರೋಗ್ಯ ಸಮಸ್ಯೆಗಳಿಂದ ನಿರಂತರವಾಗಿ ಮರಣಗಳು ಹೆಚ್ಚಾಗಿವೆ.

ಹೆಣ್ಣು ಮಕ್ಕಳು ಹಾಗೂ ಮಕ್ಕಳು ದಿನನಿತ್ಯ ನಿರಂತರವಾಗಿ ಶೋಷಣೆಗೊಳಗಾಗುತ್ತಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಸಿಂಹ ಪಾಲು ಆದಾಯ ಮದ್ಯದಿಂದಲೇ ಬರುತ್ತಿದೆ. ಆದರೆ ಜನರ ಹಿತದೃಷ್ಟಿಯಿಂದ ಪೂರ್ಣ ಪ್ರಮಾಣದ ಮದ್ಯ ನಿಷೇಧ ಮಾಡಿದರೆ ನಿಜಕ್ಕೂ ಆರೋಗ್ಯಕರವಾದ ಉತ್ತಮ ಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ.

ಪ್ರಜೆಗಳ ಹಿತ ಕಾಯುವುದು ರಾಜನ ಕರ್ತವ್ಯ…

– ಕೆ.ಜಿ.ಸರೋಜಾ ನಾಗರಾಜ್, ಪಾಂಡೋಮಟ್ಟಿ.