ದಾವಣಗೆರೆ ಕೊರೊನಾ ಸಾವಿನಿಂದ ಹರಿಹರದಲ್ಲಿ ಭಯ

ದಾವಣಗೆರೆ ಕೊರೊನಾ ಸಾವಿನಿಂದ ಹರಿಹರದಲ್ಲಿ ಭಯ

ಹರಿಹರ, ಮೇ 2 – ಪಕ್ಕದ ದಾವಣಗೆರೆ ನಗರದಲ್ಲಿ ನಿನ್ನೆ ರಾತ್ರಿ ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ್ದು, ಇದರಿಂದಾಗಿ ಹರಿಹರದ ಜನತೆ ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಮೃತ ವ್ಯಕ್ತಿ ಹರಿಹರ ನಗರದ ಇಮಾಮ್ ಮೊಹಲ್ಲಾ ಬಡಾವಣೆಯ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದರು ಎನ್ನಲಾಗಿದ್ದು, ಆದ್ದರಿಂದ ಅವರು ಎಲ್ಲಿ ಓಡಾಟವನ್ನು ಮಾಡಿದ್ದಾರೋ ಅಲ್ಲಿನ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆದು ಅದನ್ನು ಲ್ಯಾಬ್ ಗಳಿಗೆ ಕಳಿಸಿಕೊಡಲಾಗಿದೆ. ಅವರನ್ನು ಪ್ರತ್ಯೇಕವಾದ ಸ್ಥಳದಲ್ಲಿ ಇರಿಸಲಾಗಿದೆ.
ಅವರ ಮನೆಯ ಮುಂದೆ ಬ್ಯಾರಿಕೇಡ್‌ ಹಾಕಿ ಸಾರ್ವಜನಿಕರು ಓಡಾಟ ಮಾಡದಂತೆ ಎಚ್ಚರ ವಹಿಸಲಾಗಿದೆ. ನಗರಸಭೆ ಸಿಬ್ಬಂದಿ ಗಳು ನಾಲಾ ಮೊಹಲ್ಲಾ  ಬಡಾವಣೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಔಷಧಿ ಸಿಂಪಡಿಸುವ ಕಾರ್ಯವಿಮಾಡಿದರು.
ಕೊರೊನಾ ವೈರಸ್ ರೋಗದ ಲಕ್ಷಣಗಳು ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ತಡೆಗಟ್ಟಲು ಸೋಂಕು ನಿವಾರಕ ಕೇಂದ್ರಗಳನ್ನು ನಗರಸಭೆ ಗುತ್ತಿಗೆದಾರರಿಂದ ಮುಖ್ಯ ರಸ್ತೆಯಲ್ಲಿ, ಉದ್ಯಮಿ ಚಂದ್ರಶೇಖರ್ ಪೂಜಾರ್ ಅವರಿಂದ ರಾಣಿ ಚೆನ್ನಮ್ಮ ವೃತ್ತದಲ್ಲಿ, ಮತ್ತು ನಗರಸಭೆ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ತೆರೆಯಲಾಗಿದೆ.

ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ದಾವಣಗೆರೆಯ ಕೊರೊನಾ ಸೋಂಕು ತಗುಲಿದ ವ್ಯಕ್ತಿಯು ನಗರದ ನಾಲಾ ಮೊಹಲ್ಲಾ ಬಡಾವಣೆಯಲ್ಲಿ ಸಂಚಾರ ಮಾಡಿ ಹೋಗಿದ್ದರಿಂದಾಗಿ ಮೂರು ಮನೆಯ ಮುಂದೆ ಬಾರಿಕೇಡ್ ಹಾಕ ಲಾಗಿದೆ. ಈ ಬಡಾವಣೆಯಲ್ಲಿನ ಸಾರ್ವಜನಿಕರಿಗೆ ಹೊರಗಡೆ ಬರದಂತೆ ತಿಳಿಸಲಾಗಿದೆ. ಸಾರ್ವಜನಿಕರು ಅನಾವಶ್ಯಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಓಡಾಟ ಮಾಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಗರಸಭೆ ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮಿ ಮಾತನಾಡಿ,  ನಾಲಾ ಮೊಹಲ್ಲಾ ಬಡಾವಣೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೋಗ ನಿರೋಧಕ ಔಷಧಿ ಸಿಂಪಡಿಸಲಾಗಿದೆ. ನಾಳೆ ಕೂಡಾ ಅಗ್ನಿಶಾಮಕ ದಳದ ಸಿಬ್ಬಂದಿಯ ಮೂಲಕ ಬಡಾವಣೆಯ ಸುತ್ತಲೂ ಔಷಧಿ ಸಿಂಪಡಿಸಲಾಗುತ್ತದೆ.   ಎಲ್ಲಾ ಹಣ್ಣು, ತರಕಾರಿ ಅಂಗಡಿಗಳನ್ನು ಮಧ್ಯಾಹ್ನ ಎರಡು ಗಂಟೆಗೆ ಮುಚ್ಚುವುದಕ್ಕೆ ಮಾಲೀಕರಿಗೆ ಸೂಚನೆ ನೀಡಲಾಗಿದೆ, ರಸ್ತೆಯಲ್ಲಿ ಗುಟ್ಕಾ ಹಾಕಿಕೊಂಡು ಉಗುಳುವ ವ್ಯಕ್ತಿಗಳಿಗೆ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಸಿದರು. ಅಲ್ಲದೇ, ಎಲ್ಲಾ ಬಡಾವಣೆಗಳಲ್ಲಿ ಸ್ವಚ್ಛತಾ ಕೆಲಸವನ್ನು ಮಾಡಲಾಗಿದೆ. ಔಷಧಿ ಸಿಂಪಡಿಸುವ ಕಾರ್ಯವನ್ನು ಮಾಡಲಾಗಿದೆ ಎಂದರು.
ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ಇಲ್ಲಿನ 12 ಜನರನ್ನು ದಾವಣಗೆರೆ ಸಿ.ಜಿ. ಆಸ್ಪತ್ರೆಯಲ್ಲಿ ಇರಿಸಿ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಅವರು ಹೇಳಿದರು.
ಬೆಸ್ಕಾಂ ಇಲಾಖೆಯ ಎಇಇ ಸಿ.ಎನ್. ರಮೇಶ್ ಮಾತನಾಡಿ, ನಗರದಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಲು ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಬಿಲ್ ಬರೆಯುವ ವೇಳೆ ಅಂತರವನ್ನು ಕಾಯ್ದುಕೊಂಡು ಕೆಲಸ-ಕಾರ್ಯವನ್ನು ನಿರ್ವಹಿಸುವುದಕ್ಕೆ  ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.