ಬಸವ ಜಯಂತಿ ರಾಷ್ಟ್ರೀಯ ಉತ್ಸವವನ್ನಾಗಿ ಘೋಷಿಸಲು ಮನವಿ

ಬಸವ ಜಯಂತಿ ರಾಷ್ಟ್ರೀಯ ಉತ್ಸವವನ್ನಾಗಿ ಘೋಷಿಸಲು ಮನವಿ

ದಾವಣಗೆರೆ, ಏ.26- 12ನೇ ಶತಮಾನದಲ್ಲಿ ವಚನ ಕ್ರಾಂತಿಯ ಮೂಲಕ ಸಮಾನತೆ ಮತ್ತು ಸಹಬಾಳ್ವೆಯ ಸಂದೇಶವನ್ನು ವಿಶ್ವಕ್ಕೇ ನೀಡಿದ ಕರ್ನಾಟಕದ ಹೆಮ್ಮೆಯ ವಿಶ್ವ ಗುರು ಬಸವಣ್ಣನವರು ಜಯಂತಿಯನ್ನು ರಾಷ್ಟ್ರೀಯ ಉತ್ಸವವನ್ನಾಗಿ ಆಚರಿಸುವಂತೆ ಪ್ರಧಾನಿ ಅವರ ಮೇಲೆ ಒತ್ತಡ ಹೇರಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಷ್ಟ್ರೀಯ ಬಸವ ಸೇನೆ ಒತ್ತಾಯಿಸಿದೆ.
ರಾಷ್ಟ್ರೀಯ ಬಸವ ಸೇನೆ ರಾಜ್ಯಾಧ್ಯಕ್ಷ ಶಿವನಗೌಡ ಟಿ. ಪಾಟೀಲ ನೇತೃತ್ವದಲ್ಲಿ ನಗರದಲ್ಲಿ ಇಂದು ಬಸವ ಜಯಂತಿ ಆಚರಿಸಿದ ಸೇನೆಯ ಪದಾಧಿಕಾರಿಗಳು, ಪ್ರಥಮ ಸಂಸತ್ತಿನ ಕಲ್ಪನೆಯನ್ನು 12ನೇ ಶತಮಾನದಲ್ಲಿ ಪರಿಚಯಿಸಿದ ಕೀರ್ತಿ ಹಾಗೂ ರಕ್ತ ರಹಿತ ಕ್ರಾಂತಿಯ ಮೂಲಕ ಸಮಾನತೆಯ ಸಮಾಜವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಮಹಿಳಾ ಸಮಾನತೆಯನ್ನು ಅನುಷ್ಠಾನಗೊಳಿಸಿ ಶರಣ ಗಣದಲ್ಲಿರುವ ಸುಮಾರು 36 ವಚನಗಾರ್ತಿಯರನ್ನು ವಿಶ್ವಕ್ಕೆ ಪರಿಚಯಿಸಿದ ಬಸವಣ್ಣ ಒಬ್ಬ ಮುತ್ಸದ್ಧಿ. ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮವನ್ನು ರಾಷ್ಟ್ರೀಯ ಸ್ಮಾರಕ ಎಂದು ಹಾಗೂ ಬಸವ ಜಯಂತಿಯನ್ನು ರಾಷ್ಟ್ರೀಯ ಉತ್ಸವ ಎಂದು ಘೋಷಿಸುವಂತೆ ಪ್ರಧಾನ ಮಂತ್ರಿಗಳ ಮೇಲೆ ಒತ್ತಡ ತರಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಬಸವಣ್ಣ ವಿಶ್ವ ಗುರು. ಅವರನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ನೀವೂ ಸೇರಿದಂತೆ ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರುಗಳು ಮಾಡಬೇಕೆಂದು ಒತ್ತಾಯಿಸುತ್ತೇವೆ. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ರಾಷ್ಟ್ರೀಯ ಬಸವ ಸೇನೆ ನಾಡಿನ ಮಠಾಧೀಶರ ನೇತೃತ್ವದಲ್ಲಿ ದೆಹಲಿಗೆ ಹೋಗಿ ಪ್ರತಿಭಟಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಕಾಂತ್ ನೀಲಗುಂದ, ಅಭಿಷೇಕ್ ಎಳೆಹೋಳೆ, ರವಿ ತೇಜ, ಎಂ. ಮಹಾಂತೇಶ್, ಬಿ. ಪ್ರಕಾಶ್, ನಾಗರಾಜ್ ಬೆಳವನೂರು, ನವೀನ್ ಕುಮಾರ್ ಇದ್ದರು.