ರಾಶಿ ಭವಿಷ್ಯ

Home ರಾಶಿ ಭವಿಷ್ಯ

ದಿನಾಂಕ : 18.07.2021 ರಿಂದ 24.07.2021

ಜಯತೀರ್ಥಾಚಾರ್ ವಡೇರ್, ದಾವಣಗೆರೆ. 

ಮೇಷ (ಅಶ್ವಿನಿ, ಭರಣಿ, ಕೃತ್ತಿಕಾ)
(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)

ಜನಸೇವೆ ಮಾಡಬೇಕೆಂಬ ನಿಮ್ಮ ಹಂಬಲ ಹಾಗೂ ಆಸಕ್ತಿ ಉತ್ತಮವಾಗಿದ್ದರೂ ಅದರಿಂದಾಗಿ ಸ್ವಂತ ಕೆಲಸಗಳನ್ನು ಕಡೆಗಣಿಸಬೇಡಿ. ಇದರಿಂದ ನಿಮಗೆ ನಷ್ಟ,  ಕೊಟ್ಟಿದ್ದ ಹಳೇಸಾಲ ಅನಿರೀಕ್ಷಿತವಾಗಿ ಕೈಸೇರಲಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಮೂಡಲಿದೆ. ಪ್ರಾಯಕ್ಕೆ ಬಂದ ಮಕ್ಕಳ ಮೇಲೆ ವಿಶ್ವಾಸವಿಡಿ ಮತ್ತು ಅವರನ್ನು ನಿಮ್ಮ ವ್ಯವಹಾರದಲ್ಲಿ ತೊಡಗಿಸಿಕೊಳ್ಳಿ. ಅವಕಾಶವಿದ್ದಲ್ಲಿ ಅವರನ್ನು ವ್ಯಾಪಾರ-ವ್ಯವಹಾರಗಳಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳಿ, ಕ್ಷಣಕ್ಷಣಕ್ಕೂ ಬದಲಾಗುವ ನಿಮ್ಮ ನಿರ್ಧಾರಗಳಿಂದಾಗಿ  ಮನೆ ಸದಸ್ಯರು  ವಿಶ್ವಾಸ ಕಳೆದುಕೊಳ್ಳಬಹುದು. ಹಳೇರೋಗಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಿ. ಭಾನು, ಸೋಮ, ಮಂಗಳ ಶುಭ ದಿನಗಳು.


ವೃಷಭ (ಕೃತ್ತಿಕಾ, 2,3,4, ರೋಹಿಣಿ, ಮೃಗ 1,2)
(ಇ.ಉ.ಎ.ಒ.ವ.ವಿ.ವು.ವೆ.ವೋ)

ಒಟ್ಟುಕುಟುಂಬದ ವ್ಯವಹಾರದಲ್ಲಿ ತೀವ್ರಾತಿತೀವ್ರ ಭಿನ್ನಾಭಿಪ್ರಾಯಗಳು ಮೂಡಲಿವೆ. ಅದು ಕೊನೆಗೆ ಪಾಲುದಾರಿಕೆಯಲ್ಲಿ ಪರ್ಯಾವಸಾನಗೊಳ್ಳಬಹುದು. ಈ ಸಂದರ್ಭದಲ್ಲಿ, ಹಿರಿಯರಾದ ಹಾಗು ಅನುಭವಿಗಳ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳಿ. ಕೋರ್ಟ್, ಕಛೇರಿಗಳಲ್ಲಿ ನಿಮ್ಮ ಪರವಾಗಿ ನ್ಯಾಯವಾದಿಗಳು  ಸೂಕ್ತ ರೀತಿಯಲ್ಲಿ ವಾದಿಸದೇ ಹೋದಲ್ಲಿ ಫಲಿತಾಂಶ  ವಿರೋಧಿಗಳ ಪರವಾದೀತು. ಅನಾವಶ್ಯಕವಾದ  ಅಥವಾ  ಬೇರೆಯರ ಕೆಲಸ, ಕಾರ್ಯಗಳ ನಿಮಿತ್ತ ತೊಡಗುವುದರಲ್ಲಿ ಏನೂ ಪ್ರಯೋಜನವಿಲ್ಲ. ಮೇಲಾಧಿಕಾರಿಗಳೊಂದಿಗೆ ಮನಸ್ತಾಪ ಮಾಡಿಕೊಳ್ಳುವುದರಿಂದ ನಿಮಗೆ ಮುಂಬಡ್ತಿಗೆ ಮಾರಕ, ಆದಾಯಕ್ಕೆ ತಕ್ಕಂತೆ ಖರ್ಚನ್ನು ರೂಢಿಸಿಕೊಳ್ಳುವುದು ಮೇಲು. ಬುಧ, ಗುರು, ಶುಕ್ರ ಶುಭ ದಿನಗಳು.


ಮಿಥುನ (3,4, ಆರಿದ್ರಾ, ಪುನರ್ವಸು 1,2,3)
(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)

ಚಿಕ್ಕಮಕ್ಕಳ ಆರೋಗ್ಯವನ್ನು ಉದಾಸೀನ ಮಾಡಬೇಡಿ. ಹಣಕಾಸಿನ ಹರಿವು ಸಾಧಾರಣವಾಗಿದೆ. ಜನಪ್ರಿಯ ಜನನಾಯಕರ ಆರೋಗ್ಯದಲ್ಲಿ ಅನಿರೀಕ್ಷಿತವಾಗಿ ಏರುಪೇರಾಗಲಿದೆ. ಸಾಧ್ಯವಾದಷ್ಟು ಮುನ್ನೆಚ್ಚರಿಯಿಂದಿರುವುದು ಮೇಲು. ಸರ್ಕಾರಿ ನೌಕರರಿಗೆ ಬಿಡುವಿಲ್ಲದಷ್ಟು ಕೆಲಸಗಳಾಗಲಿವೆ. ಇದರಿಂದ ಹೆಚ್ಚಿನ ವರಮಾನವನ್ನು ನಿರೀಕ್ಷಿಸಬಹುದು. ನೌಕರಿ ನಿಮಿತ್ತ ವಾಸಸ್ಥಳದಿಂದ ದೂರ ಹೋಗಬೇಕಾಗಬಹುದು. ವಿದ್ಯಾರ್ಥಿಗಳಿಗೆ ಉದಾಸೀನತೆ  ಒಳ್ಳೆಯದಲ್ಲ, ಖಾಸಗಿ ಕಂಪನಿನೌಕರರು ಒತ್ತಡದಿಂದ ಕೆಲಸಗಳಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಅತಿಮುಖ್ಯವಾದ ಕಾರ್ಯಗಳು ಪ್ರಭಾವೀ ವ್ಯಕ್ತಿಗಳ ಶಿಫಾರಸ್ಸಿನಿಂದ ನೆರವೇರಲು ಸಾಧ್ಯ. ಸೋಮ-ಬುಧ-ಗುರು-ಶುಭ ದಿನಗಳು.


ಕರ್ಕಾಟಕ (ಪುನ 4, ಪುಷ್ಯ, ಆಶ್ಲೇಷ)
(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)

ಮಕ್ಕಳ ಮದುವೆ ವಿಚಾರ ನಿಮ್ಮನ್ನು ಚಿಂತೆಗೀಡು ಮಾಡಲಿದೆ. ಈ ವಿಚಾರದಲ್ಲಿ ಬಂಧುಗಳ ಸಲಹೆ, ಸೂಚನೆ ಪಡೆಯಿರಿ, ಅವರಿವರ ಮಾತುಕೇಳಿ, ಷೇರು ಅಥವಾ ವ್ಯವಹಾರಗಳಲ್ಲಿ ಹೂಡಿಕೆಮಾಡುವುದು ಬೇಡ. ರಾಜಕಾರಣಿಗಳಿಗೆ ಬಂದಿದ್ದ ಆಪಾದನೆಗಳು ವರಿಷ್ಠರ ಪ್ರಭಾವದಿಂದಾಗಿ ಪರಿಹಾರವಾಗಲಿವೆ. ಆರ್ಥಿಕ ಪರಿಸ್ಥಿತಿ ಅತ್ಯಂತ ಸಾಧಾರಣವಾಗಿರುವುದರಿಂದ, ಯಾರನ್ನೋ ಮೆಚ್ಚಿಸುವ ಸಲುವಾಗಿ ಖರ್ಚು ಮಾಡುತ್ತಾ ಹೋದರೆ, ಉಳಿತಾಯದ ಗಂಟೂ ಕರಗೀತು. ಹಿರಿಯರ ವಿಚಾರದಲ್ಲಿ ಎಷ್ಟು ತಾಳ್ಮೆಯಿಂದ ನಡೆದುಕೊಳ್ಳುವಿರೋ ಅಷ್ಟೇ ನಿಮಗೆ ಲಾಭ, ಸಹೋದ್ಯೋಗಿಗಳೊಂದಿಗೆ  ಸೌಹಾರ್ದತೆ ಬೆಳೆಸಿಕೊಳ್ಳಿ, ರಾಜಕಾರಣಿಗಳೊಂದಿಗೆ ಅತಿಯಾದ ವಹಿವಾಟು ಬೇಡ. ಸೋಮ, ಗುರು, ಶುಕ್ರ, ಶುಭ ದಿನಗಳು.


ಸಿಂಹ ( ಮಘ, ಪುಬ್ಬ, ಉತ್ತರ 1)
(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)

ಆದಾಯದಲ್ಲಿ ಹೆಚ್ಚಳ, ಹಾಗೆಂದ ಮಾತ್ರಕ್ಕೆ ಹೆಚ್ಚಿನ ಖರ್ಚುವೆಚ್ಚಗಳಿಗೆ ಕಡಿವಾಣವಿರಲಿ, ಕೈಗಾರಿಕೋದ್ಯಮಿಗಳಿಗಿದ್ದ ಕಾರ್ಮಿಕರ ಸಮಸ್ಯೆ ಇಷ್ಟರಲ್ಲೇ ಬಗೆಹರಿಯಲಿದೆ.ಇದರಿಂದ ನಿಗದಿತ ವಹಿವಾಟು ನಿರೀಕ್ಷೆಗಿಂತ ಹೆಚ್ಚು ನಡೆಯಲಿದೆ. ಉನ್ನತಾಧ್ಯಯನಕ್ಕೆ ಪಟ್ಟುಬಿಡದೇ ಅಧ್ಯಯನ ಮಾಡಿದಲ್ಲಿ ಮಾತ್ರ  ಪ್ರವೇಶ ಪಡೆಯಲು ಸಾಧ್ಯ. ಹಣ್ಣು, ತರಕಾರಿ. ಹಾಗೂ ದಿನಸಿ ವ್ಯಾಪಾರಿಗಳಿಗೆ  ಹೆಚ್ಚಿದ ವಹಿವಾಟಿನಿಂದಾಗಿ ಲಾಭವಾಗಲಿದೆ. ಪುಣ್ಯಕ್ಷೇತ್ರಗಳ ದರ್ಶನಭಾಗ್ಯ ಒದಗಿಬರಲಿದ್ದು, ಅದನ್ನು ಸಾರ್ಥಕಪಡಿಸಿಕೊಳ್ಳಿ. ಸಂಧಿವಾತ ಸಮಸ್ಯೆ ಕಾಡಬಹುದು. ವೈದ್ಯರ ಸಲಹೆಯಂತೆ ಜೀವನಶೈಲಿ ರೂಢಿಸಿಕೊಳ್ಳಿ.ಮತ್ತೊಬ್ಬರ ದುಡ್ಡುಕಾಸಿನ ವ್ಯವಹಾರದಲ್ಲಿ ಜಾಮೀನಾಗಲು ಹೋಗಬೇಡಿ, ಭಾನು, ಮಂಗಳ, ಗುರು, ಶುಭ ದಿನಗಳು.


ಕನ್ಯಾ (ಉತ್ತರಾ 2,3,4, ಹಸ್ತಾ, ಚಿತ್ತಾ 1,2)
(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)

ನಿಮ್ಮ ಆಲಸ್ಯದಿಂದ ಕಾರ್ಯಗಳ ವಿಳಂಬ, ಆದಾಯದ ಮೂಲದಲ್ಲಿ ಹೆಚ್ಚಳ, ಕೀರ್ತಿಯ ಶನಿ ಹೆಗಲೇರಿಸಿಕೊಂಡಲ್ಲಿ, ಸನ್ಮಾನಕ್ಕಿಂತ ಅವಮಾನವೇ ಹೆಚ್ಚು, ಅವರಿವರ  ಸಮಸ್ಯೆಗಳನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸುವ ನಿಮಗೆ ಮನೆಯ ಸಮಸ್ಯೆಗಳೇ ಅರ್ಥವಾಗದೇ ಹೋದೀತು. ಬಂಧುಗಳೊಂದಿಗೆ ಹಣಕಾಸಿನ ವ್ಯವಹಾರಬೇಡ, ಈ ಹಿಂದೆ ಆರಂಭಿಸಿದ್ದ  ಸಣ್ಣ ಮಟ್ಟದ ವ್ಯವಹಾರವು ದೊಡ್ಡಮಟ್ಟದ ಲಾಭ ತರಲಿದೆ.  ಹಿರಿಯರ ಆಣತಿಯಂತೆ ನಡೆದುಕೊಳ್ಳಿ, ಮಕ್ಕಳ ಭವಿಷ್ಯದ ಬಗ್ಗೆ ನಿರ್ಭಾವುಕರಾಗದೇ, ಹೆಚ್ಚಿನ ಜವಾಬ್ದಾರಿತಯಿಂದ ವರ್ತಿಸುವುದು ಉತ್ತಮ. ಪ್ರತಿಯೊಂದಕ್ಕೂ  ಪರರನ್ನು  ಅತಿಯಾಗಿ ಅವಲಂಬಿಸುವುದು,ಅಷ್ಟು ಸೂಕ್ತವಲ್ಲ. ಮಂಗಳ, ಬುಧ, ಶುಕ್ರ, ಶುಭ ದಿನಗಳು.


ತುಲಾ (ಚಿತ್ತಾ 3,4, ಸ್ವಾತಿ, ವಿಶಾಖ 1,2,3)
(ರ.ರಿ.ರು.ರೆ.ರೊ.ತ.ತಿ.ತು.ತೆ.)

ಪದವೀಧರರಿಗೆ ಉತ್ತಮ ವೇತನದ ನೌಕರಿ, ಆಡುವ ಮಾತಿನಲ್ಲಿ ಹಿಡಿತವಿರಲಿ. ಆಸ್ತಿ ಖರೀದಿಗೆ ಆಕಸ್ಮಿಕ ಎಂಬಂತೆ ಆರ್ಥಿಕ ನೆರವು ದೊರೆಯಲಿದೆ,. ಆದರೆ ಈ ಖರೀದಿ ವಿಷಯ ಬೇರೆಯವರಿಗೆ ತಿಳಿಯದಂತೆ ಎಚ್ಚರವಹಿಸಿ.  ಪ್ರೇಮಿಗಳು  ಪರಸ್ಪರ ತಮಗಿರುವ ಸಂಶಯಗಳನ್ನು ಪರಿಹರಿಸಿಕೊಳ್ಳುವುದು ಉತ್ತಮ. ಮಹಿಳೆಯರು ಗುಟ್ಟಾಗಿ ಮಾಡುವ ಚೀಟಿ ಮೊದಲಾದ ವ್ಯವಹಾರಗಳಿಂದ ಭಾರೀ ವಂಚನೆಗೆ ಒಳಗಾಗುವ ಸಂಭವವಿದೆ. ಸೋದರನ ವಿವಾಹಕ್ಕೆ  ಸಂಬಂಧಿಗಳಿಂದಲೇ  ವಿಘ್ನಗಳು, ಅತಿಥಿಗಳ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ, ವಿದ್ಯಾರ್ಥಿಗಳಿಗೆ ಉತ್ತಮ ದಿನಗಳು. ಬುಧ, ಶುಕ್ರ, ಶನಿ, ಶುಭ ದಿನಗಳು.


ವೃಶ್ಚಿಕ (ವಿಶಾಖ 4, ಅನೂ, ಜೇಷ್ಠ)
(ತೊ.ನ.ನಿ.ನು.ನೆ.ನೋ.ಯ.ಯು.)

ಮುಂದೆ  ತೆಗೆದುಕೊಳ್ಳಬಹುದಾದ ನಿರ್ಧಾರಗಳ ಬಗ್ಗೆ ಮುಂದಾಲೋಚನೆ  ಅಥವಾ ಗುಂಪು ಸಮಾಲೋಚನೆಗಳನ್ನು ಆದಷ್ಟು ಬೇಗನೇ ಮಾಡುವುದು ಲೇಸು. ಕಲಾವಿದರಿಗೆ ಉತ್ತಮ ವೇದಿಕೆಗಳು ದೊರಕಲಿವೆ, ಸಂಶೋಧನಾ ರಂಗದಲ್ಲಿ ವಿಶಿಷ್ಟ ಮೈಲಿಗಲ್ಲು ದಾಖಲಾಗಲಿದೆ. ಆರಕ್ಷಣಾ ಇಲಾಖೆಯಲ್ಲಿರುವವರಿಗೆ ಸೌಲಭ್ಯಗಳೂ ಸಿಗಲಿವೆ. ಬೇರೆಯವರ ವಾಹನಗಳನ್ನು ಚಾಲಿಸಲು ಹೋದಲ್ಲಿ ಅಪಾಯ ಕಟ್ಟಿಟ್ಟಬುತ್ತಿ. ವೈದ್ಯ ವೃಂದದವರು ಜವಾಬ್ದಾರಿ ಹೊರಬೇಕಾದೀತು. ನೆರೆಹೊರೆಯವರೊಂದಿಗೆ  ಸೌಹಾರ್ದತೆಯಿಂದ ವರ್ತಿಸಿ. ಆಸ್ತಿ ಖರೀದಿ ವಿಚಾರವನ್ನು ಸದ್ಯದಮಟ್ಟಿಗೆ ಮುಂದೂಡುವುದು ಲೇಸು. ಆರೋಗ್ಯ ವಿಷಯದಲ್ಲಿ ಮಾಡುವ ಉದಾಸೀನತೆ ಗಂಭೀರ ಸ್ಥಿತಿ ತಲುಪಬಹುದು. ಸಾಧ್ಯ ವಾದಷ್ಟು ಗುರುಗಳ ಅನುಗ್ರಹ ಸಂಪಾದಿಸಲು ಯತ್ನಿಸಿ. ಗುರು, ಶುಕ್ರ, ಶನಿ, ಶುಭ ದಿನಗಳು.


ಧನಸ್ಸು (ಮೂಲ, ಪೂರ್ವಾಷಾಡ, ಉತ್ತರಾಷಾಡ)
(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)

ನೀವು ಸ್ವಉದ್ಯೋಗಿಗಳಾಗಿದ್ದಲ್ಲಿ  ಇನ್ನು ಮುಂದೆ ಹೆಚ್ಚಿನ ಅಭಿವೃದ್ಧಿಯನ್ನು ಕಾಣುವಿರಿ. ವಿಶ್ವಾಸಘಾತುಕತನದಿಂದಾಗಿ ಹಣ ಕಳೆದುಕೊಳ್ಳುವ ಸಂಭವವಿದೆ. ಲೇವಾದೇವಿ ವ್ಯವಹಾರ ಖಂಡಿತಾಬೇಡ.  ಮಹಿಳೆಯರು ಹಿರಿಯರೊಂದಿಗೆ ತುಸು ಸೌಜನ್ಯದಿಂದ ವರ್ತಿಸಿ, ಮನೆಗೆ  ಅತಿಥಿಗಳ ಆಗಮನದಿಂದ ತುಸು ಹೆಚ್ಚಿನ ಖರ್ಚಾಗಲಿದೆ. ಆದಾಯದ ಮೂಲದಲ್ಲಿ ಯಾವುದೇ ಬದಲಾವಣೆಯಿಲ್ಲದೇ ಇರುವುದರಿಂದ ವೈಯಕ್ತಿಕ ಹವ್ಯಾಸಗಳಿಗೆ ಕಡಿವಾಣವಿರಲಿ, ಮಗಳ ಮದುವೆ ವಿಚಾರದಲ್ಲಿ ಅವಳ ಅಭಿಪ್ರಾಯ ಪಡೆಯದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ರಾಜಕಾರಣಿಗಳು ಪ್ರಾಮಾಣಿಕವಾಗಿದ್ದಲ್ಲಿ ಉನ್ನತ ಸ್ಥಾನ, ಬುಧ, ಗುರು, ಶನಿ, ಶುಭ ದಿನಗಳು.


ಮಕರ (ಉತ್ತರಾಷಾಢ 2,3,4, ಶ್ರವಣ, ಧನಿಷ್ಠಾ 1,2)
(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)

ಬಂಧುಗಳೊಂದಿಗೆ ಬೆಳೆಸುವ ದ್ವೇಷ ನಿಮ್ಮನ್ನು ಏಕಾಂಗಿಯನ್ನಾಗಿ ಮಾಡಬಹುದು. ಅರ್ಧಕ್ಕೇ ನಿಂತಿದ್ದ ಹೊಸಮನೆ  ಕೆಲಸ ಮುಂದುವರೆಯಲು ಮಿತ್ರರಿಂದ ಸಹಾಯ, ಆದರೆ ಅದು ದುರುಪಯೋಗವಾಗದಂತೆ ನೋಡಿಕೊಳ್ಳಿ. ಮಹಿಳೆಯರ ಬಹುದಿನಗಳ ಕೋರಿಕೆ ಈ ವಾರ ನೆರವೇರಲಿದೆ. ವ್ಯಾಪಾರ, ವ್ಯವಹಾರಗಳು ಆರಂಭದಲ್ಲಿ ಮಂದಗತಿಯಲ್ಲಿ ಸಾಗಿದರೂ, ಮುಂದೆ ಚುರುಕುಗೊಳ್ಳಲಿವೆ.  ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡವರಿಗೆ  ಜನರಿಂದ ಮೆಚ್ಚುಗೆ, ನಿಮ್ಮ ಅವಶ್ಯಕತೆಗೆ ತಕ್ಕಷ್ಟು ಹಣದ ಹರಿವು ಬರಲಿದೆ.  ಅರ್ಥವಿಲ್ಲದ ಸುತ್ತಾಟದಿಂದ ಸಮಯ ವ್ಯರ್ಥವಾದೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ಕಂಡುಬಂದ ಪ್ರಗತಿ ತೃಪ್ತಿ ತರಲಿದೆ. ಬುಧ, ಶುಕ್ರ, ಶನಿ, ಶುಭ ದಿನಗಳು.


ಕುಂಭ (ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ 1,2,3)
(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)

ದಣಿಯುವ ದೇಹಕ್ಕೆ ತುಸು ವಿಶ್ರಾಂತಿ ಕೊಡುವುದು ಉತ್ತಮ. ಸೋದರನ ಕಷ್ಟಕ್ಕೆ ನಿಮ್ಮ ನೆರವಿನ ಅವಶ್ಯಕತೆಯಿದೆ. ಕೃಷಿಕ ಮಿತ್ರರಿಗೆ ಸರ್ಕಾರದಿಂದ ಸಹಾಯಧನ ಸಿಗಲಿದೆ, ಸಾಧ್ಯವಾದಷ್ಟು ಕೋಪ, ತಾಪಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಲೇಸು. ಅನಿರೀಕ್ಷಿತವಾಗಿ ಮನಸ್ಸು ಧಾರ್ಮಿಕದ ಕಡೆ ತಿರುಗಲಿದ್ದು, ಶಾಸ್ತ್ರೀಯ ವಿಚಾರಗಳ ಚರ್ಚೆಗಳನ್ನು ವಿಶೇಷವಾಗಿ ಮಾಡುವಿರಿ. ಖಾಸಗಿ ಕಂಪನಿ ನೌಕರರು ತಮ್ಮದಲ್ಲದ ತಪ್ಪಿಗೆ  ಶಿಕ್ಷೆಗೆ ಗುರಿಯಾಗಬೇಕಾದೀತು. ದೂರ ಪ್ರಯಾಣಗಳನ್ನು ಕೆಲಕಾಲ ಮುಂದೂಡುವುದು ಉತ್ತಮ. ಗುರು ಚರಿತ್ರೆಯನ್ನು ಪಠಿಸಿ. ಬುಧ, ಗುರು, ಶನಿ ಶುಭ ದಿನಗಳು.


ಮೀನ (ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ)
(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.)

ಹಿರಿಯರು ತಾವು ತಿಳಿದೋ, ತಿಳಿಯದೆಯೋ ಆಡುವ ಮಾತಿನಿಂದಾಗಿ ಮನೆಮಂದಿಯೆಲ್ಲಾ ಮುಜುಗುರಪಡಬೇಕಾಗಬಹುದು. ವಾಹನ ದುರಸ್ತಿ ಮಾಡುವವರಿಗೆ, ಉತ್ತಮ ದುಡಿಮೆಯಾಗಲಿದೆ. ಬೇರೆಯವರ ವ್ಯವಹಾರಗಳ ಲಾಭ-ನಷ್ಟಗಳ ಚಿಂತೆ ನಿಮಗೆ ಬೇಡ. ಉದ್ಯೋಗಸ್ಥ ಮಹಿಳೆಯರಿಗೆ  ಕೆಲಸಗಳಲ್ಲಿ ಕಂಡುಬರುತ್ತಿರುವ ಹಿನ್ನಡೆ  ಚಿಂತೆಗೀಡು ಮಾಡಬಹುದು. ಸಹೋದ್ಯೋಗಿಗಳ ನೆರವು ಪಡೆದಲ್ಲಿ ಒತ್ತಡ ತುಸು ಕಡಿಮೆಯಾದೀತು. ವಿದೇಶದಲ್ಲಿರುವ ಮಗನಿಂದ ಹಣ ಕಳುಹಿಸುವಂತೆ  ಒತ್ತಾಯ ಬರಬಹುದು. ಗುರುಗಳ ಸೇವೆಯನ್ನು ವಿಶೇಷವಾಗಿ ಮಾಡಿ. ಭಾನು, ಸೋಮ, ಗುರು, ಶುಭ ದಿನಗಳು.


ವಿಶೇಷ ದಿನಗಳು : ದಿನಾಂಕ : 24 -7 -2021, ಶನಿವಾರ ಹುಣ್ಣಿಮೆ ಗುರುಪೌರ್ಣಿಮೆ.