ಹಿಡಿಶಾಪ ಎದುರಿಸದೇ ಜನಸ್ನೇಹಿಯಾಗಿ: ಬೀಳಗಿ

ಹಿಡಿಶಾಪ ಎದುರಿಸದೇ ಜನಸ್ನೇಹಿಯಾಗಿ: ಬೀಳಗಿ

ದಾವಣಗೆರೆ, ಏ. 21 – ಜನಪರ ಆಡಳಿತದ ಕುರಿತು ಪರೀಕ್ಷೆ ಬರೆದು ಸರ್ಕಾರಿ ಉದ್ಯೋಗ ಪಡೆದವರು, ಕುರ್ಚಿ ಮೇಲೆ ಕುಳಿತ ತಕ್ಷಣ ಜನ ಹಿಡಿಶಾಪ ಹಾಕುವ ರೀತಿ ವರ್ತಿಸಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕಿವಿಮಾತು ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ರಾಜ್ಯ ಸರ್ಕಾರಿ ನೌಕರರ ಸಂಘಗಳ ವತಿಯಿಂದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜನಸ್ನೇಹಿ, ಜನಮುಖಿ ಹಾಗೂ ಜನಪರ ಆಡಳಿತ ಪುಸ್ತಕಗಳನ್ನು ಓದಿ, ಅದರ ಬಗ್ಗೆ ಪರೀಕ್ಷೆ ಬರೆದು, ಅದೇ ವಿಷಯದ ಕುರಿತು ಸಂದರ್ಶನದಲ್ಲಿ ಮಾತನಾಡಿ ಕೆಲಸಕ್ಕೆ ಬಂದಿರುತ್ತೀರಿ. ಆದರೆ, ಎ.ಸಿ. ಕೋಣೆಯ ಕುರ್ಚಿಯಲ್ಲಿ ಕುಳಿತ ತಕ್ಷಣ §ಬಾಬು¬ (ಅಧಿಕಾರ ಶಾಹಿ) ರೀತಿ ವರ್ತಿಸುತ್ತೀರಿ. ಕಚೇರಿಗೆ ಬಂದ ವ್ಯಕ್ತಿ ನಿಮಗೆ ಹಿಡಿಶಾಪ ಹಾಕಿ, ನಿಟ್ಟುಸಿರು ಬಿಟ್ಟು ಹೋಗಬಾರದು ಎಂದವರು ಹೇಳಿದರು.

ಕೆಲಸ ಮಾಡುವಾಗ ಖುಷಿಯಿಂದ ಒಳ್ಳೆಯ ದನ್ನು ಮಾಡಬೇಕು. ಹುರುಪು, ಹುಮ್ಮಸ್ಸಿನಿಂದ ಕೆಲಸದಲ್ಲಿ ಅರ್ಥ ಕಂಡುಕೊಳ್ಳಬೇಕು. ಇಲ್ಲವಾದರೆ, ಕೆಲಸ ಗುಲಾಮಗಿರಿಯಂತೆ ಭಾಸವಾಗುತ್ತದೆ ಎಂದವರು ಹೇಳಿದರು.

ದಾವಣಗೆರೆ ಜಿಲ್ಲೆ ಉತ್ತಮ ಕೆಲಸದಿಂದಾಗಿ ರಾಜ್ಯ ಮಟ್ಟದಲ್ಲಿ ಹೆಸರು ಪಡೆದಿದೆ. ರಾಜ್ಯ ಸರ್ಕಾರ ಯಾವುದೇ ಹೊಸ ಅಭಿಯಾನ ಆರಂಭಿಸಿದರೂ, ನಮ್ಮಿಂದ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ಪಡೆಯುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ನೌಕರರು ಜನರಿಗೆ ಉಪಯುಕ್ತ ಆಗುವ ರೀತಿ ಕೆಲಸ ಮಾಡಬೇಕು ಎಂದು ಹೇಳಿದರು.

ಜನಸ್ನೇಹಿ ಆಡಳಿತದ ಕುರಿತು ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ ಮಲ್ಲಿಕಾರ್ಜುನ ಕಲಮರಹಳ್ಳಿ, ಸಂವಿಧಾನದಿಂದ ನೌಕರರಿಗೆ ಸೇವಾ ಭದ್ರತೆ ದೊರೆತಿದೆ. ಅದೇ ಸಂವಿ ಧಾನದಿಂದ ಕರ್ತವ್ಯಗಳನ್ನು ತಿಳಿಸಲಾಗಿದೆ. ಉದ್ಯೋಗದ ಕುರಿತು ನೀತಿ ಸಂಹಿತೆಗಳಿವೆ. ಇವುಗಳನ್ನು ಪಾಲಿಸಿದರೆ ಜನಸ್ನೇಹಿ ಆಡಳಿತ ಸಾಧ್ಯ ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ. ಪಾಲಾಕ್ಷ ಮಾತನಾಡಿ, ಎನ್.ಪಿ.ಎಸ್. ರದ್ದುಗೊಳಿಸಿ, ಹಳೆಯ ಪಿಂಚಣಿ ಜಾರಿಗೆ ತರಬೇಕು ಹಾಗೂ ಕೇಂದ್ರ ಸರ್ಕಾರಿ ನೌಕರರ ಮಾದರಿ ವೇತನ ನೀಡಬೇಕು. ಖಾಲಿ ಇರುವ 2 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ನೌಕರರ ಪ್ರಮುಖ ಬೇಡಿಕೆಯಾಗಿದೆ ಎಂದರು.

ವೇದಿಕೆ ಮೇಲೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಎ. ಚನ್ನಪ್ಪ, ಮೇಯರ್ ಜಯಮ್ಮ ಗೋಪಿನಾಯ್ಕ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಬಿಐಇಟಿ ನಿರ್ದೇಶಕ ವೈ. ವೃಷಭೇಂದ್ರಪ್ಪ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಡಾ. ಉಮೇಶ್, ನೌಕರರ ಸಂಘದ ಸಿ. ಗುರುಮೂರ್ತಿ, ಡಾ. ರಂಗನಾಥ್, ಆರ್. ಲೋಕೇಶ್, ತಾಲ್ಲೂಕು ಅಧ್ಯಕ್ಷರಾದ ರೇವಣಸಿದ್ದಪ್ಪ ಅಂಗಡಿ, ಕುಮಾರಸ್ವಾಮಿ, ಜಯಕುಮಾರ್, ಶಶಿಧರ್, ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.