ಅಂಬಾಭವಾನಿ ಅರ್ಬನ್ ಬ್ಯಾಂಕಿಗೆ 49.31 ಲಕ್ಷ ಲಾಭ

ದಾವಣಗೆರೆ, ಏ.21- ನಗರದ ಶ್ರೀ ಅಂಬಾಭವಾನಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಮುಕ್ತಾಯಗೊಂಡ ಆರ್ಥಿಕ ವರ್ಷ 2021-22ನೇ ಸಾಲಿನಲ್ಲಿ 49.31 ಲಕ್ಷ ರೂ. ಲಾಭ ಗಳಿಸಿರುವ ಬಗ್ಗೆ ಲೆಕ್ಕ ಪರಿಶೋಧಕರೂ ಆಗಿರುವ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಎ. ಕಿರಣ್‌ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. 49.31 ಲಕ್ಷ ರೂ. ಗಳಿಸಿರುವ ಲಾಭದಲ್ಲಿ ಆದಾಯ ತೆರಿಗೆ 13.50 ಲಕ್ಷ ರೂ. ಪಾವತಿಸಲಾಗಿದೆ. ರಿಸರ್ವ್ ಬ್ಯಾಂಕ್ ನಿಯಮಾನುಸಾರ 3.50 ಲಕ್ಷ ರೂ. ಎನ್.ಪಿ.ಎ ಅವಕಾಶವನ್ನು ಕಲ್ಪಿಸಿದ ನಂತರ 32.31 ಲಕ್ಷ ರೂ. ನಿವ್ವಳ ಲಾಭ ಗಳಿಸುವ ಮೂಲಕ ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿಯಲ್ಲಿ ಬ್ಯಾಂಕ್ ಮುನ್ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಆರ್ಥಿಕ ವರ್ಷ 2021-22ನೇ ಸಾಲು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬ್ಯಾಂಕಿನ ಸಭಾಂಗಣದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಬ್ಯಾಂಕಿನ ಆರ್ಥಿಕ ಪ್ರಗತಿ ಬಗ್ಗೆ ಮೆಲುಕು ಹಾಕಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಲ್ಲಿ ಬ್ಯಾಂಕ್ ಉತ್ತಮ ಪ್ರಗತಿಯಲ್ಲಿದೆ ಎಂದು ಹೇಳಿದರು.

ಆರ್ಥಿಕ ವರ್ಷಕ್ಕೆ ಬ್ಯಾಂಕು 145.45 ಲಕ್ಷ ರೂ. ಷೇರು ಬಂಡವಾಳವನ್ನು ಹೊಂದಿದ್ದು, 98.23 ಲಕ್ಷ ರೂ. ಕಾಯ್ದಿಟ್ಟ ಮತ್ತು ಇತರೆ ನಿಧಿಗಳನ್ನು ಹೊಂದಿರುತ್ತದೆ. 80.19 ಲಕ್ಷ ರೂ., 1915.04 ಲಕ್ಷ ರೂ. ಠೇವಣಿ ಸಂಗ್ರಹಿಸಲಾಗಿತ್ತು. 911.97 ಲಕ್ಷ ರೂ. ಸದಸ್ಯರಿಗೆ ವಿವಿಧ ಸಾಲಗಳನ್ನು ನೀಡಲಾಗಿದೆ. ಗ್ರಾಹಕರ ಮತ್ತು ಸದಸ್ಯರ ಅನುಕೂಲಕ್ಕಾಗಿ ಬ್ಯಾಂಕಿನ ವ್ಯವಹಾರವನ್ನು ನಡೆಸುತ್ತದೆ. ಆರ್.ಟಿ.ಜಿ.ಎಸ್ / ಎನ್.ಇ.ಎಫ್.ಟಿ ಲಾಕರ್ ಅನುಷ್ಠಾನಗೊಳಿಸಲಾಗಿದೆ ಎಂದು ವಿವರಿಸಿದರು.

ಗ್ರಾಹಕರಿಗೆ ಅನುಕೂಲವಾಗುವಂತೆ ಆಕರ್ಷಕ ಬಡ್ಡಿ ದರಗಳಲ್ಲಿ ಗೃಹ ಸಾಲ, ಮಾರ್ಟ್‌ಗೇಜ್ ಸಾಲ, ಆಭರಣ ಸಾಲಗಳಿಗೆ ಕ್ರಮವಾಗಿ ಶೇ.9.5 ರಿಂದ ಶೇ.11.5 ಮತ್ತು 10 ರಂತೆ ನೀಡಲಾಗುತ್ತಿದೆ ಎಂದು ಬ್ಯಾಂಕಿನ ಉಪಾಧ್ಯಕ್ಷ ಜಿ.ಎಂ. ಪರಶುರಾಮ್ ರಾವ್ ತಿಳಿಸಿದರು.

ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಡಾ. ತಿಪ್ಪೇಸ್ವಾಮಿ ಏಕಬೋಟೆ, ಡಾ. ಎಸ್. ರಜನಿ, ಗೋಪಿನಾಥ್, ಆರ್.ಜಿ.ಸತ್ಯನಾರಾಯಣರಾವ್, ಎಸ್. ಬಾಬುರಾವ್ ಸೋಳಂಕಿ, ಶಿವಾಜಿರಾವ್, ಜಗನ್ನಾಥ್ ಗಂಜೀಗಟ್ಟಿ, ಪಿ.ಜಿ. ಪಾಂಡುರಂಗ, ಎಂ.ಡಿ. ಗಿರಿಧರ್, ಬಾಬು, ಜಿ. ಅನಿತಾಬಾಯಿ, ಬಿ.ಎಂ. ಶ್ಯಾಮಲಾ, ಡಿ ಆನಂದಪ್ಪ, ಬ್ಯಾಂಕಿನ ವೃತ್ತಿಪರ ನಿರ್ದೇಶಕರುಗಳಾದ ಎ.ಸಿ ರಾಘವೇಂದ್ರ, ರಾಜು ಮಹೇಂದ್ರಕರ್ ಅವರುಗಳು ಉಪಸ್ಥಿತರಿದ್ದರು.

ವ್ಯವಸ್ಥಾಪಕ ನಾಗರಾಜ್ ಗೌಡನಕಟ್ಟಿ, ಸಹಾಯಕ ವ್ಯವಸ್ಥಾಪಕ ಅನಿಲ್ ಟಿ.ಮಾಳದ್‌ಕರ್ ಅವರು ಸಭೆಯಲ್ಲಿ  ವಿಷಯಗಳನ್ನು ಮಂಡಿಸಿದರು.