ಹಿಜಾಬ್ ತೆರವು ಮಾಡದ ವಿದ್ಯಾರ್ಥಿನಿಯರನ್ನು ಬೆಂಬಲಿಸಿ ತರಗತಿ ಬಹಿಷ್ಕರಿಸಿದ ಬಾಲಕರು

ಹಿಜಾಬ್ ತೆರವು ಮಾಡದ ವಿದ್ಯಾರ್ಥಿನಿಯರನ್ನು ಬೆಂಬಲಿಸಿ ತರಗತಿ ಬಹಿಷ್ಕರಿಸಿದ ಬಾಲಕರು

ಮಲೇಬೆನ್ನೂರು, ಫೆ.21- ಹಿಜಾಬ್ ತೆರವು ಮಾಡದ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನಿರಾಕರಿಸಿರುವುದನ್ನು ವಿರೋಧಿಸಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳು (ಬಾಲಕರು) ತರಗತಿ ಬಹಿಷ್ಕಾರ ಮಾಡಿದ ಘಟನೆ ಸೋಮವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.

ಕಳೆದ ವಾರವೂ ಹಿಜಾಬ್ ತೆರವು ಮಾಡದ ಪ್ರಥಮ ಪಿಯುಸಿಯ 6-7 ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ.

ಸೋಮವಾರ ಕೂಡಾ ಪ್ರಥಮ ಪಿಯುಸಿ 11 ವಿದ್ಯಾರ್ಥಿನಿಯರು ನಾವು ಹಿಜಾಬ್ ತೆಗೆಯುವುದಿಲ್ಲ ಎಂದು ಹಠ ಮಾಡಿ, ಕಾಲೇಜಿನಿಂದ ಹೊರಗಡೆ ನಿಂತಿದ್ದರು. ಇವರನ್ನು ಬೆಂಬಲಿಸಿದ ಐವರು ವಿದ್ಯಾರ್ಥಿಗಳೂ ತರಗತಿಗೆ ತೆರಳದೆ ವಿದ್ಯಾರ್ಥಿನಿಯರ ಜೊತೆ ಇದ್ದು, ಬೆಂಬಲ ವ್ಯಕ್ತಪಡಿಸಿದರು.

ಆಗ ಕಾಲೇಜಿನ ಪ್ರಾಚಾರ್ಯ ರಂಗಪ್ಪ, ಹಿರಿಯ ಉಪನ್ಯಾಸಕ ತಿಪ್ಪೇಸ್ವಾಮಿ ಹಾಗೂ ಪೊಲೀಸರು, ವಿದ್ಯಾರ್ಥಿಗಳ ಮನವೊಲಿಕೆ ಪ್ರಯತ್ನ ನಡೆಸಿ ದರೂ ಪ್ರಯೋ ಜನ ಆಗಲಿಲ್ಲ. ಕಾಲೇಜಿನ ಸಮಯ ಮುಗಿಯು ವವರೆಗೂ ಹೊರಗಡೆಯೇ ಇದ್ದು, ನಂತರ ಮನೆಗೆ ತೆರಳಿದರು.

ಈ ಕಾಲೇಜಿನಿಂದ ಹರಿಹರಕ್ಕೆ ದ್ವಿತೀಯ ಪಿಯುಸಿಯ ಪ್ರಾಯೋಗಿಕ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿನಿಯರ ಪೈಕಿ ಓರ್ವ ವಿದ್ಯಾರ್ಥಿನಿ ಮಾತ್ರ ಹಿಜಾಬ್ ತೆರವು ಮಾಡುವುದಿಲ್ಲ ಎಂದು ಹೇಳಿ ಪರೀಕ್ಷೆಗೆ ಕುಳಿತುಕೊಳ್ಳದೇ ವಾಪಸ್ ಊರಿಗೆ ಬಂದಿದ್ದಾರೆ ಎಂದು ಹೇಳಲಾಗಿದೆ.