ಶಾಂತಿ, ಸೌಹಾರ್ದತೆಗಾಗಿ ಡಿಸಿ – ಎಸ್ಪಿ ಜಾಗೃತಿ ಸಂಚಾರ

ಶಾಂತಿ, ಸೌಹಾರ್ದತೆಗಾಗಿ ಡಿಸಿ – ಎಸ್ಪಿ ಜಾಗೃತಿ ಸಂಚಾರ

ದಾವಣಗೆರೆ, ಫೆ.11- ಜಿಲ್ಲೆಯ ಕೆಲವೆಡೆ ಹಿಜಾಬ್-ಕೇಸರಿ ಶಾಲು ವಿಚಾರವಾಗಿ ಗಲಾಟೆಯಾದ ಕಾರಣ ಜಿಲ್ಲಾಡಳಿತವು ಕಡಿವಾಣ ಹಾಕಲು ಮುಂದಾಗಿದ್ದು, ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ   ಜಾಗೃತಿ ಮೂಡಿಸುತ್ತಾ ಶಾಂತಿ ಕಾಪಾಡಲು ಮನವಿ ಮಾಡಲಾಗುತ್ತಿದೆ.

ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಾಗಿರುವ ಸಂಬಂಧ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್ಪಿ ಸಿ.ಬಿ. ರಿಷ್ಯಂತ್ ಇಬ್ಬರೂ ಒಟ್ಟಾಗಿ ಸೇರಿ  ಸ್ಥಳೀಯ ಆಜಾದ್ ನಗರ, ಅಹ್ಮದ್ ನಗರ, ವಿನೋಬನಗರ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿನ ಮಸೀದಿಗಳಿಗೆ ಕಾಲ್ನಡಿಗೆ ಮುಖೇನ ತೆರಳಿ ಶಾಂತಿ ಕಾಪಾಡುವಂತೆ ಮುಸ್ಲಿಂ ಸಮಾಜದ ಮುಖಂಡರ ಜೊತೆ ಮಾತುಕತೆ ನಡೆಸಿ, ಮನವಿ ಮಾಡಿದರು. 

ಜಿಲ್ಲೆಯಲ್ಲಿ ಹಿಜಾಬ್ – ಕೇಸರಿ ವಿಚಾರವಾಗಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕಟ್ಟುನಿ ಟ್ಟಿನ‌ ಕ್ರಮ ಕೈಗೊಂಡಿದೆ. ಸಾರ್ವಜನಿಕರು ಜಿಲ್ಲಾಡಳಿತ ದೊಂದಿಗೆ ಸಹಕರಿಸಬೇಕು. ಯಾವುದೇ ಶಾಂತಿ ಕದಡುವ ಯತ್ನಗಳನ್ನು ನಡೆಸಬಾರದು ಎಂದು ಡಿಸಿ – ಎಸ್ಪಿ ಮನವಿ ಮಾಡಿದರು.

ಹಿಜಾಬ್ – ಕೇಸರಿ ಶಾಲು ಬಗ್ಗೆ ಚರ್ಚೆ ಮಾಡಬೇಡಿ, ಎಲ್ಲ ಸಮಾಜ ದವರು ಅಣ್ಣ-ತಮ್ಮಂದಿರ ಹಾಗೆ ಸಹಬಾಳ್ವೆಯಿಂದ ಇರಬೇಕು. ನಿಷಾಧಾಜ್ಞೆ ಇರುವ ಕಾರಣ ಪ್ರಾರ್ಥ ನೆಗೆ ಜನ ಸೇರಿಸದೇ ಮನೆಯಲ್ಲೇ ಪ್ರಾರ್ಥನೆ ಮಾಡಿ ಎಂದು ಸೂಚಿಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿ ಕಾರಿ, ಜಿಲ್ಲೆಯಲ್ಲಿ ಇದುವರೆಗೂ ಎಲ್ಲರೂ
ಸಹೋದರರಂತೆ ಬಾಳುತ್ತಿದ್ದೇವೆ.  ಜನಸಂದಣಿ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿ, ಅವರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖಂಡ ಖಾಸಿಂಸಾಬ್, ಡಿವೈಎಸ್‍ಪಿ ನರಸಿಂಹ ತಾಮ್ರಧ್ವಜ ಸೇರಿದಂತೆ  ಇತರರು ಇದ್ದರು.