ದಂಡ ಬೇಡ ಹೆಲ್ಮೆಟ್ ಖರೀದಿಸಿ

ದಂಡ ಬೇಡ ಹೆಲ್ಮೆಟ್ ಖರೀದಿಸಿ

ಹೆಲ್ಮೆಟ್ ಇಲ್ಲದವರು ಸ್ಥಳದಲ್ಲೇ ಖರೀದಿಸಲು ವ್ಯವಸ್ಥೆ 

ಡಿವೈಎಸ್ಪಿ ತಾಮ್ರಧ್ವಜ ನೇತೃತ್ವದಲ್ಲಿ ಪೊಲೀಸರ ವಿನೂತನ ಅಭಿಯಾನ

ದಾವಣಗೆರೆ, ಜ. 24 – ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸುವ ಬದಲು, ಅವರು ಸ್ಥಳದಲ್ಲೇ ಹೆಲ್ಮೆಟ್ ಖರೀದಿಸುವಂತೆ ಮಾಡುವ ವಿನೂತನ ಅಭಿಯಾನ ವನ್ನು ನಗರ ಪೊಲೀಸರು ಕೈಗೊಂಡರು.

ಇತ್ತೀಚಿನ ವಾರಗಳಲ್ಲಿ ಹೆಲ್ಮೆಟ್ ಧರಿಸದೆ ಇಲ್ಲವೇ ಸರಿಯಾದ ಹೆಲ್ಮೆಟ್ ಧರಿಸದೇ ಅಪಘಾತಕ್ಕೀಡಾ ಗುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ದಂಡದ ಬದಲು ಹೆಲ್ಮೆಟ್ ಖರೀದಿಸಿ ಎಂಬ ಅಭಿಯಾನ ಕೈಗೊಳ್ಳಲಾಯಿತು.

ಶಾಮನೂರು ಕೆಳಸೇತುವೆ ಬಳಿ ಪೊಲೀಸ್ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಧರಿಸದೇ ತೆರಳುತ್ತಿದ್ದವರನ್ನು ತಡೆದು, ಹೆಲ್ಮೆಟ್ ಖರೀದಿಸಲು ತಿಳಿಸಿದರು. ಜನರ ಅನುಕೂಲಕ್ಕಾಗಿ 450 ರೂ.ಗಳಿಂದ ಹಿಡಿದು 1,350 ರೂ.ಗಳವರೆಗೆ ವಿವಿಧ ರೀತಿಯ ಹೆಲ್ಮೆಟ್‌ಗಳನ್ನು ಖರೀದಿಸುವ ವ್ಯವಸ್ಥೆ ಮಾಡಲಾಗಿತ್ತು.

ಈಗ ತಾನೇ ಹೊಲಕ್ಕೆ ಹೋಗಿ ಬರುತ್ತಿದ್ದೇನೆ… ಎಮ್ಮೆ ಹೊಡೆದುಕೊಂಡು ಬರಲು ತೆರಳಿದ್ದೆ… ಆಸ್ಪತ್ರೆಗೆ ಹೋಗಬೇಕು… ಮನೆಯಲ್ಲಿ ಹೊಸ ಹೆಲ್ಮೆಟ್ ಇದೆ… ಹೆಲ್ಮೆಟ್ ಖರೀದಿಗೆ ಸಿದ್ಧ, ಆದರೆ ದುಡ್ಡೇ ಇಲ್ಲ… ಇವು ಹೆಲ್ಮೆಟ್ ಧರಿಸದೇ ಬಂದವರು ನೀಡುತ್ತಿದ್ದ ಕಾರಣಗಳು

ಇಂತಹ ಕಾರಣಗಳಿಗೆ ಒಪ್ಪದ ನಗರ ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ, ತಲೆ ಸುರಕ್ಷಿತವಾಗಿಟ್ಟು ಕೊಳ್ಳುವುದು ಮುಖ್ಯ. ನಿಮ್ಮಿಂದ ದಂಡ ಕಟ್ಟಿಸಿಕೊಳ್ಳುವ ಉದ್ದೇಶವಿಲ್ಲ. ಹೆಲ್ಮೆಟ್ ಖರೀದಿಸಿ ಸುರಕ್ಷಿತವಾಗಿರಿ. ಇಲ್ಲ ಎನ್ನುವುದಾದರೆ ದಂಡ ಅನಿವಾರ್ಯವಾಗುತ್ತದೆ ಎಂದು ಮನವೊಲಿಸುತ್ತಿದ್ದರು.

ಹೆಲ್ಮೆಟ್ ಇದ್ದರೂ ಡಿಕ್ಕಿಯಲ್ಲಿಟ್ಟುಕೊಂಡು ಬರುತ್ತಿದ್ದ ವೈದ್ಯೆಯೊಬ್ಬರು ಕಂಡು ಬಂದರು. ವೈದ್ಯರಾಗಿ ನೀವೇ ಈ ರೀತಿ ನಿರ್ಲಕ್ಷ್ಯ ತೋರಬಾರದು ಎಂದೂ ಎಚ್ಚರಿಕೆ ನೀಡಿದರು.

ಆಸ್ಪತ್ರೆಗೆ ತಾಯಿಯನ್ನು ಕರೆದುಕೊಂಡು ಹೋಗುವ ಅವಸರದಲ್ಲಿ ಹೆಲ್ಮೆಟ್ ಬಿಟ್ಟು ಬಂದೆ ಸಾರ್‌… ಎಂದು ಇನ್ನೋರ್ವ ತನ್ನ ಕಷ್ಟ ಹೇಳಿಕೊಂಡ. ಆಸ್ಪತ್ರೆಗೆ ಹೋಗುವುದಿರಲಿ, ಹೆಲ್ಮೆಟ್ ಹಾಕದೇ ಹೆಚ್ಚೂ ಕಡಿಮೆಯಾದರೆ ನೀನೇ ಆಸ್ಪತ್ರೆಗೆ ಸೇರಬೇಕಾಗುತ್ತದೆ ಎಂದು ಡಿವೈಎಸ್ಪಿ ಎಚ್ಚರಿಸಿದರು.

ಡಿವೈಎಸ್ಪಿ ತಾಮ್ರಧ್ವಜ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಗಳಾದ ಜಯಶೀಲ, ಅರವಿಂದ, ಪೊಲೀಸ್ ಸಿಬ್ಬಂದಿಗಳಾದ ಕೆ. ಪ್ರಕಾಶ್, ಶಫಿ, ಅವಿನಾಶ್, ಮಹೇಶ್, ವಾಮದೇವ್, ಹೇಮಣ್ಣ, ಮತ್ತಿತರರು ಪಾಲ್ಗೊಂಡಿದ್ದರು.