ಮಲೇಬೆನ್ನೂರಿನ 3 ಕಾಲೇಜುಗಳು ವಾರ ಬಂದ್‌

ಮಲೇಬೆನ್ನೂರಿನ 3 ಕಾಲೇಜುಗಳು ವಾರ ಬಂದ್‌

ಮಲೇಬೆನ್ನೂರು, ಜ.17- ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಬೀರಲಿಂಗೇಶ್ವರ ಹೆಣ್ಣುಮಕ್ಕಳ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಸೋಮವಾರ ವಿವಿಧ ಶಾಲೆಗಳಲ್ಲಿ ಕೋವಿಡ್‌ ಟೆಸ್ಟ್‌ ಮಾಡಲಾಯಿತು. ಸೋಂಕು ಕಾಣಿಸಿಕೊಂಡಿರುವ ಎರಡು ಕಾಲೇಜುಗಳ ನಡುವೆ ಇರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳ ಸಂಖ್ಯೆ ದಿಢೀರ್‌ ಕುಸಿತ ಕಂಡಿತ್ತು.

333 ವಿದ್ಯಾರ್ಥಿಗಳ ಪೈಕಿ 75 ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಆಗಮಿಸಿದ್ದರು. ಅವರೆಲ್ಲರಿಗೂ ಮತ್ತು ಶಿಕ್ಷಕರಿಗೆ ಕೋವಿಡ್‌ ಟೆಸ್ಟ್‌ ಮಾಡಿಸಿದಾಗ 8 ವಿದ್ಯಾರ್ಥಿಗಳಿಗೆ ಹಾಗೂ ಇಬ್ಬರು ಶಿಕ್ಷಕರಿಗೆ ಪಾಸಿಟಿವ್‌ ಬಂದಿದೆ. ಅಲ್ಲದೆ, ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ 9 ಶಿಕ್ಷಕರು ಟೆಸ್ಟಿಗೆ ಒಳಗಾದಾಗ ಇಬ್ಬರಿಗೆ ಮತ್ತು ಪಿಡಬ್ಲ್ಯೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಬ್ಬ ಶಿಕ್ಷಕರಿಗೆ ಹಾಗೂ ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿದೆ. 

ಜಾಮಿಯಾ ನ್ಯಾಷನಲ್‌ ಉರ್ದು ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಒಟ್ಟು 83 ಜನರಿಗೆ ಟೆಸ್ಟ್‌ ಮಾಡಿದಾಗ ಮೂವರಿಗೆ ಸೋಂಕು ತಗುಲಿದೆ.

ಅಂಚೆ ಕಛೇರಿಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಸರ್ಕಾರಿ ಪ್ರೌಢಶಾಲೆಗೆ ಒಂದು ವಾರ ರಜೆ ಘೋಷಿಸಲಾಗಿದೆ. ಇದರಿಂದಾಗಿ ಆ ಇಡೀ ಕ್ಯಾಂಪಸ್‌ ಬಿಕೋ ಎನ್ನುತ್ತಿತ್ತು.

ಸೋಮವಾರ ಪಟ್ಟಣದಲ್ಲಿ ಎಲ್ಲಾ ಶಾಲೆಗಳಲ್ಲಿ ಸೇರಿ ಒಟ್ಟು 279 ಕೋವಿಡ್‌ ಟೆಸ್ಟ್‌ ಆಗಿದ್ದು, 18 ಜನರಿಗೆ ಸೋಂಕು ದೃಢಪಟ್ಟಿದೆ.

ಟಿಹೆಚ್‌ಓ ಡಾ. ಚಂದ್ರಮೋಹನ್‌, ತಾಲ್ಲೂಕು ಹಿರಿಯ ಆರೋಗ್ಯ ವಿಸ್ತರಣಾಧಿಕಾರಿ ಎಂ. ಉಮ್ಮಣ್ಣ, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ರುಕ್ಮಿಣಿ, ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ, ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಉಪಪ್ರಾಚಾರ್ಯ ರಾಮಣ್ಣ ಸೋಮಣ್ಣನವರ್‌ ಈ ವೇಳೆ ಹಾಜರಿ ದ್ದರು. ಬೀರಲಿಂಗೇಶ್ವರ ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆಯ ಕೊಠಡಿಗಳನ್ನು ಪುರಸಭೆಯ ಪೌರ ಕಾರ್ಮಿಕರು ಸ್ಯಾನಿಟೈಜ್‌ ಮಾಡಿದರು.