ಹಾಸ್ಟೆಲ್‌ಗಳ ಮೇಲೆ ನಿಗಾ

ಜಿಲ್ಲೆಯ ಹಾಸ್ಟೆಲ್ ವಿದ್ಯಾರ್ಥಿ-ಸಿಬ್ಬಂದಿಗೆ ಕೋವಿಡ್ ಟೆಸ್ಟ್‌ಗೆ ಡಿಸಿ ಸೂಚನೆ

ದಾವಣಗೆರೆ, ಡಿ. 7- ಜಿಲ್ಲೆಯಲ್ಲಿಯೂ ಕಳೆದ ಹತ್ತು ದಿನಗಳಿಂದೀಚೆಗೆ ಪಾಸಿಟಿವ್ ಪ್ರಮಾಣ ಏರುಗತಿಯಲ್ಲಿ ಸಾಗಿದ್ದು, ಸರ್ಕಾರದ ಸೂಚನೆಯಂತೆ ಜಿಲ್ಲೆಯ ಎಲ್ಲ ಹಾಸ್ಟೆಲ್‍ಗಳಲ್ಲಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಆರ್‍ಟಿಪಿಸಿಆರ್ ಪರೀಕ್ಷೆಯನ್ನು ಎರಡು ದಿನಗಳ ಒಳಗಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೋವಿಡ್ ನಿರ್ವಹಣೆ ತುರ್ತು ಸಭೆ ಹಾಗೂ ವೈದ್ಯಕೀಯ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಹತ್ತು ದಿನಗಳ ಹಿಂದೆ 0.06 ಇದ್ದ ಕೋವಿಡ್ ಪ್ರಮಾಣ, ಐದು ದಿನಗಳ ಬಳಿಕ 0.09 ಹಾಗೂ ಡಿ. 06 ರ ವೇಳೆಗೆ 0.13 ಕ್ಕೆ ಏರಿಕೆ ಕಂಡಿದೆ.  ಹೀಗಾಗಿ ಇದು ಕೋವಿಡ್ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಳವಾಗುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ ಎಂದು ಹೇಳಿದರು.

ಕೋವಿಡ್‌ 3ನೇ ಅಲೆ ಸಮರ್ಥವಾಗಿ ಎದುರಿಸಲು ನಾವು ಈಗಿನಿಂದಲೇ ಸನ್ನದ್ಧರಾಗಬೇಕಿದೆ. ಪ್ರತಿನಿತ್ಯ 1500 ರಿಂದ 2000 ಟೆಸ್ಟ್ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಕೇರಳ ಮತ್ತು ಮಹಾರಾಷ್ಟ್ರ ರಾಜ್ಯದಿಂದ ಆಗಮಿಸುವವರು 72 ಗಂಟೆಯೊಳಗಿನ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದ್ದು, ಜಿಲ್ಲೆಯನ್ನು ರಿಸ್ಕ್‍ಗೆ ಒಳಪಡಿಸಲು ನಾವು ಸಿದ್ಧವಿಲ್ಲ, ಹೀಗಾಗಿ ದಾವಣಗೆರೆ ಮತ್ತು ಹರಿಹರದ ರೈಲ್ವೆ ನಿಲ್ದಾಣ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ಜಿಲ್ಲೆಯೊಳಗೆ ಪ್ರವೇಶಿಸುವ ಪ್ರದೇಶಗಳಲ್ಲಿ ಚೆಕ್‍ಪೋಸ್ಟ್ ಹಾಕಿ, ಪರಿಶೀಲಿಸುವಂತೆ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿನ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಪ್ರತಿಯೊಂದು ಹಾಸ್ಟೆಲ್‍ಗಳು ಅಲ್ಲದೆ, ಖಾಸಗಿ ವಸತಿಯುತ ಶಾಲೆಗಳ ಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸ ಕರು, ಸಿಬ್ಬಂದಿಗಳು, ಅಡುಗೆಯವರು.  ನರ್ಸಿಂಗ್, ಪ್ಯಾರಾಮೆಡಿಕಲ್, ವೈದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಅಂಗನ ವಾಡಿ ಸಹಾಯಕಿಯರು ಮತ್ತು ಮೇಲ್ವಿ ಚಾರಕರು ಎಲ್ಲರಿಗೂ ಆರ್‍ಟಿಪಿಸಿಆರ್ ಪರೀಕ್ಷೆಯನ್ನು ಎರಡ್ಮೂರು ದಿನಗಳ ಒಳಗಾಗಿ ಕೈಗೊಳ್ಳಲೇಬೇಕು.  ಇದರ ಜೊತೆಗೆ ಆರೋಗ್ಯ ಇಲಾಖೆಯು ಹೆಚ್ಚು ರಿಸ್ಕ್ ವಲಯದಲ್ಲಿ ಬರುವ ಡ್ರೈವರ್, ಕಂಡ ಕ್ಟರ್, ಹೋಟೆಲ್, ರೆಸ್ಟೋರೆಂಟ್, ಹೆಚ್ಚು ಜನಸಂದಣಿ ಇರುವೆಡೆ ಕೆಲಸ ಮಾಡುವ ಹಮಾಲರು ಮುಂತಾದವರಿಗೂ ಆರ್‍ಟಿಪಿ ಸಿಆರ್ ಟೆಸ್ಟ್ ಮಾಡಬೇಕು.  ಇದು ಜಿಲ್ಲೆಯ ಎಲ್ಲ ತಾಲ್ಲೂಕುಗಳ ಮಟ್ಟದಲ್ಲೂ ಕೂಡ ಪರೀಕ್ಷೆ ನಡೆಯಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.  ಜಿಲ್ಲೆಯ ಎಲ್ಲ ಖಾಸಗಿ ವಸತಿಯುತ ಶಾಲೆಗಳಿಗೆ ಕೂಡಲೇ ಭೇಟಿ ನೀಡಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಸಿಬ್ಬಂದಿಗಳ ಆರೋಗ್ಯ ವಿವರವನ್ನು ಖುದ್ದು ಸಂಗ್ರಹಿಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸುವಂತೆ ಡಿಡಿಪಿಐ ಅವರಿಗೆ ಸೂಚನೆ ನೀಡಿದರು.

ಲಸಿಕೆಯಲ್ಲಿ ಜಿಲ್ಲೆ ಮುಂಚೂಣಿ: ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕಾಕರಣದಲ್ಲಿ ಮೊದಲನೆ ಡೋಸ್‍ನಲ್ಲಿ ಶೇ. 96 ರಷ್ಟು ಹಾಗೂ ಎರಡನೆ ಡೋಸ್‍ನಲ್ಲಿ ಶೇ. 61 ರಷ್ಟು ಸಾಧನೆಯಾಗಿದ್ದು, ರಾಜ್ಯದಲ್ಲಿಯೇ ದಾವಣಗೆರೆ ಜಿಲ್ಲೆ ಮುಂಚೂಣಿಯಲ್ಲಿದೆ.  ಬಾಕಿ ಉಳಿದಿರುವೆಡೆ ಎಸ್‍ಪಿ, ಜಿಪಂ ಸಿಇಒ ಸೇರಿದಂತೆ ನಾನೇ ಖುದ್ದಾಗಿ, ಜನರ ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮಾಸ್ಕ್ ಧರಿಸದವರಿಗೆ ದಂಡ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ನಗರಪಾಲಿಕೆ ಪ್ರದೇಶಗಳಲ್ಲಿ 250 ರೂ. ಮತ್ತು ಇನ್ನಿತರೆ ಪ್ರದೇಶಗಳಲ್ಲಿ 100 ರೂ. ದಂಡ ವಿಧಿಸುವಂತೆ  ಸರ್ಕಾರ ಸೂಚನೆ ನೀಡಿದ್ದು, ಅದನ್ನು ಜಾರಿಗೊಳಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.  ಸಾರ್ವಜನಿಕರು  ದಂಡ ವಿಧಿಸಲು ಅವಕಾಶ ನೀಡದೆ, ಪ್ರತಿಯೊಬ್ಬರೂ ತಪ್ಪದೇ ಮಾಸ್ಕ್ ಧರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‍ಒ ಡಾ. ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಆರೋಗ್ಯ ಇಲಾಖೆಯ ಅನುಷ್ಠಾನ ಅಧಿಕಾರಿಗಳು, ವಿವಿಧ ವೈದ್ಯಕೀಯ ಸಂಸ್ಥೆಗಳ ತಜ್ಞ ವೈದ್ಯರು, ವೈದ್ಯಕೀಯ ಸಲಹಾ ಸಮಿತಿಯ ಸದಸ್ಯರು ಭಾಗವಹಿಸಿದ್ದರು.