ತ್ರಿವಿಧ ದಾಸೋಹದಿಂದ ಭಕ್ತರ ಕಷ್ಟಗಳಿಗೆ ನೆರವಾದ ಅನ್ನದಾನ ಶ್ರೀ

ತ್ರಿವಿಧ ದಾಸೋಹದಿಂದ ಭಕ್ತರ ಕಷ್ಟಗಳಿಗೆ ನೆರವಾದ ಅನ್ನದಾನ ಶ್ರೀ

ದಾವಣಗೆರೆ, ಡಿ.5-  ಹಾಲಕೆರೆ ಸಂಸ್ಥಾನ ಮಠದ ಜಗದ್ಗುರು ಶ್ರೀ ಡಾ|| ಅಭಿನವ ಅನ್ನದಾನ ಮಹಾಸ್ವಾಮೀಜಿ ತ್ರಿವಿಧ ದಾಸೋಹದ ಮೂಲಕ ಭಕ್ತರ ಕಷ್ಟಗಳಿಗೆ ನೆರವಾಗಿದ್ದು, ಗುರು ವಿರಕ್ತ ಎಂಬ ಭೇದ ಬೇಡ ಎಂಬ ನಿಲುವು ಹೊಂದಿದ್ದ  ಅವರು, ತ್ಯಾಗ ಜೀವನದ ಮೂಲಕ ಎಲ್ಲರ ಹೃದಯದಲ್ಲಿ ನೆಲೆಸಿದ್ದಾರೆ. 

ಒಂದು ವರ್ಷಗಳ ಕಾಲ ಬಸವ ಪುರಾಣವನ್ನು ಆರಂಭಿಸಿದ್ದು, ಶ್ರೀಗಳು ಒಂದೇ ಕಡೆ ಪ್ರವಚನ ಇರಬಾರದು ಎಂಬ ಕಾರಣಕ್ಕೆ ಪ್ರತಿ ದಿನ ಒಂದೊಂದು ಊರಿನಲ್ಲಿ ಪ್ರವಚನ ನಡೆಸಲು ನಿರ್ಧರಿಸಿ, ಸಂಚಾರ ಬಸವ ಪುರಾಣವನ್ನು ಆರಂಭಿಸಿದರು. ಬಸವಾದಿ ಶರಣರ ತತ್ವಗಳನ್ನು ಇಟ್ಟುಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು  ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ನುಡಿ ನಮನ ಸಲ್ಲಿಸಿದರು.

ನಗರದ ಅನ್ನದಾನೀಶ್ವರ ಸಾರ್ವಜನಿಕ ಸೇವಾ ಟ್ರಸ್ಟ್‍ನಿಂದ ದೇವರಾಜ ಅರಸು ಬಡಾವಣೆ ಬಿ. ಬ್ಲಾಕ್‍ನಲ್ಲಿರುವ ಅನ್ನದಾನೀಶ್ವರ ಶಾಖಾ ಮಠದ ಆವರಣದಲ್ಲಿ ಇಂದು ಏರ್ಪಾಡಾಗಿದ್ದ ಲಿಂಗೈಕ್ಯ ಹಿರಿಯ ಜಗದ್ಗುರು ಡಾ|| ಅಭಿನವ ಅನ್ನದಾನ ಸ್ವಾಮಿಗಳವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ  ಸ್ವಾಮೀಜಿ ಆಶೀರ್ವಚನ ನೀಡಿ, ಗುರು-ವಿರಕ್ತ ಪರಂಪರೆಯನ್ನು ವೀರಶೈವ ಲಿಂಗಾಯತ ಸಮಾಜದ ಎರಡು ಕಣ್ಣುಗಳಂತೆ ಅನ್ನದಾನೀಶ್ವರ ಸ್ವಾಮೀಜಿ ಕಂಡಿದ್ದರು ಎಂದು ನುಡಿದರು.

ಒಂದು ಮಹಾಮಠದ ಜೊತೆಗೆ 30 ಶಾಖಾ ಮಠಗಳನ್ನು ಸ್ಥಾಪಿಸುವ ಮೂಲಕ ವಿದ್ಯೆ, ಅನ್ನ ಪ್ರಸಾದ ನೀಡಿದರು. ಹಾನಗಲ್ ಶಿವಯೋಗ ಮಂದಿರದ ಮೂಲಕ ಅನೇಕ ಸ್ವಾಮೀಜಿಗಳನ್ನು ನೀಡಿದವರು. ಧ್ವನಿ ಇಲ್ಲದವರಿಗೆ ಧ್ವನಿಯಾದವರು. ರೈತರಿಗೆ ಪುನರ್ ಚೈತನ್ಯ ನೀಡಲು ಶ್ರಮಿಸಿದವರು. ಅವರ ಬದುಕೇ ಚೈತನ್ಯದ ಬೆಳಕು ಎಂದು ಬಣ್ಣಿಸಿದರು.

ಶಿಕ್ಷಕ ಮಹಾಂತೇಶ್ ಶಾಸ್ತ್ರಿ ಮಾತನಾಡಿ, ಹಾಲಕೆರೆ ಪರಂಪರೆಯನ್ನು ವಿವರಿಸಿದರು. ಅನ್ನದಾನೀಶ್ವರ ಶಾಖಾ ಮಠದ ಉಪಾಧ್ಯಕ್ಷ ಡಾ. ಎಚ್.ಬಿ. ಶಿವಕುಮಾರ್  ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ಉಪಾಧ್ಯಕ್ಷ ಅಮರಯ್ಯ ಗುರುವಿನ ಮಠ, ಕಾರ್ಯದರ್ಶಿ ಎನ್. ಅಡಿವೆಪ್ಪ, ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ಓಂಕಾರಪ್ಪ, ಸ್ಫೂರ್ತಿ ಸೇವಾ ಸಂಘದ ಅಧ್ಯಕ್ಷ ಬಸವರಾಜ್, ನಾಗರಾಜ್ ಎರಗಲ್, ಸ್ಮಾರ್ಟ್ ಸಿಟಿ ಎಂ.ಡಿ. ರವೀಂದ್ರ ಮಲ್ಲಾಪುರ್, ಹರಿಹರ ನಗರ ಸಭೆ ಇಂಜಿನಿಯರ್ ಎಸ್.ಎಸ್.ಬಿರಾದಾರ್ ಮತ್ತು ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಶ್ರೀ ಗುರು ಪಂಚಾಕ್ಷರಿ ಸಂಗೀತ ವಿದ್ಯಾಲಯದ ಟಿ.ಎಚ್.ಎಂ. ಶಿವಕುಮಾರಸ್ವಾಮಿ ಪ್ರಾರ್ಥಿಸಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಬಾವಿ ಸ್ವಾಗತಿಸಿದರು. ಶಿಕ್ಷಕಿಯರಾದ ಶ್ರೀಮತಿ ವಿ.ಬಿ. ತನುಜಾ, ಶ್ರೀಮತಿ ಸುಜಾತ ನಿರೂಪಿಸಿದರು.