ಭದ್ರಾ ಇಇ ಕಛೇರಿ ಸ್ಥಳಾಂತರಕ್ಕೆ ಬಿಡುವುದಿಲ್ಲ : ಸಿದ್ದೇಶ್ವರ್

ಭದ್ರಾ ಇಇ ಕಛೇರಿ ಸ್ಥಳಾಂತರಕ್ಕೆ ಬಿಡುವುದಿಲ್ಲ : ಸಿದ್ದೇಶ್ವರ್

ಮಲೇಬೆನ್ನೂರು, ನ.30- ಮಲೇಬೆನ್ನೂರಿನಲ್ಲಿರುವ ಭದ್ರಾ ನಾಲಾ ನಂ-3 ವಿಭಾಗದ ಕಾರ್ಯಪಾಲಕ ಅಭಿಯಂತರ ಕಛೇರಿಯನ್ನು ಯಾವುದೇ ಕಾರಣಕ್ಕೂ ಬೇರೆಡೆಗೆ ಸ್ಥಳಾಂತರ ಮಾಡಲು ಬಿಡುವುದಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಭರವಸೆ ನೀಡಿದ್ದಾರೆ ಎಂದು ಹೊಳೆಸಿರಿಗೆರೆಯ ಬಿ. ಶೇಖರಪ್ಪ ತಿಳಿಸಿದರು.

ಮಾಜಿ ಶಾಸಕ ಬಿ.ಪಿ. ಹರೀಶ್‌, ಹಿರಿಯ ಮುಖಂಡ ಎನ್‌.ಜಿ. ನಾಗನಗೌಡ್ರು ಅವರ ನೇತೃತ್ವದಲ್ಲಿ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರು ಮಂಗಳವಾರ ಭೀಮಸಮುದ್ರದಲ್ಲಿ ಸಂಸದ ಸಿದ್ದೇಶ್ವರ ಅವರನ್ನು ಭೇಟಿ ಮಾಡಿದಾಗ ಭದ್ರಾ ಇಂಜಿನಿಯರ್‌ ಕಛೇರಿ ಸ್ಥಳಾಂತರ ಮಾಡದಂತೆ ಸಿಎಂ ಹಾಗೂ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ತಿಳಿಸುತ್ತೇನೆಂದು ಹೇಳಿದ್ದಾರೆ.

ಅಲ್ಲದೆ, ಶಾಸಕ ಎಸ್‌. ರಾಮಪ್ಪ ಅವರು ಕೂಡಾ ಭದ್ರಾ ಇಂಜಿನಿಯರ್ ಕಛೇರಿ ಸ್ಥಳಾಂತರಕ್ಕೆ ಸರ್ಕಾರ ಮುಂದಾದರೆ, ರೈತರೊಂದಿಗೆ ಹೋರಾಟಕ್ಕೆ ಇಳಿಯುವುದಾಗಿ ತಿಳಿಸಿದ್ದಾರೆಂದು ಬಿ. ಶೇಖರಪ್ಪ ಹೇಳಿದರು.

ರೈತರ ನಿಯೋಗದಲ್ಲಿ ಹೊಳೆಸಿರಿಗೆರೆಯ ಮಾಳಗಿ ರುದ್ರಪ್ಪ, ಮಾಳಗಿ ಮಲ್ಲೇಶಪ್ಪ, ಮಾಗನೂರು ರಾಮನಗೌಡ, ಶಿವರುದ್ರಪ್ಪ, ಕುಂದೂರು ರಾಜು, ಎರೇಸೀಮೆ ಈರಪ್ಪ, ಮಾಗೋಡ್‌ ರವಿ, ಭಾನುವಳ್ಳಿಯ ಆರ್‌.ಸಿ. ಪಾಟೀಲ್‌, ಯಲವಟ್ಟಿಯ ಡಿ.ಹೆಚ್‌. ಚನ್ನಬಸಪ್ಪ, ಶಾಂತಪ್ಪ ಮತ್ತಿತರರು ಇದ್ದರು.