ಕ್ರೀಡಾಕೂಟದಲ್ಲಿ ಸ್ನೇಹದಿಂದಿರಿ

ಕ್ರೀಡಾಕೂಟದಲ್ಲಿ ಸ್ನೇಹದಿಂದಿರಿ

ಹರಪನಹಳ್ಳಿ ತಾಲ್ಲೂಕು ಮಟ್ಟದ ಕಾಲೇಜು ಕೂಟದಲ್ಲಿ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ

ಹರಪನಹಳ್ಳಿ, ನ.30- ವಿದ್ಯಾರ್ಥಿಗಳು ಕಲಿಕೆ ಜೊತೆಗೆ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಕ್ರೀಡೆಯಿಂದ ದೇಹ ಮತ್ತು ಮನಸು ಸದೃಢವಾಗಿರುತ್ತದೆ ಎಂದು ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಬಂಗಿ ಬಸಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.

ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಎರಡನ್ನೂ ಸಮಾನವಾಗಿ ಸ್ವೀಕರಿಸಿ. ಕ್ರೀಡೆಯಲ್ಲಿ ಎಲ್ಲರ ಜೊತೆ ಸ್ನೇಹ, ಬಾಂಧವ್ಯದಿಂದ ನಡೆದುಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಮಹೇಶ್ ನರ್ಸಿಂಗ್ ಹೋಂನ ವೈದ್ಯ ಡಾ.ಎಸ್.ಎನ್ ಮಹೇಶ್ ಮಾತನಾಡಿ, ಮನುಷ್ಯನಿಗೆ ಆರೋಗ್ಯವೇ ಮಹಾ ಭಾಗ್ಯ. ಆರೋಗ್ಯದಲ್ಲಿ ಸುಧಾರಣೆ ಇದ್ದರೆ ಕ್ರೀಡೆ ಸೇರಿದಂತೆ ಯಾವುದೇ ಕೆಲಸ ಮಾಡಲು ಸದೃಢನಾಗಿರುತ್ತಾನೆ. ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.

ಟಿಎಂಎಇ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ ಚಂದ್ರಶೇಖರಯ್ಯ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು. ಬಂಗಿ ಬಸಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿ.ವಿ. ಅರುಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕ್ರೀಡಾ ಕೂಟದ ಸಲಹಾ ಸಮಿತಿ ಅಧ್ಯಕ್ಷರು ಮತ್ತು ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಕೆ. ದುರುಗಪ್ಪ, ಹೆಚ್‍ಪಿಎಸ್ ಪಿಯು ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುನಾಥ ಬೆನಕನಕೊಂಡ, ಪ್ರಾಚಾರ್ಯ ತೊಪ್ಪಲ ಹಾಲೇಶ್, ಎಸ್.ಕೆ ಹಿರೇಮಠ್, ಎಂ.ಆರ್. ಪ್ರಸನ್ನಕುಮಾರ್, ಬಿ.ಬಸವರಾಜ್, ಅರುಣ್ ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ  ಸಿದ್ದಲಿಂನಗೌಡ್ರು,  ತಾಲ್ಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಚನ್ನಬಸಪ್ಪ, ದೈಹಿಕ ಶಿಕ್ಷಕ ವೆಂಕಟೇಶ್, ಲಕ್ಯನಾಯ್ಕ್, ಜನಾರ್ದನ ರೆಡ್ಡಿ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.