ಕಾಂಗ್ರೆಸ್‌ಗೆ ಮತ ನೀಡಿ ಬಿಜೆಪಿಗೆ ಪಾಠ ಕಲಿಸಿ

ಕಾಂಗ್ರೆಸ್‌ಗೆ ಮತ ನೀಡಿ ಬಿಜೆಪಿಗೆ ಪಾಠ ಕಲಿಸಿ

ಜಗಳೂರಿನ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ ಕರೆ

ಜಗಳೂರು, ನ.29- ಕಾಂಗ್ರೆಸ್ ಪಕ್ಷದ ಆಡಳಿತಾವಧಿ ಯಲ್ಲಿನ  ಜನಪರ ಯೋಜನೆಗ ಳನ್ನು ಮನಗಂಡು ವಿಧಾನ ಪರಿ ಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ, ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕಾಂಗ್ರೆಸ್ ವತಿಯಿಂದ ಇಂದು ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರದುರ್ಗ, ದಾವಣಗೆರೆ ಪರಿಷತ್ ಕ್ಷೇತ್ರದಲ್ಲಿ ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಬಾರಿಯೂ ಸಹ ಅಭ್ಯರ್ಥಿ ಬಿ.ಸೋಮಶೇಖರ್ ಅವರ ಗೆಲುವು ನಿಶ್ಚಿತ ಎಂದರು.

ಕೇಂದ್ರದಲ್ಲಿ  ಯು.ಪಿ.ಎ ಸರ್ಕಾರದ  ಅವಧಿಯಲ್ಲಿ ನರೇಗಾ ಯೋಜನೆ ಉದ್ಯೋಗ ಸೃಷ್ಟಿಗೆ ನೇರ ವಾಗಿ ಕೇಂದ್ರದಿಂದ ಗ್ರಾಮ ಪಂಚಾ ಯಿತಿಗೆ ಅನುದಾನ ಒದಗಿಸಲಾಗಿದೆ. ಅಲ್ಲದೇ, ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಹಣ ಬಿಡುಗಡೆ ಮಾಡುವ ಚೆಕ್ ಪವರ್ ನೀಡಿದಂತಹ ಕೆಲಸ ಮಾಡಿದೆ ಎಂದರು.

ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಮಾತನಾಡಿ, ತಾಲ್ಲೂಕಿನಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಒತ್ತಡದಿಂದ ಅಧಿಕಾರ ನಿಭಾಯಿಸುವಂತಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಗ್ರಾಮ ಪಂಚಾಯತಿ ಆಡಳಿತಕ್ಕೆ ಸಂಪೂರ್ಣ ಅಧಿಕಾರ ನೀಡಿ, ಹಳ್ಳಿಗಳ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದು ರಾಜೇಶ್ ತಿಳಿಸಿದರು. 

ವಿಧಾನ ಪರಿಷತ್ ಅಭ್ಯರ್ಥಿ ಸೋಮಶೇಖರ್ ಮತ ಯಾಚನೆ ಮಾಡಿ, ನಾನು ಅಧಿಕಾರಕ್ಕೆ ಬಂದರೆ, ಗ್ರಾಮ ಪಂಚಾಯತಿ ಸದಸ್ಯರಿಗೆ ಕೇರಳ ಮಾದರಿ ಗೌರವ ಧನ ನೀಡಲು ಹೋರಾಟ ಮಾಡುತ್ತೇನೆ ಎಂದು ಭರವಸೆ ನೀಡಿದರು. 

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ, ಬ್ಲಾಕ್ ಉಸ್ತುವಾರಿಗಳಾದ ಕಲ್ಲೇಶ್‌ರಾಜ್ ಪಟೇಲ್, ಬಿ.ಟಿ.ಜಗದೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮದ್, ಕಮ್ಮತ್ತಹಳ್ಳಿ ಮಂಜಣ್ಣ, ಮುಖಂಡರಾದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಕೆಂಚಮ್ಮ ಧನ್ಯಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷೆ ನಾಗರತ್ನಮ್ಮ, ಜಿ.ಪಂ. ಮಾಜಿ ಸದಸ್ಯರಾದ ಸಿ.ಲಕ್ಷ್ಮಣ, ಎಸ್.ಕೆ.ರಾಮರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.