ಛಲ, ಸತತ ಪ್ರಯತ್ನ ಇದ್ದರೆ ಏನಾದರೂ ಸಾಧಿಸಲು ಸಾಧ್ಯ

ಛಲ, ಸತತ ಪ್ರಯತ್ನ ಇದ್ದರೆ ಏನಾದರೂ ಸಾಧಿಸಲು ಸಾಧ್ಯ

ಯುಪಿಎಸ್‌ಸಿ ಪರೀಕ್ಷೆಯಲ್ಲಿ 235ನೇ ರಾಂಕ್‌ ಪಡೆದ ಶ್ರೀನಿವಾಸ್ ಅಭಿಮತ

ಮಲೇಬೆನ್ನೂರು, ನ.14- ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ಗೊತ್ತಾದಾಗ ಆದ ಸಂತಸ ಕ್ಕಿಂತಲೂ ಸ್ವಂತ ಊರಿನಲ್ಲಿ ಈ ಸನ್ಮಾನ ಸ್ವೀಕ ರಿಸಿರುವುದು ಸಂತಸವನ್ನು ಇಮ್ಮಡಿಸಿದೆ ಎಂದು ಎಂ.ಪಿ. ಶ್ರೀನಿವಾಸ್‌ ಹರ್ಷ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದ ಸಮುದಾಯ ಭವನದಲ್ಲಿ ಇಲ್ಲಿನ 1977-78 ನೇ ಸಾಲಿನ ಗೆಳೆಯರು ಸೇರಿ ಇಂದು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸತತ ಪರಿಶ್ರಮ, ನಿರಂತರ ಓದು ಹಾಗೂ ಹಿರಿಯರು ನೀಡಿದ ಸಲಹೆಗಳು ನಾನು 5ನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 235ನೇ ರಾಂಕ್‌ ಪಡೆಯಲು ಸಹಕಾರಿಯಾದವು.

ಪ್ರತಿಯೊಬ್ಬರೂ ಜೀವನದಲ್ಲಿ ಛಲ ಹಾಗೂ ಸತತ ಪ್ರಯತ್ನಪಟ್ಟರೆ ಏನಾದರು ಸಾಧನೆ ಮಾಡಲು ಸಾಧ್ಯ ಇದೆ ಎಂದು ತಿಳಿಸಿದ ಶ್ರೀನಿವಾಸ್‌ ಅವರು, ನನ್ನ ತಂದೆ ಎಂ.ಪಿ. ಪ್ರಸನ್ನ ಅವರ ಜೊತೆ ಓದಿದ್ದ ಆಗಿನ ಎಲ್ಲಾ ಗೆಳೆಯರು ಸೇರಿ ನನ್ನನ್ನು ಅಭಿನಂದಿಸಿರುವುದಕ್ಕೆ ಆಭಾರಿಯಾಗಿದ್ದೇನೆ.

ಈ ವೇಳೆ ಸನ್ಮಾನಿತರಾದ ನಿವೃತ್ತ ಹಿರಿಯ ಶಿಕ್ಷಕರಾದ ಕೆ. ಮೊಹ್ಮದ್‌ ಅತಾವುಲ್ಲಾ ಅವರು ಮಾತನಾಡಿ, ಯುಪಿಎಸ್ಸಿ ಬಹಳ ಕಷ್ಟಕರವಾದ ಪರೀಕ್ಷೆಯಾಗಿದ್ದರೂ, ಸಾಧಿಸಬೇಕೆಂಬ ಛಲ ಹೊಂದಿದವರಿಗೆ ಅದು ಸುಲಭ ಎಂಬುದನ್ನು ನಮ್ಮ ಪ್ರೀತಿಯ ಶಿಷ್ಯ ಪ್ರಸನ್ನ ಅವರ ಮಗ ಶ್ರೀನಿವಾಸ್‌ ತೋರಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಶ್ರೀನಿವಾಸ್‌ ಅವರಿಗೆ ಪಟ್ಟಣದಲ್ಲಿ ಮೊದಲು ನಾಗರಿಕ ಸನ್ಮಾನ ಆಗಬೇಕಿತ್ತು ಎಂದರು.

ಇನ್ನೋರ್ವ ನಿವೃತ್ತ ಹಿರಿಯ ಶಿಕ್ಷಕರಾದ ಯು.ಎಂ. ಕಲ್ಯಾಣಯ್ಯ ಮಾತನಾಡಿ, ನಮಗೆ ಶಿಕ್ಷಣ ಕಲಿಸಿದ ವಿದ್ಯಾರ್ಥಿಗಳು 40 ವರ್ಷಗಳ ನಂತರ ಎಲ್ಲರೂ ಒಟ್ಟಾಗಿ ಈ ಕಾರ್ಯಕ್ರಮ ಏರ್ಪಡಿಸಿ ನಮ್ಮನ್ನು ಕರೆದು ಸನ್ಮಾನಿಸಿರುವುದು ಜೀವನದ ಸಾರ್ಥಕ ಕ್ಷಣ ಎಂದು ಭಾವಿಸುತ್ತೇನೆಂದು ಭಾವುಕರಾದರು.

ನಮ್ಮ ವಿದ್ಯಾರ್ಥಿ ಸಿವಿಲ್‌ ಇಂಜಿನಿಯರ್‌ ಓದಿ ಗೌಹಾಟಿಯ ಐಐಟಿ ಮುಖ್ಯಸ್ಥರಾಗಿ ಶ್ರೀರಾಮ ಜನ್ಮ ಭೂಮಿಯ ಬುನಾದಿ ಕೆಲಸದ ಜವಾಬ್ದಾರಿ ಹೊತ್ತಿರುವ ಡಾ. ಟಿ.ಜಿ. ಸೀತಾ ರಾಮ್‌ ಅವರ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಮತ್ತೋರ್ವ ಹಿರಿಯ ನಿವೃತ್ತ ಶಿಕ್ಷಕರಾದ ಡಿ. ಬಸವರಾಜಪ್ಪ ಮಾತನಾಡಿ, ಮಲೇಬೆನ್ನೂರಿನ ಹುಡುಗ ಐಎಎಸ್‌ ಪಾಸ್‌ ಮಾಡಿರುವುದು ಹರಿಹರ ತಾಲ್ಲೂಕಿಗೆ ಹೆಮ್ಮೆಯ ವಿಷಯ ಎಂದರು.

ಉದ್ಯಮಿ ಹಾಗೂ ಹಳೇ ವಿದ್ಯಾರ್ಥಿ ಸೈಯದ್‌ ರೋಷನ್‌, ಡಿ.ಕೆ. ಸುಬ್ಬರಾವ್‌, ವಕೀಲ ದ್ವಾರಕನಾಥ್‌, ಸುದರ್ಶನ್‌, ಹೊಸಮನೆ ರಮೇಶ್‌, ಸುರೇಶ್‌ ಶಾಸ್ತ್ರಿ ಮಾತನಾಡಿ, ನಮಗೆ ಶಿಕ್ಷಣ ಕಲಿಸಿಕೊಟ್ಟು ಉತ್ತಮ ಬದುಕಿಗೆ ಕಾರಣೀಕರ್ತರಾದ ಗುರುಗಳನ್ನು ಗೌರವಿಸಿರುವುದು ಜಿವನದ ಅತ್ಯಂತ ಸಂತಸದ ಕ್ಷಣ ಎಂದರು. 

ಕೆ.ಎಂ. ಜಗದೀಶ್‌ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಡಿವೈಎಸ್ಪಿ ಎಂ.ಪಿ. ಶಂಕರ್‌ಭಟ್, ಇಂಜಿನಿಯರ್‌ ಶೇಷಾದ್ರಿ, ಎಂ.ಪಿ. ಪ್ರಸನ್ನ, ಮಕ್ಸೂದ್‌ ಅಲಿ, ದಿಬ್ದಹಳ್ಳಿಯ ಓಂಕಾರಪ್ಪ, ಕೊಮಾರನಹಳ್ಳಿಯ ದಾನಪ್ಳ ರಂಗನಾಥ್‌, ಪೆಟ್ರೋಲ್‌ ಬಂಕ್‌ ಪ್ರಕಾಶ್‌, ಅಕ್ಕಿ ವ್ಯಾಪಾರಿ ಹೆಚ್‌.ಎಸ್‌. ವೀರಭದ್ರಯ್ಯ, ಜಿ.ಬೇವಿನಹಳ್ಳಿಯ ದೇವರಾಜ್‌, ಸಿ.ಟಿ. ಮಂಜುನಾಥ್‌, ಮುರುಳಿ, ಪಾಂಡು, ಜಿಗಳಿಯ ಜಿ.ಆರ್. ಹಾಲೇಶ್‌ಕುಮಾರ್‌ ಮತ್ತು ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಭೋವಿ ಕುಮಾರ್‌, ಜೆ. ನಾಗಭೂಷಣ್‌ ಮತ್ತಿತರರು ಕಾರ್ಯಕ್ರಮದಲ್ಲಿ ಆಗಮಿಸಿದ್ದರು.

ಶಿಕ್ಷಕ ಗೋಪಾಲ್‌ರಾವ್‌ ಸ್ವಾಗತಿಸಿದರು. ಸುರೇಶ್‌ ಶಾಸ್ತ್ರಿ ವಂದಿಸಿದರು.