ಮಲೇಬೆನ್ನೂರಿನ ನಂದಿ ಸೌಹಾರ್ದ ಸಹಕಾರಿಗೆ 29 ಲಕ್ಷ ರೂ. ನಿವ್ವಳ ಲಾಭ

ಮಲೇಬೆನ್ನೂರಿನ ನಂದಿ ಸೌಹಾರ್ದ ಸಹಕಾರಿಗೆ 29 ಲಕ್ಷ ರೂ. ನಿವ್ವಳ ಲಾಭ

ಮಲೇಬೆನ್ನೂರು, ನ.12- ಇಲ್ಲಿನ ಶ್ರೀ ನಂದಿ ಪತ್ತಿನ ಸಹಕಾರ ಸಂಘವು ಶ್ರೀ ನಂದಿ ಸೌಹಾರ್ದ ಸಹಕಾರಿ ನಿಯಮಿತವಾಗಿ ಪರಿವರ್ತನೆಗೊಂಡ ನಂತರ 2ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ನಾಳೆ ಮಧ್ಯಾಹ್ನ 3 ಗಂಟೆಗೆ  ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರಿ ಅಧ್ಯಕ್ಷ ಹಳ್ಳಿಹಾಳ್ ಹೆಚ್. ವೀರನಗೌಡ ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, 2020-21 ಸಾಲಿನಲ್ಲಿ ಸಹಕಾರಿಯು 41,59,38,489 ಕೋಟಿ ರೂ. ವ್ಯವಹರಿಸಿದ್ದು, 29,12,256 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯ ಎಲ್ಲಾ ಪ್ರದೇಶಗಳು ನಮ್ಮ ಸಹಕಾರಿಯ ಕಾರ್ಯಕ್ಷೇತ್ರವಾಗಿದ್ದು, 2,806 ಸದಸ್ಯರನ್ನು ಹಾಗೂ 69,86,300 ಲಕ್ಷ ರೂ. ಷೇರು ಹಣ ಹೊಂದಿರುತ್ತದೆ ಎಂದು ಹೇಳಿದರು.

ಕೊರೊನಾ ಸಂಕಷ್ಟದ ನಡು ವೆಯೂ ಈ ಆರ್ಥಿಕ ವರ್ಷದಲ್ಲಿ 1,49,45,864 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, ಒಟ್ಟು 10,44,25,888 ಕೋಟಿ ರೂ. ಠೇವಣಿ ಹಣ ಸಹಕಾರಿಯಲ್ಲಿದೆ. ಠೇವಣಿ ಮಾಡಿದ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ನಾವು ಆಭಾರಿಯಾಗಿದ್ದೇವೆ ಎಂದರು.

ಸದಸ್ಯರಿಗೆ ಮತ್ತು ಗ್ರಾಹಕರಿಗೆ  8,28,43,040 ಕೋಟಿ ರೂ. ಗಳನ್ನು ವಿವಿಧ ಉದ್ದೇಶಗಳಿಗೆ ಸಾಲ ನೀಡಿದ್ದು, ಈ ಸಾಲಿನಲ್ಲಿ 65,70,335 ಲಕ್ಷ ರೂ. ಸುಸ್ತಿ ಬಾಕಿ ಇದೆ. ಈ ಸಂಬಂಧ 21 ಜನರಿಗೆ ನೋಟಿಸ್ ನೀಡಲಾಗಿದೆ. ಒಟ್ಟು 14,72,45,574 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿರುವ ಸಹಕಾರಿಯು ಈ ವರ್ಷ ಸದಸ್ಯರಿಗೆ ಲಾಭಾಂಶದಲ್ಲಿ ಶೇ. 11 ರಷ್ಟು ಡಿವಿಡೆಂಡ್‌ ನೀಡಲು ಉದ್ದೇಶಿಸಿದೆ ಎಂದು ಹೆಚ್. ವೀರನಗೌಡ ತಿಳಿಸಿದರು.

ಸಹಕಾರಿಯ ಹಿರಿಯ ನಿರ್ದೇಶಕ ಜಿಗಳಿಯ ಇಂದೂಧರ್, ಕಾರ್ಯದರ್ಶಿ ಹೆಚ್.ಎಂ. ಬಸವರಾಜ್ ಈ ವೇಳೆ ಹಾಜರಿದ್ದರು.