ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಅಗತ್ಯ: ಸುಜಾತ ಕೃಷ್ಣ

ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಅಗತ್ಯ: ಸುಜಾತ ಕೃಷ್ಣ

ದಾವಣಗೆರೆ, ಅ.21- ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ರೂಪಿಸುವ ಮಹತ್ತರ ಕಾರ್ಯ ಶಿಕ್ಷಕರಿಂದ ಮಾತ್ರ ಸಾಧ್ಯ. ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತಿದಾಗ ಸಂಸ್ಕಾರವಂತರಾಗಿ ರೂಪುಗೊಳ್ಳುತ್ತಾರೆ. ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡುವ ಅಗತ್ಯವಿದೆ  ಎಂದು ಈಶ್ವರಮ್ಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಶ್ರೀಮತಿ ಕೆ.ಆರ್. ಸುಜಾತ ಕೃಷ್ಣ ಹೇಳಿದರು.

ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಸಭಾಂಗಣದಲ್ಲಿ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ `ಜ್ಞಾನಜ್ಯೋತಿ’ ವನಿತಾ ಶಿಕ್ಷಕಿಯರ ವೇದಿಕೆ, ವನಿತಾ ಸಮಾಜದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಾಲಾ ಶಿಕ್ಷಕರ ಮೌಲ್ಯ ಶಿಕ್ಷಣ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜೀವನ ಮೌಲ್ಯಾಧಾರಿತ ಶಿಕ್ಷಣವನ್ನು ಶಾಲೆಗಳಲ್ಲಿ ಮೊದಲು ಆರಂಭಿಸಿದ ಸತ್ಯಸಾಯಿ ಶಿಕ್ಷಣ ಸಂಸ್ಥೆಗಳಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಮಾಜಿ ಶಿಕ್ಷಣ ಸಚಿವೆ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಅವರ ಶಿಕ್ಷಣದ ಬಗೆಗಿನ ಅಪಾರ ಕಾಳಜಿಯಿಂದಾಗಿ ಈಶ್ವರಮ್ಮ ಶಾಲೆಯಲ್ಲಿ ಮೌಲ್ಯಾಧರಿತ ಶಿಕ್ಷಣವನ್ನು ಮಕ್ಕಳಿಗೆ ಕಲಿಸಿಕೊಡಲು ಪ್ರಾರಂಭಿಸಲಾಯಿತು ಎಂದರು.

ಕಾರ್ಯಾಗಾರ ಉದ್ಘಾಟಿಸಿದ ಡಯಟ್ ಪ್ರಾಚಾರ್ಯ  ಹೆಚ್.ಕೆ. ಲಿಂಗರಾಜ್ ಮಾತನಾಡಿ, ಮಹಾನ್ ಶಿಕ್ಷಕರು ಮಹಾನ್ ವಿದ್ಯಾರ್ಥಿಗಳನ್ನು ರೂಪಿಸಲು ಸಾಧ್ಯವಿದೆ. ಕೇವಲ ದೃಷ್ಟಿ ಇದ್ದರೆ ಸಾಲದು, ದೃಷ್ಠಿಕೋನ ಮುಖ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಅಗತ್ಯತೆ ಇದೆ ಎಂದರು. ಜ್ಞಾನಜ್ಯೋತಿ ವನಿತಾ ಶಿಕ್ಷಕಿಯರ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗರಾಜ್ ಮಾತನಾಡಿದರು. ವಿದ್ಯಾ ಹೆಗಡೆ ಪ್ರಾರ್ಥಿಸಿದರು. ಈಶ್ವರಮ್ಮ ಶಾಲಾ ಪ್ರಾಂಶುಪಾಲರಾದ ಕೆ.ಎಸ್. ಪ್ರಭುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕಿ ಶ್ವೇತ ನಿರೂಪಿಸಿದರು. ಜ್ಞಾನಜ್ಯೋತಿ ವನಿತಾ ಶಿಕ್ಷಕಿಯರ ವೇದಿಕೆಯ ನೀಲಗುಂದ ಜಯಮ್ಮ, ಶಶಿರೇಖ, ಅರುಂಧತಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ನಂತರರ ನಡೆದ ಕಾರ್ಯಾಗಾರದಲ್ಲಿ `ಶಿಕ್ಷಣ ನೀತಿಗಳು ನಡೆದು ಬಂದ ದಾರಿ’ ಕುರಿತು ಡಯಟ್ ಪ್ರಾಚಾರ್ಯ ಹೆಚ್.ಕೆ. ಲಿಂಗರಾಜ್, `ಸಮರ್ಥ ಶಿಕ್ಷಕ ರಾಷ್ಟ್ರದ ಅಭಿವೃದ್ಧಿಯ ನೇತಾರ’ ವಿಷಯದ ಬಗ್ಗೆ ನಿವೃತ್ತ ಪ್ರಾಂಶುಪಾಲರಾದ ಎ.ಪಿ. ಸುಜಾತ, `ಶಿಕ್ಷಣ ಮತ್ತು ಮುನ್ನಡೆ’ ಕುರಿತು ಶಿಕ್ಷಣಾಧಿಕಾರಿ ಡಾ. ಪುಷ್ಪಲತಾ, `ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಠ್ಯ ಮತ್ತು ಬೋಧನಾ ಕ್ರಮ’ದ ಬಗ್ಗೆ ಶಿಕ್ಷಣ ತಜ್ಞ ಡಾ. ಹೆಚ್.ವಿ. ವಾಮದೇವಪ್ಪ ಮಾತನಾಡಿದರು.