ಗಾಂಧೀಜಿ ಹೆಸರು ಇಡೀ ಜಗತ್ತಿಗೇ ಅಹಿಂಸಾ ತತ್ವ

ಗಾಂಧೀಜಿ ಹೆಸರು ಇಡೀ ಜಗತ್ತಿಗೇ ಅಹಿಂಸಾ ತತ್ವ

ಅಂತರರಾಷ್ಟ್ರೀಯ ಅಹಿಂಸಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾ. ಪ್ರವೀಣ್‍ ನಾಯಕ್ ಅಭಿಮತ

ದಾವಣಗೆರೆ, ಅ.21 – ಬಾಪೂಜಿ ಹುಟ್ಟಿದ ದಿನವನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಹಾತ್ಮ ಗಾಂಧಿ ಎಂಬ ಹೆಸರು ಭಾರತೀಯರಿಗೆ ಮಾತ್ರ ಪ್ರೇರಕ ಶಕ್ತಿಯಲ್ಲ. ಬದಲಾಗಿ ಇಡೀ ಜಗತ್ತಿಗೇ ಅಹಿಂಸಾ ತತ್ವವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್‍ ನಾಯಕ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಖಿ ಒನ್ ಸ್ಟಾಫ್ ಸೆಂಟರ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಶ್ರೀರಾಮ ನಗರದಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಇಂದು ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಅಹಿಂಸಾ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜೀ  ಹೆಸರು ಅಹಿಂಸಾ ಧ್ಯೋತಕವಾಗಿರುವುದ ರಿಂದ ಅಕ್ಟೋಬರ್ 2ನ್ನು ವಿಶ್ವಸಂಸ್ಥೆ ಅಹಿಂಸಾ ದಿನವನ್ನಾಗಿ ಘೋಷಿಸಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜೀ ಅವರ ಅಮೂಲ್ಯ ಕೊಡುಗೆಗಳನ್ನು ಗೌರವಿಸಬೇಕು. ಅವರ ಚಿಂತನೆಗಳನ್ನು, ಆದರ್ಶಗಳ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ವಕೀಲ ಎಲ್.ಹೆಚ್.ಅರುಣ್‍ಕುಮಾರ್, ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿಂಸೆ, ಕ್ರೌರ್ಯಗಳನ್ನು ತಡೆಯಲು ಗಾಂಧೀಜಿಯಂತಹ ಶಾಂತಿ ಧೂತರ ತತ್ವಗಳನ್ನು ಜಗತ್ತಿಗೆ ಜ್ಞಾಪಿಸುವುದು ಅವಶ್ಯಕವಾಗಿದೆ. ಗಾಂಧೀಜಿಯವರ ಜೀವನವೇ ಒಂದು ಸಂದೇಶವಾಗಿದ್ದು, ಅವರ ಅಹಿಂಸಾ ಮಾರ್ಗದ ಹೋರಾಟ ಚಳವಳಿಗಳಿಗೆ ಪ್ರೇರಕ ಶಕ್ತಿಯಾಗಬೇಕು ಎಂದು ಅವರು ಆಶಿಸಿದರು.

ಆರ್‍ಎಲ್‍ ಲಾ ಕಾಲೇಜಿನ ಪ್ರಾಧ್ಯಾಪಕ ವಿದ್ಯಾಧರ್ ವೇಶವರ್ಮ ಮಾತನಾಡಿ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 2007ನೇ ಇಸವಿಯಿಂದ ವಿಶ್ವ ಅಹಿಂಸಾ ದಿನವನ್ನು ಘೋಷಿಸಿದೆ. ಮಹಾತ್ಮ ಗಾಂಧೀಜಿಯವರ ಆದರ್ಶವನ್ನು ಪ್ರತಿಯೊಬ್ಬರು ಪಾಲಿಸಿಕೊಂಡು ಜೀವನವನ್ನು ಯಶಸ್ವಿಗೊಳಿಸಿಕೊಳ್ಳಬೇಕು. ಗಾಂಧೀಜಿ ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಹೆಚ್. ವಿಜಯಕುಮಾರ್, ಜಿಲ್ಲಾ ಮಹಿಳಾ ಸಂರಕ್ಷ ಣಾಧಿಕಾರಿ ಪೂರ್ಣಿಮಾ, ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಸುಜಾತ, ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಮೈತ್ರಾ, ಸಖಿ ಕೇಂದ್ರದ ಕಾನೂನು ಸಲಹೆಗಾರರಾದ ತಂಜೀಮಾ ಕೌಸರಿ, ಮಧುರ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.