ಲಾಠಿ ಪ್ರಯೋಗವೊಂದೇ ಪರಿಹಾರವಲ್ಲ

ಮೊನ್ನೆಯ ಶನಿವಾರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕುಂದೂರಿನಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದ ಮುಖ್ಯಮಂತ್ರಿಯನ್ನು ನೋಡಲು ಬಂದ ಬಾಲಕನ ತಲೆಗೆ ಪೊಲೀಸ್ ಸಿಬ್ಬಂದಿಯೊಬ್ಬರು ಟೋಪಿಯಿಂದ (ಟೋಪಿಯಲ್ಲಿರುವ ಲೋಹ) ಹೊಡೆದಿದ್ದು ಬಾಲಕನ ತಲೆಗೆ ಗಾಯವಾಗಿ ರಕ್ತ ಸುರಿದಿದೆ.  

ಕರ್ತವ್ಯದ ಹೆಸರಲ್ಲಿ ಸಾರ್ವಜನಿಕರ ಮೇಲೆ ಪೊಲೀಸರ ದೌರ್ಜನ್ಯ ಇಂದು-ನಿನ್ನೆಯದಲ್ಲ, ಆಗಾಗ್ಗೆ  ಇಂತಹ ದುರ್ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ಪೊಲೀಸ್ ಇಲಾಖೆ ಹೇಗೆ ತಾನೇ ಸಾರ್ವಜನಿಕರ ವಿಶ್ವಾಸ ಗಳಿಸಲು ಸಾಧ್ಯ? ಏನೂ ಅರಿಯದ ತಮ್ಮ ಮಕ್ಕಳು ಕೂಡ ತಪ್ಪು ಮಾಡಿದಾಗ ಇದೇ ರೀತಿ  ತಮ್ಮ ಮಕ್ಕಳಿಗೆ ರಕ್ತ ಸುರಿಯುವಂತೆ ಹೊಡೆಯುವರೇ? ಅಧಿಕಾರ, ಸಮವಸ್ತ್ರ, ಕೈಯಲ್ಲಿ ಲಾಠಿ ಇದೆ ಎಂದು ಏನು ಬೇಕಾದರೂ ಮಾಡಲಾದೀತೇ? ಮುಗ್ಧ ನಾಗರಿಕರ ಮೇಲೆ ಲಾಠಿ ಪ್ರಯೋಗವೊಂದೇ ಪರಿಹಾರವಲ್ಲ ಎಂಬುದನ್ನು ಮೊದಲು ಅರಿಯಬೇಕು.

ಸಾರ್ವಜನಿಕರ ಸಹಕಾರವಿಲ್ಲದೆ ಪೊಲೀಸ್ ಇಲಾಖೆಯವರು ಏನೂ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯೆಂದರೆ ಭಯ, ಲಾಠಿ ಏಟು ಎನ್ನುವುದನ್ನು ಹೋಗಲಾಡಿಸಬೇಕೆ ಹೊರತು, ಇನ್ನಷ್ಟು ಭಯಭೀತಿಗೊಳಿಸಬಾರದು. ಸರ್ಕಾರ ಪೊಲೀಸ್ ಇಲಾಖೆಯನ್ನು ಎಷ್ಟೇ ಜನ ಸ್ನೇಹಿ ಮಾಡಲು ಹೊರಟರೂ ಜನರು ಇಂತಹ ಘಟನೆಗಳಿಂದ ಇನ್ನಷ್ಟು ದೂರವಾಗುವುದರಲ್ಲಿ ಅನುಮಾನವೇ ಇಲ್ಲ.


-ಮುರುಗೇಶ ಡಿ., ದಾವಣಗೆರೆ.