ಹಬ್ಬಗಳಲ್ಲಿ ಮೆರವಣಿಗೆ ನಿಷೇಧ

ಹಬ್ಬಗಳಲ್ಲಿ ಮೆರವಣಿಗೆ ನಿಷೇಧ

ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿ ಪಾಲಿಸಲು ಡಿಸಿ ಸೂಚನೆ

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ನಿಯಂತ್ರಣದಲ್ಲಿದ್ದು, ದಸರಾ ಹಾಗೂ ಈದ್ ಮಿಲಾದ್ ಹಬ್ಬಗಳಲ್ಲಿ ಮೆರವಣಿಗೆ ನಡೆಸಲು ಅವಕಾಶ ಕಲ್ಪಿಸುವಂತೆ ಹಿಂದೂ-ಮುಸ್ಲಿಂ ಮುಖಂಡರು ಸಭೆಯಲ್ಲಿ ಮನವಿ ಮಾಡಿ ಕೊಂಡರು.  ಆದರೆ ಜಿಲ್ಲಾಧಿಕಾರಿಗಳು ಮತ್ತು ಎಸ್‍ಪಿ ಅವರು ಸರ್ಕಾರದ ಮಾರ್ಗಸೂಚಿ ಯಂತೆ ಮೆರವಣಿಗೆಗೆ ಅವಕಾಶವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು.

ದಾವಣಗೆರೆ, ಅ.11- ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ದಸರಾ ಹಾಗೂ ಈದ್‍ಮಿಲಾದ್‌ ಹಬ್ಬಗಳ ಆಚರಣೆಗಾಗಿ ಹೊರಡಿಸಿರುವ ಮಾರ್ಗಸೂಚಿ ಯನ್ನು ಪಾಲಿಸಿಕೊಂಡು, ಸೌಹಾರ್ದಯುತವಾಗಿ ದಸರಾ ಹಾಗೂ ಈದ್‍ಮಿಲಾದ್ ಹಬ್ಬಗಳನ್ನು ಆಚರಿಸಬೇಕು. ಯಾವುದೇ ಸಾಮೂಹಿಕ ಮೆರವಣಿಗೆಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ದಸರಾ, ಈದ್‍ಮಿಲಾದ್ ಹಬ್ಬಗಳ ಆಚರಣೆ ನಿಮಿತ್ಯ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ನಾಗರಿಕ ಸೌಹಾರ್ದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ಇಲ್ಲದ ಸಂದರ್ಭಗಳಲ್ಲಿ ನಾವು ಎಲ್ಲ ಹಬ್ಬಗಳನ್ನು ಸಾಂಪ್ರದಾಯಿಕವಾಗಿ ವಿಜೃಂಭಣೆಯ ಮೆರವಣಿಗೆ ಸಹಿತ ಆಚರಿಸಿದ್ದೇವೆ.  ಆದರೆ ಕೋವಿಡ್ ಸೋಂಕು ಕಳೆದೆರಡು ವರ್ಷಗಳಿಂದ ಇಂತಹ ವಿಜೃಂಭಣೆಯ ಆಚರಣೆಗಳಿಗೆ ತಡೆಹಾಕಿದ್ದು, ಎಲ್ಲರ ಆರೋಗ್ಯ ದೃಷ್ಟಿಯಿಂದ, ಸರ್ಕಾರ ಕೋವಿಡ್ ನಿಯಂ ತ್ರಣಕ್ಕಾಗಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸುವುದು ಅನಿವಾರ್ಯವಾಗಿದೆ ಎಂದರು.

ಈ ಹಿಂದೆಯೂ ಕೂಡ ಎಲ್ಲ ಸಮಾಜದವರೂ, ಸರ್ಕಾರದ ಆದೇಶಗಳಂತೆ ಹಬ್ಬಗಳನ್ನು ಸರಳವಾಗಿ ಆಚರಿಸಿ, ಸಹಕರಿಸಿದ್ದರ ಫಲವಾಗಿ ಇದೀಗ ಕೋವಿಡ್ ಸದ್ಯ ನಿಯಂತ್ರಣದಲ್ಲಿದೆ. ಆದಾಗ್ಯೂ ತಜ್ಞರ ಎಚ್ಚರಿಕೆ ಮೇರೆಗೆ ಮುಂಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ ಎಂದರು. ಸರ್ಕಾರದ ನಿರ್ಬಂಧಗಳನ್ನು ಸಡಿಲಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರವಿಲ್ಲ. ಆದರೆ ಅಗತ್ಯಬಿದ್ದರೆ ಇನ್ನಷ್ಟು ನಿರ್ಬಂಧ ವಿಧಿಸಲು ಅವಕಾಶವಿದೆ.  ಹೀಗಾಗಿ ಅ. 15 ರವರೆಗಿನ ದಸರಾ ಹಾಗೂ ಅ. 20 ರಂದು ಈದ್‍ಮಿಲಾದ್ ಎರಡೂ ಹಬ್ಬಗಳ ಆಚರಣೆಯನ್ನು ಸರ್ಕಾರದ ಮಾರ್ಗಸೂಚಿಯಂತೆ ಆಚರಿಸಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಹಬ್ಬಗಳ ಆಚರಣೆ ನಮಗೂ ಖುಷಿ ತರುವ ವಿಷಯವೇ. ವಿಜೃಂಭಣೆಯ ಮೆರವಣಿಗೆಗಳನ್ನು ನಿರ್ಬಂಧಿಸುವುದರಿಂದ ನಮಗೂ ಖುಷಿ ದೊರೆಯುವುದಿಲ್ಲ.  ಆದರೆ ಅನಿವಾರ್ಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲೇಬೇಕಿದೆ. ಕಳೆದೆರಡು ವರ್ಷಗಳಿಂದ ಎಲ್ಲರೂ ಸಹಕರಿಸಿದ್ದಾರೆ.  ಈ ಬಾರಿಯೂ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಡಿವೈಎಸ್‍ಪಿ ಬಸವರಾಜ್ ಅವರು ದಸರಾ ಹಾಗೂ ಈದ್‍ಮಿಲಾದ್ ಹಬ್ಬ ಆಚರಣೆ ಸಂಬಂಧ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಬಗ್ಗೆ ವಿವರಿಸುತ್ತಾ, ಈಗಾಗಲೇ ಆರಂಭವಾಗಿ 9 ದಿನಗಳ ಕಾಲ ಆಚರಿಸುವ ದಸರಾ ಹಬ್ಬದ ಕಾರ್ಯಕ್ರಮಗಳಲ್ಲಿ 400 ಕ್ಕಿಂತ ಹೆಚ್ಚು ಜನರು ಒಮ್ಮೆಲೆ ಸೇರುವಂತಿಲ್ಲ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಅ. 20 ರಂದು ಆಚರಿಸಲಾಗುವ ಈದ್‍ಮಿಲಾದ್ ಹಬ್ಬದಲ್ಲಿ ಸಾಮೂಹಿಕ ಮೆರೆವಣಿಗೆಯನ್ನು ನಿಷೇಧಿಸಲಾಗಿದೆ.  ಮೊಹಲ್ಲಾಗಳಲ್ಲಿ ನಡೆಯುವ ಯಾವುದೇ ರೀತಿಯ ಹಗಲು ಮತ್ತು ರಾತ್ರಿಯ ಪ್ರವಚನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಿ 100 ಕ್ಕಿಂತ ಹೆಚ್ಚು ಜನ ಒಮ್ಮೆಲೇ ಸೇರುವಂತಿಲ್ಲ. ಸಾಮೂಹಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು.  ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕಗಳು, ಡಿಜಿಟಲ್ ಸೌಂಡ್ (ಡಿಜೆ) ಬಳಕೆ ನಿಷೇಧಿಸಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು. ಮಸೀದಿ ಪ್ರವೇಶಿಸುವ ಮೊದಲು ದೇಹದ ತಾಪಮಾನ ತಪಾಸಣೆ ಮಾಡುವ ವ್ಯವಸ್ಥೆ ಮಾಡಬೇಕಿದೆ ಎಂದು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಹಿಂದೂ, ಹಾಗೂ ಮುಸ್ಲಿಂ ಸಮಾಜದ ಮುಖಂಡರು ಈ ಸಂದರ್ಭದಲ್ಲಿ ಮಾತನಾಡಿ ಸರ್ಕಾರದ ಮಾರ್ಗಸೂಚಿಯಂತೆ ಹಬ್ಬಗಳನ್ನು ಆಚರಿಸುವ ಮೂಲಕ ನಾವು ಸಹಕಾರ ನೀಡುವುದಾಗಿ ಹೇಳಿದರು. 

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಜೀವ್ ಸೇರಿದಂತೆ ಎಲ್ಲ ಡಿವೈಎಸ್‍ಪಿಗಳು, ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.