ಭರಮಸಾಗರ : ಜಲರಾಶಿಯನ್ನು ಕಣ್ತುಂಬಿಕೊಂಡ ಸಿರಿಗೆರೆ ಶ್ರೀ

ಭರಮಸಾಗರ : ಜಲರಾಶಿಯನ್ನು ಕಣ್ತುಂಬಿಕೊಂಡ ಸಿರಿಗೆರೆ ಶ್ರೀ

ಭರಮಸಾಗರ, ಅ.11- ತುಂಗಭದ್ರಾ ನದಿಯಿಂದ ಭರಮಸಾಗರ ಕೆರೆಗೆ ಕಳೆದ ಸೆಪ್ಟೆಂಬರ್ 29ರಂದು ನೀರು ಹರಿದುಬಂದಿದ್ದು, ಸಿರಿಗೆರೆಯ ತರಳಬಾಳು ಬೃಹನ್ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಾವಿರಾರು ಭಕ್ತರ ಜಯಘೋಷಗಳ ನಡುವೆ ಇಂದು ಭರಮಸಾಗರದ ಕೆರೆ ವೀಕ್ಷಿಸಿದರು. 

ನಂತರ ನಡೆದ ಸಭೆಯಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿ ಮಾತನಾಡಿ, ಈ ಯೋಜನೆ ಸಾಕಾರಗೊಳ್ಳಲು ಸಿದ್ಧರಾಮಯ್ಯ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರುಗಳ ನೇತೃತ್ವದ ಸರ್ಕಾರಗಳು, ಆನಂತರ ಆಡಳಿತಕ್ಕೆ ಬಂದ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಕಾರಣವಾಗಿದೆ. ಈ ಯೋಜನೆ ಕಾರ್ಯಗತಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಧುಸ್ವಾಮಿ, ಸಿ.ಟಿ. ರವಿ, ಗೋವಿಂದ ಕಾರಜೋಳ, ಸಿ. ಸಿ. ಪಾಟೀಲರು ಕಾರಣರು.  ಈ ಐದು ಜನ ರಾಜಕೀಯ ಧುರೀಣರು ಮುತ್ತೈದೆಯರು ಇದ್ದಂತೆ ಎಂದು ಬಣ್ಣಿಸಿದ ಶ್ರೀಗಳು, ಕರ್ನಾಟಕದಲ್ಲಿಯೇ ಇದು ಮಹತ್ವದ ಏತ ನೀರಾವರಿ ಯೋಜನೆಯಾಗಿದೆ. ಇದಕ್ಕೆ ಹಲವರು ಹಗಲು, ಇರುಳು ಶ್ರಮಿಸಿದ್ದಾರೆ. ಕಲ್ಪನಹಳ್ಳಿಯಲ್ಲಿ ಕೊಳವೆ ಮಾರ್ಗ ಹೋಗಲು ವಾಸದ ಮನೆಯನ್ನು ಬಿಟ್ಟುಕೊಟ್ಟವರು ನಿಜವಾಗಿಯು ತ್ಯಾಗಜೀವಿಗಳು. ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಅವರ ತ್ಯಾಗ ಅಭಿನಂದನೀಯ ಎಂದರು. 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ಜಿ. ಎಂ. ಸಿದ್ದೇಶ್ವರ ನೀರು, ವಿದ್ಯುತ್, ರಸ್ತೆ, ಗುಣಮಟ್ಟದ ಬೀಜ, ಗೊಬ್ಬರ, ಬೆಳೆಗಳಿಗೆ ಸೂಕ್ತ ಬೆಲೆ ಕೊಟ್ಟರೆ ರೈತರ ಬದುಕು ಹಸನಾಗುತ್ತದೆ ಎಂಬುದು ಜಗದ್ಗುರುಗಳ ಆಶಯ. ಭರಮಸಾಗರದ ಕೆರೆ ತುಂಗಭದ್ರೆಯಿಂದ ಭರ್ತಿಯಾದರೆ 40-50 ಹಳ್ಳಿಗಳ ಅಂತರ್ಜಲ ಹೆಚ್ಚಾಗುತ್ತದೆ. ಇದ ರಿಂದ ಜನ – ಜಾನುವಾರುಗಳಿಗೆ  ಅನುಕೂಲ ವಾಗುತ್ತದೆ.  ರೈತರು ಉತ್ತಮ ವಾಣಿಜ್ಯ ಬೆಳೆಗಳನ್ನು ಬೆಳೆದು ಸರ್ಕಾರದ ಹೊರೆಯನ್ನು ಕಡಿಮೆ ಮಾಡಬೇಕು. ಆ ಮೂಲಕ ಸರ್ಕಾರದ ಬೊಕ್ಕಸಕ್ಕೆ ಆದಾಯವನ್ನು ಹೆಚ್ಚಿಸು ವಂತಾಗಬೇಕು ಎಂದರು. 

  ಕೆರೆ ತುಂಬಿಸುವುದರ ಮೂಲಕ ಶ್ರೀ ಗಳು ಸಾರ್ಥಕ ಕೆಲಸ ಮಾಡಿದ್ದಾರೆ. ಪೂಜ್ಯರು ಕೈ ಹಾಕಿದ ಎಲ್ಲಾ ಕೆಲಸಗಳು ಯಶಸ್ವಿ ಯಾಗುತ್ತವೆ ಎಂಬುದಕ್ಕೆ ಈ ಯೋಜನೆ ಸಾಕ್ಷಿಯಾಗಿದೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ಕಳೆದ ಏಳು ವರ್ಷಗಳ ಹಿಂದೆ ಚಾಲನೆ ನೀಡಿದರೂ ಇಂದಿಗೂ ಪೂರ್ಣ ಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಂಸದರು, ಮುಂದಿನ ದಿನಗಳಲ್ಲಿ ಶೀಘ್ರವಾಗಿ ಕೆಲಸ ಪೂರೈಸಲು ಕ್ರಮಕೈಗೊಳ್ಳಲಾಗುತ್ತದೆ ಎಂದರು. 

ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ,     ರೈತರ ಬದುಕು ಹಸನಾಗಬೇಕೆಂಬುದು ತರಳಬಾಳು ಜಗದ್ಗುರುಗಳ ಕನಸು. ಬತ್ತಿಹೋಗಿ, ಮರೆಯಾಗಿ, ಒತ್ತುವರಿಯಾಗಿದ್ದ ಕೆರೆಗೆ ಮರುಜೀವ ತುಂಬಿದವರು. ಸರ್ಕಾರದ ಬಳಿ ಮಠಕ್ಕಾಗಿ ಏನನ್ನೂ ಕೇಳದೆ ಜನತೆಗಾಗಿ ನೀರು ಕೊಡಿ ಎಂದು ಕೇಳುವ ಏಕೈಕ ಪೂಜ್ಯರು. ರಾಜಕೀಯ ಮೇಲಾಟದಿಂದ ಸರಕಾರ ಬದಲಾದರೂ ದೂರದೃಷ್ಟಿ ಮತ್ತು ಇಚ್ಛಾಶಕ್ತಿ ಹೊಂದಿರುವ ಶ್ರೀಗಳು ಸಕಾಲದಲ್ಲಿ ಈ ಕೆರೆಯನ್ನು ತುಂಬಿಸಲು ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಎಂ. ಚಂದ್ರಪ್ಪ ಅವರು ಮಾತನಾಡಿ, ರಾಜಕಾರಣಿಗಳು ಮುಂದಿನ ಚುನಾವಣೆಯಲ್ಲಿ ಹೇಗೆ ಗೆಲ್ಲಬೇಕೆಂಬ ತಂತ್ರಗಳ ಬಗ್ಗೆ ಲೆಕ್ಕಾಚಾರ ಹಾಕುತ್ತಾರೆ. ಆದರೆ ಪೂಜ್ಯರು ಸದಾ ಮುಂದಿನ ಜನಾಂಗ ಹೇಗೆ ಬಾಳಬೇಕೆಂಬ ಕನಸು ಕಾಣುತ್ತಿರುತ್ತಾರೆ. ಅಧಿಕಾರ ಶಾಶ್ವತ ಅಲ್ಲ; ಜನಮೆಚ್ಚುವ ಕೆಲಸಗಳನ್ನು ಮಾಡಬೇಕೆಂಬುದು ನನ್ನ ಆಸೆ. ಈ ಯೋಜನೆಗೆ ಬೇಕಾದ ಪೂರ್ಣ ಹಣವನ್ನು ಸರಕಾರದಿಂದ ಒಂದೇ ಆದೇಶದಲ್ಲಿ ಮಂಜೂರು ಮಾಡಿಸಲಾಯಿತು. ಇಂತಹ ಉದಾಹರಣೆ ಮತ್ತೊಂದಿಲ್ಲ  ಈ ಯೋಜನೆಗೆ ಬೇಕಾದ 220 ಮೆಗಾವ್ಯಾಟ್ ವಿದ್ಯುತ್ತನ್ನು ಜೋಗದಿಂದ ಮುಂದಿನ ಒಂದು ವರ್ಷದೊಳಗೆ ಸರಬರಾಜು ಆಗುವಂತೆ ಮಾಡುತ್ತೇನೆ.  7 ಗಂಟೆಗಳ ಕಾಲ ನಿರಂತರವಾಗಿ ಸರಬರಾಜು ಆಗುವಂತೆ ನೋಡಿಕೊಳ್ಳ ಲಾಗುವುದು ಎಂದು ಚಂದ್ರಪ್ಪ ಭರವಸೆ ನೀಡಿದರು.

ಜಗಳೂರಿನ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಭರಮಸಾಗರದಲ್ಲಿ ಇಂದು ಜಲಸಾಗರ; ಜನಸಾಗರ.  ಈ ಸಂಭ್ರಮವನ್ನು ನೋಡಲು ಕಣ್ಣುಗಳೆರಡು ಸಾಲದು ಎಂದು ಭಾವಾವೇಶಕ್ಕೊಳಗಾದರು. ಮುಂದಿನ ತಿಂಗಳೊಳಗೆ 1500 ಎಕರೆ ವಿಸ್ತೀರ್ಣದ ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ ನೀರನ್ನು ಹರಿಸಲಾಗುತ್ತದೆ. 1200 ಕೋಟಿ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಗೆ ಮುಖ್ಯಮಂತ್ರಿಗಳಿಂದ ಶೀಘ್ರದಲ್ಲೇ ಶಂಕುಸ್ಥಾಪನೆ ಮಾಡಿಸುತ್ತೇನೆ ಎಂದು ಹೇಳಿದರು. 

ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಮಾತನಾಡಿ, ರಾಜ್ಯದಲ್ಲಿಯೇ ಅತಿ ಹೆಚ್ಚು ಉದ್ದವಾದ ಕೊಳವೆ ಮಾರ್ಗವಿದಾಗಿದೆ. ರೈಲ್ವೆ, ಅರಣ್ಯ, ಹೆದ್ದಾರಿ, ವಿದ್ಯುತ್ ಮುಂತಾದ ಹತ್ತಾರು ಇಲಾಖೆಯ ಆಕ್ಷೇಪಗಳನ್ನು ನಿವಾರಿಸಿ, ಸರ್ಕಾರದ ಸಹಕಾರ ಮತ್ತು ಹೆಜ್ಜೆ ಹೆಜ್ಜೆಗೂ ಪೂಜ್ಯರ ಮಾರ್ಗದರ್ಶನದಿಂದ   ಯಶಸ್ವಿಗೊಳಿಸಲಾಗಿದೆ.  ಈ ಯೋಜನೆಗೆ 110 ಕೆ ವಿ ವಿದ್ಯುತ್ ಅಗತ್ಯವಿದೆ. ಅದಕ್ಕೆ ಪ್ರತ್ಯೇಕ ಉಪಠಾಣೆಯನ್ನು ನಿರ್ಮಿಸಬೇಕು. ಈ ಉಪಠಾಣೆ ಪರಿಪೂರ್ಣಗೊಂಡರೆ ಆರು ಮೋಟಾರ್ ಗಳಿಂದ ನೀರೆತ್ತಬಹುದು. ಈಗ ಮೂರು ಮೋಟರ್‌ಗಳಿಂದ ಕೇವಲ ಶೇ. 35ರಷ್ಟು ಮಾತ್ರ ನೀರು ಎತ್ತುವಂತೆ ತಾಂತ್ರಿಕ ಜೋಡಣೆಯಾಗಿದೆ ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಗುಂಗೆ,  ಮುಖ್ಯಮಂತ್ರಿಗಳ ಕಾರ್ಯದರ್ಶಿ ಪ್ರಸನ್ನಕುಮಾರ್, ನೀರಾವರಿ ನಿಗಮದ ಕಾರ್ಯನಿರ್ವಹಣಾ ಇಂಜಿನಿಯರ್ ಗಳಾದ ಮಲ್ಲಪ್ಪ, ಮನೋಜ್‌ಕುಮಾರ್, ವಿಜಯಕುಮಾರ್ ಮುಂತಾದವರನ್ನು ಸನ್ಮಾನಿಸಲಾಯಿತು. 

ಮಾಜಿ ಶಾಸಕ ಹೆಚ್.ಪಿ.ರಾಜೇಶ್, ಯುವ ಮುಖಂಡ ಅನಿತ್ ಕುಮಾರ್,  ನಿಗಮದ ಅಶ್ವತ್ಥ್‌ ಶೆಟ್ಟಿ, ರಾಮಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ  ತಿಪ್ಪೇಸ್ವಾಮಿ, ಸದಸ್ಯ ಡಿ.ವಿ.ಶರಣಪ್ಪ, ನಿವೃತ್ತ ಡಿ ವೈಎಸ್ ಪಿ ಜಗದೀಶ್ ಹಂಪನೂರು, ಆಡಳಿತಾಧಿಕಾರಿ ಎಸ್.ಬಿ.ರಂಗನಾಥ್ ಮುಂತಾದವರು ಉಪಸ್ಥಿತರಿದ್ದರು. 

ಪ್ರಾರಂಭದಲ್ಲಿ ಸುಶ್ರಾವ್ಯ ಸಂಗೀತ ಶಾಲೆಯ ಯಶ ಮತ್ತು ಸಂಗಡಿಗರು ವಚನಗಳನ್ನು ಹಾಡಿದರು. ನೀರಾವಾರಿ ಹೋರಾಟ ಸಮಿತಿ ಅಧ್ಯಕ್ಷ ಶಶಿ ಪಾಟೀಲ್ ಸ್ವಾಗತಿಸಿದರು.