ಪ್ರಧಾನಿ ಜನ್ಮದಿನಕ್ಕೆ ರಕ್ತ ಪತ್ರದ ಶುಭಾಶಯ

ಪ್ರಧಾನಿ ಜನ್ಮದಿನಕ್ಕೆ ರಕ್ತ ಪತ್ರದ ಶುಭಾಶಯ

ದಾವಣಗೆರೆ, ಸೆ.15- ಸೆಪ್ಟೆಂಬರ್ 17 ರಂದು ಇರುವ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ನಿರುದ್ಯೋಗ ದಿನಾಚರಣೆ ಹಾಗೂ ರಕ್ತದಲ್ಲಿ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ರಕ್ತ ಪತ್ರ ಕ್ರಾಂತಿ ಎಂಬ ವಿಶಿಷ್ಟ ರೀತಿಯ ಪ್ರತಿಭಟನೆಯನ್ನು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ನೇತೃತ್ವದಲ್ಲಿ ನಗರದ ಕೇಂದ್ರ ಅಂಚೆ ಕಚೇರಿ ಮುಂಭಾಗ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸೈಯದ್ ಖಾಲಿದ್, ಪ್ರಧಾನಿ ಮೋದಿ 2014ರ ಲೋಕಸಭಾ ಚುನಾವಣಾ ಸಮಯದಲ್ಲಿ ದೇಶದ ಯುವಕರಿಗೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಇಲ್ಲಿಗೆ ಏಳು ವರ್ಷವಾಗಿದ್ದು, 14 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಾಗಿತ್ತು. ಆದರೆ ಉದ್ಯೋಗ ಸೃಷ್ಟಿ ಮಾಡದೆ ಉದ್ಯೋಗವನ್ನು ಸಹ ಕಿತ್ತುಕೊಳ್ಳುತ್ತಿದ್ದು, ದೇಶದ ಯುವಕರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ ಎಂದು ಅಸಮಾ ಧಾನ ವ್ಯಕ್ತಪಡಿಸಿದರು.

ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತ ನಾಡಿ, ಪ್ರಧಾನಿ ಮೋದಿ ಅವರು ದೇಶದ ಜನತೆಗಾಗಿ ಆಡಳಿತ ನಡೆಸುತ್ತಿಲ್ಲ. ಅದರ ಬದಲಾಗಿ ಕೇವಲ ಅದಾನಿ, ಅಂಬಾನಿ ಎಂಬ ಇಬ್ಬರು ಉದ್ಯಮಿಗಳಿಗಾಗಿ ಅಧಿಕಾರ ನಡೆಸುತ್ತಿದ್ದು, 60 ವರ್ಷ ಕಾಂಗ್ರೆಸ್ ಮಾಡಿದ ಸಂಪತ್ತುಗಳನ್ನು ಮಾರಾಟ ಮಾಡುತ್ತಾ ಮನಸೋ ಇಚ್ಛೆ ಅಧಿಕಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ದೇಶದಲ್ಲಿ ಯುವಕರು ಈಗಲಾದರೂ ಎಚ್ಚೆತ್ತುಕೊಂಡು ಹೋರಾಟ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ. ಕೇವಲ ಯುವಕರನ್ನು ಚುನಾವಣೆಯಲ್ಲಿ ದ್ವೇಷ ಬಿತ್ತಿ ಮತ ಗಳಿಸಲು ಬಳಸಲಾಗುತ್ತದೆಯೇ ವಿನಃ ಅವರಿಗೆ ಉದ್ಯೋಗ ಸೃಷ್ಟಿ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಇಂಟಕ್ ಅಧ್ಯಕ್ಷ ಮಂಜುನಾಥ್, ಮೊಹಮ್ಮದ್ ಜಿಕ್ರಿಯಾ, ಕೆ.ಎಲ್. ಹರೀಶ್ ಬಸಾಪುರ, ವಿನಯ್, ನವೀನ್ ನಾಲವಾಡಿ, ಶಶಿಧರ್ ಪಾಟೀಲ್, ಮಹಬೂಬ್ ಬಾಷಾ, ರಾಘವೇಂದ್ರ ಗೌಡ, ಅಣ್ಣೇಶ್, ದೀಪಕ್, ಶಮಿ ದೇವರಹಟ್ಟಿ ಸೇರಿದಂತೆ ಇತರರು ಭಾಗವಹಿಸಿದ್ದರು.