ಕಾಲುಬಾಯಿ ರೋಗ ಉಲ್ಬಣ: ಚಿಕಿತ್ಸೆಗೆ ಮನವಿ

ಕಾಲುಬಾಯಿ ರೋಗ ಉಲ್ಬಣ: ಚಿಕಿತ್ಸೆಗೆ ಮನವಿ

ಹರಪನಹಳ್ಳಿ, ಸೆ.15- ತಾಲ್ಲೂಕಿನ   ಕಂಭತ್ತಹಳ್ಳಿ, ಮತ್ತಿಹಳ್ಳಿ, ಅರಸಿಕೇರಿ ಸೇರಿದಂತೆ ಉಚ್ಚಂಗಿದುರ್ಗ ಗ್ರಾಮಗಳಲ್ಲಿ  ಜಾನುವಾರುಗಳು  ಕಾಲು ಬಾಯಿ ರೋಗಕ್ಕೆ ತುತ್ತಾಗುತ್ತಿದ್ದು, ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ  ಎಂಬುದು ರೈತರ ಆರೋಪವಾಗಿದೆ.

 ಕಂಭತ್ತಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಶ್ರೀನಿವಾಸ ನಾಯಕ ಮಾತನಾಡಿ,  ಕೋವಿಡ್‌ನಿಂದ ರೈತರು, ಜನ ಸಾಮಾನ್ಯರು ತತ್ತರಿಸಿರುವುದು ಒಂದು ಕಡೆಯಾದರೆ,  ಕಳೆದ 15 ದಿನಗಳಿಂದ ಕಂಭತ್ತಹಳ್ಳಿಯಲ್ಲಿಯೇ  ದನ ಕರುಗಳು  ಸೇರಿ ಒಟ್ಟು 50 ಪಶುಗಳು ಕಾಲು ಬಾಯಿ ಹಾಗೂ ಇತರೆ ರೋಗಕ್ಕೆ ತುತ್ತಾಗಿ ಸಾವಿಗೀಡಾಗಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಕಂಭತ್ತಹಳ್ಳಿ ಗ್ರಾಮದ ರೈತ ಸಿದ್ದಪ್ಪ ಅವರು ಕಳೆದ ವರ್ಷ 70-80 ಸಾವಿರ ರೂ. ನೀಡಿ ತಂದಿದ್ದ  ಆಕಳು ಕಾಲು ಬಾಯಿ ರೋಗದಿಂದ ಸತ್ತು ಹೋಗಿದೆ. 

ಮತ್ತೊಂದು ಆಕಳು ಸಹ ಇದೇ ರೋಗದಿಂದ ಬಳಲುತ್ತಿದೆ. ಕಾಲುಬಾಯಿ ರೋಗ ಎಂದು ಹೇಳುತ್ತಾರೆ. ಇಂಜೆಕ್ಷನ್‌ ನೀಡಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಪಶು ಇಲಾಖೆ ಸಹಾಯಕ ನಿರ್ದೆಶಕ ಡಾ. ಶಿವಕುಮಾರ್ ಅವರು ಕಾಲು ಬಾಯಿ ರೋಗಕ್ಕೆ ಶೀಘ್ರವೇ ವ್ಯಾಕ್ಸಿನ್ ಸರ್ಕಾರದಿಂದ ಸರಬರಾಜು ಆಗುತ್ತದೆ ಎಂದರು.

 ವ್ಯಾಕ್ಸಿನ್ ಸರಬರಾಜು ಆದರೆ ಚಿಕಿತ್ಸೆ ನೀಡಲು 7 ತಂಡಗಳನ್ನು ರಚನೆ ಮಾಡಿದ್ದೇವೆ.  7 ವಾಹನಗಳ ಮೂಲಕ ಒಂದು ತಿಂಗಳು ಹಳ್ಳಿಗಳಿಗೆ ತೆರಳಿ ಪ್ರತಿ ಮನೆ ಮನೆಗೂ ಹೋಗಿ ಜಾನುವಾರುಗಳಿಗೆ ವ್ಯಾಕ್ಸಿನ್‌  ಹಾಕ ಲಿದ್ದು, ಅದೇ ಸಿದ್ಧತೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.