ಅನ್ನದಾತನಿಗೆ 5 ಸಾವಿರ ಮಾಸಾಶನ ನೀಡಬೇಕು

ಅನ್ನದಾತನಿಗೆ 5 ಸಾವಿರ ಮಾಸಾಶನ ನೀಡಬೇಕು

ಹರಪನಹಳ್ಳಿ, ಸೆ.15- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಕರ್ತರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಣಕಾರ ಕೆಂಪರಾಜು ಮಾತನಾಡಿ, ಅನೇಕ ವರ್ಷಗಳಿಂದ ಸರ್ಕಾರಿ, ಬಗರ್ ಹುಕ್ಕುಂ ಜಮೀನುಗಳನ್ನು ಅಕ್ರಮವಾಗಿ ಸಾಗುವಳಿ ಮಾಡುತ್ತಾ ಬಂದಂತಹ ರೈತ ಫಲಾನುಭವಿಗಳಿಗೆ ಪಟ್ಟಾ, ಪಹಣಿ ಕೂಡಲೇ ವಿತರಿಸಬೇಕು. ರೈತರು ಬೆಳೆದಂತಹ ಬೆಳೆಗಳಿಗೆ ಬೆಂಬಲ ಬೆಲೆಗಿಂತ ವೈಜ್ಞಾನಿಕ ಬೆಲೆ ಕೊಡ ಬೇಕು, ಅಲ್ಲಿಯವರೆಗೂ ರೈತರು ಮಾಡಿರು ವಂತಹ ಸಂಪೂರ್ಣ ಸಾಲ ಮನ್ನಾ ಮಾಡಬೇಕು.

ಭೂ ಸುಧಾರಣಾ ಕಾಯ್ದೆ 12 ಮತ್ತು 3ನ್ನು ಕೈ ಬಿಡಬೇಕು, ವಿದ್ಯುತ್ ಖಾಸಗೀಕರಣ ಬೇಡ, ರೈತರ ಪಂಪ್ ಸೆಟ್‌ಗಳಿಗೆ 14 ತಾಸು ಉಚಿತ 3 ಪೇಸ್ ವಿದ್ಯುತ್ ಕೊಡಬೇಕು, ಅನ್ನದಾತನಿಗೆ ಮಾಸಿಕ 5 ಸಾವಿರ ಮಾಸಾಶನ ನೀಡಬೇಕು, ಬೆಳೆ ನಷ್ಟವಾದ  ರೈತರಿಗೆ 50 ಸಾವಿರ ಪರಿಹಾರ ಕೊಡಬೇಕು, ಪಿಎಂ ಕಿಸಾನ್ ಯೋಜನೆಯಲ್ಲಿ ಬೆಳೆ ವಿಮೆ ತುಂಬಿರುವ ರೈತರ ಖಾತೆಗೆ ಕೂಡಲೇ ಹಣ ಹಾಕಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ಕೆ.ಡಿಳ್ಳೆಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಮತಾ, ಸುಪುತ್ರ, ನಿಟ್ಟೂರು ಸೋಮಣ್ಣ, ಕೋಟಿ ಪಾಲಾಕ್ಷ ಗೌಡರು, ಕಂಚಿಕೇರಿ ಕೆಂಚಪ್ಪ, ಅರಸಿಕೇರಿ ಹಾಲಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.