ಸಾಮಾಜಿಕ ತಲ್ಲಣಗಳಿಗೆ ಪ್ರತಿಕ್ರಿಯಿಸುವುದು ಕವಿಯ ಜವಾಬ್ದಾರಿ

ಸಾಮಾಜಿಕ ತಲ್ಲಣಗಳಿಗೆ ಪ್ರತಿಕ್ರಿಯಿಸುವುದು ಕವಿಯ ಜವಾಬ್ದಾರಿ

`ಸಂತೆಯಲ್ಲಿ ಸಂತನ ಸುತ್ತಾಟ’ ಕವನ ಸಂಕಲನ ಕೃತಿ ಲೋಕಾರ್ಪಣೆಗೊಳಿಸಿದ ಹಿರಿಯ ಪತ್ರಕರ್ತ ಮಲ್ಲೇಶ್

ದಾವಣಗೆರೆ, ಸೆ.12- ಸಾಮಾಜಿಕ ತಲ್ಲಣಗಳಿಗೆ, ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವುದು ಕವಿಯ ಜವಾಬ್ದಾರಿ ಎಂದು ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಹೇಳಿದರು.

ಸೃಷ್ಟಿ ಗ್ರಂಥಮಾಲೆ (ಚಿತ್ರದುರ್ಗ), ಶ್ರೀ ಸೋಮೇಶ್ವರ ವಿದ್ಯಾಲಯ (ದಾವಣಗೆರೆ) ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಹಂಶಿ ವಿರಚಿತ `ಸಂತೆಯಲ್ಲಿ ಸಂತನ ಸುತ್ತಾಟ’ ಕವನ ಸಂಕಲನ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕವಿತೆ ದೀಢೀರನೆ ಹುಟ್ಟುವುದಿಲ್ಲ. ಕವಿತೆ ಎನ್ನುವುದು ಹಸಿ ಮಣ್ಣನ್ನು ತಂದು ಚಂದದ ಮಡಿಕೆ ಮಾಡುವಂತಹ ಕ್ರಿಯೆ, ಹಾಲು ತುಪ್ಪವಾಗುವಂತಹ ಕ್ರಿಯೆ. ಈ ಎರಡೂ ಕ್ರಿಯೆಗಳಂತೆ ಪದ್ಯಗಳ ರಚನೆಗೂ ತಾಳ್ಮೆ ಅಗತ್ಯ ಎಂದು ಹೇಳಿದರು.

ಸಂತೆಯಲ್ಲಿ ಸಂತನ ಸುತ್ತಾಟ ಕವನ ಸಂಕಲನದಲ್ಲಿರುವ 116 ಕವಿತೆಗಳು ಬೆಂದ ರೊಟ್ಟಿಯಷ್ಟು ರುಚಿಯಾಗಿವೆ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಒಂದು ಬಾರಿ ಹೆಸರು ಮಾಡಿದರೆ ಯಶಸ್ಸು ಆತನನ್ನು ಹುಡುಕಿಕೊಂಡು ಬರುತ್ತದೆ. ಆದರೆ ಹೆಸರು ಮಾಡುವುದೇ ಕಷ್ಟದ ವಿಷಯ ಎಂದರು.

ಸಾಹಿತಿ ಎಸ್.ಓಂಕಾರಯ್ಯ ತವನಿಧಿ ಆಶಯ ನುಡಿಗಳನ್ನಾಡುತ್ತಾ, ಹಂಶಿ ಅವರು ಮನದೊಳಗಿನ ಮಾರುಕಟ್ಟೆ ಪ್ರವೇಶಿಸಿದ್ದಾರೆಂದು ಅವರ ಕೃತಿಯಿಂದ ತಿಳಿಯುತ್ತದೆ. ಯಾವುದನ್ನು ತ್ಯಜಿಸುವುದರಿಂದ ಸುಖ, ಶಾಂತಿ, ನೆಮ್ಮದಿ ಸಿಗುತ್ತದೋ ಅದರ ಹುಡುಕಾಟದಲ್ಲಿ ಸಂತನಿದ್ದಾನೆ. ಇದು ಲೌಕಿಕ ಅಲ್ಲ, ಅಲೌಕಿಕವಾದ್ದದು ಎಂದ ಹೇಳಿದರು.

ಶ್ರೀ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ್, ಹಡಗಲಿಯ ಉದ್ಯಮಿ ಎನ್.ರಾಘವೇಂದ್ರ, ಎ.ಆರ್.ಜಿ. ಕಾಲೇಜು ನಿವೃತ್ತ ಪ್ರಾಧ್ಯಾಪಕರಾದ ಡಾ.ಎಸ್.ವಿ. ಕಮಲಮ್ಮ, ನಿವೃತ್ತ ಸರ್ಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಕೆ.ಪಿ. ಬಸವರಾಜಪ್ಪ, ಕೃತಿಯ ಕರ್ತೃ ಹಂಶಿ ಉಪಸ್ಥಿತರಿದ್ದರು.

ಎಸ್.ಎಸ್. ವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.  ಹೆಚ್.ಆರ್. ಅಶೋಕ ರೆಡ್ಡಿ ಸ್ವಾಗ ತಿಸಿದರು. ಎಂ.ಬಿ. ನಾಗರಾಜ್ ಕಾಕನೂರು ನಿರೂಪಿಸಿ ದರು. ಎನ್.ಆರ್. ತಿಪ್ಪೇಸ್ವಾಮಿ ವಂದಿಸಿದರು.