ದಾವಣಗೆರೆ – ಅರ್ಬನ್ ಬ್ಯಾಂಕಿನಿಂದ ದೂಡಾ ಅಧ್ಯಕ್ಷ ದೇವರಮನಿಗೆ ಹೃದಯಸ್ಪರ್ಶಿ ಸನ್ಮಾನ

ದಾವಣಗೆರೆ – ಅರ್ಬನ್ ಬ್ಯಾಂಕಿನಿಂದ ದೂಡಾ ಅಧ್ಯಕ್ಷ ದೇವರಮನಿಗೆ ಹೃದಯಸ್ಪರ್ಶಿ ಸನ್ಮಾನ

ದಾವಣಗೆರೆ, ಸೆ.12- ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದಿಂದ ನೇಮಕಗೊಂಡಿರುವ ದೇವರಮನೆ ಶಿವಕುಮಾರ್ ಅವರನ್ನು ದಾವಣಗೆರೆ ಅರ್ಬನ್ ಕೋ – ಆಪರೇಟಿವ್ ಬ್ಯಾಂಕ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಲಾಯಿತು.

ದಾವಣಗೆರೆ ಅರ್ಬನ್ ಕೋ – ಆಪರೇಟಿವ್ ಬ್ಯಾಂಕಿನ ಹಿರಿಯ ನಿರ್ದೇಶಕರೂ ಆಗಿರುವ ದೇವರಮನೆ ಶಿವಕುಮಾರ್ ಅವರನ್ನು ಬ್ಯಾಂಕಿನ ಸಭಾಂಗಣದಲ್ಲಿ ನಿನ್ನೆ ಏರ್ಪಾಡಾಗಿದ್ದ ಸರಳ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಆಶಯ ನುಡಿಗಳನ್ನಾಡಿದ ಕೋಗುಂಡಿ ಬಕ್ಕೇಶಪ್ಪ, ದೂಡಾ ಅಧ್ಯಕ್ಷರಾಗಿ ದೇವರಮನೆ ಶಿವಕುಮಾರ್ ಆಯ್ಕೆಯಿಂದಾಗಿ ಸಮಾಜದ ಉನ್ನತ ಸೇವೆಗೆ ಕೊಡುಗೆ ನೀಡಿದ ಕೀರ್ತಿ ದಾವಣಗೆರೆ ಅರ್ಬನ್ ಬ್ಯಾಂಕಿಗೆ ಸಲ್ಲುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ದಾವಣಗೆರೆ ಅರ್ಬನ್ ಕೋ – ಆಪರೇಟಿವ್ ಬ್ಯಾಂಕ್ ನಿರ್ದೇಶಕರಾಗಿದ್ದ ದಿ. ಟಿ.ಜಿ.ಶಿವಯೋಗಪ್ಪ, ದಿ. ಟಿ.ಜಿ.ಷಡಾಕ್ಷರಪ್ಪ, ದಿ. ಹೆಚ್.ಎಂ.ಸೋಮನಾಥಯ್ಯ ಅವರುಗಳು ದೂಡಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರೊಂದಿಗೆ ಸಮಾಜದಲ್ಲಿ ಸಮಾಜದ ಉನ್ನತ ಸ್ಥಾನ – ಮಾನಗಳನ್ನು ಪಡೆದಿದ್ದರು. ಇದೀಗ ಅವರ ಸಾಲಿಗೆ ದೇವರಮನೆ ಶಿವಕುಮಾರ್ ಸೇರ್ಪಡೆಯಾಗಿದ್ದಾರೆ ಎಂದು ಬಕ್ಕೇಶಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬ್ಯಾಂಕಿನ ಹಿರಿಯ ನಿರ್ದೇಶಕರೂ ಆದ ಜವಳಿ ಉದ್ಯಮಿ ಬಿ.ಸಿ.ಉಮಾಪತಿ ಮಾತನಾಡಿ, ಬಡವರ ಸೇವೆ ಸಲ್ಲಿಸಲು ದೂಡಾ ಉನ್ನತ ವೇದಿಕೆಯಾಗಿದ್ದು, ಈ ಅವಕಾಶವನ್ನು ದೇವರಮನೆ ಶಿವಕುಮಾರ್ ಸದುಪಯೋಗಪಡಿಸಿಕೊಳ್ಳಲಿ ಎಂದು ಆಶಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ಅಂದನೂರು ಮುಪ್ಪಣ್ಣ, ಬ್ಯಾಂಕಿನ ನಿರ್ದೇಶಕರೂ ಆದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಟಿ.ಎಸ್.ಜಯರುದ್ರೇಶ್ ಅವರುಗಳು ಮಾತನಾಡಿ, ಬೆಳೆಯುತ್ತಿರುವ ನಗರಕ್ಕೆ ಹೊಸ ಬಡಾವಣೆಯನ್ನು ನಿರ್ಮಿಸಿ, ಬಡವರಿಗೆ ಸೂರು ಕಲ್ಪಿಸುವಂತಾಗಲಿ, ಅದರಿಂದ ದೇವರಮನೆ ಹೆಸರು ಸ್ಥಿರಸ್ಥಾಯಿಯಾಗಿ ಉಳಿಯಲಿ ಎಂದು ಶುಭ ಹಾರೈಸಿದರು.

ಹಿರಿಯ ನಿರ್ದೇಶಕ ಅಂಜ್ಜಪುರ ಶೆಟ್ರು ವಿಜಯಕುಮಾರ್, ಮತ್ತೋರ್ವ ಹಿರಿಯ ನಿರ್ದೇಶಕರೂ ಆದ ವ್ಯವಸ್ಥಾಪನಾ ಮಂಡಳಿ ಸದಸ್ಯ ಕಂಚಿಕೆರೆ ಮಹೇಶ್, ಬ್ಯಾಂಕಿನ ನಿವೃತ್ತ ಉಪ ಪ್ರಧಾನ ವ್ಯವಸ್ಥಾಪಕ ಪಲ್ಲಾಗಟ್ಟೆ ವೀರಣ್ಣ, ಸಿಬ್ಬಂದಿ ಎಂ.ಬಸವರಾಜ್ ಅವರುಗಳು ಮಾತನಾಡಿ, ದೇವರಮನೆ ಅವರಿಗೆ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸ್ಥಾನ ಸಿಕ್ಕಿದ್ದು, ಅದನ್ನು ನಿಭಾಯಿಸುವ ಶಕ್ತಿ ದೊರೆಯುವುದರೊಂದಿಗೆ ಮತ್ತಷ್ಟು ಅವಕಾಶಗಳು ಸಿಗುವಂತಾಗಲಿ ಎಂದು ಅಭಿನಂದಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ದೇವರಮನೆ ಶಿವಕುಮಾರ್, ದೂಡಾದಿಂದ ಹೊಸ ಬಡಾವಣೆವೊಂದನ್ನು ನಿರ್ಮಿಸುವ ಸಂಬಂಧ ಈಗಾಗಲೇ ರೂಪು – ರೇಷೆಗಳನ್ನು ಕೈಗೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಈ ಬಡಾವಣೆಯನ್ನು ಅಸ್ಥಿತ್ವಕ್ಕೆ ತಂದು, ಬಡವರಿಗೆ ಸೂರು ಕಲ್ಪಿಸುವ ಗುರಿ ಹೊಂದಿದ್ದೇನೆ ಎಂದು ತಿಳಿಸಿದರು.

ತಾವು ದಾವಣಗೆರೆ ಅರ್ಬನ್ ಕೋ – ಆಪರೇಟಿವ್ ಬ್ಯಾಂಕ್ ಮೂಲಕ ಸಮಾಜ ಸೇವೆಗೆ ಪಾದಾರ್ಪಣೆ ಮಾಡಿದ್ದು, ಇಲ್ಲಿಂದ ಅನೇಕ ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡ ಶಿವಕುಮಾರ್, ಇಲ್ಲಿ ನೀವು ನೀಡಿದ ಸನ್ಮಾನ ತವರು ಮನೆಯಿಂದ  ಆಶೀರ್ವಾದ ಮಾಡಿದಂತಾಗಿದೆ ಎಂದು ಮಾರ್ಮಿಕವಾಗಿ ವಿಶ್ಲೇಷಿಸಿ, ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.

ನಿರ್ದೇಶಕರುಗಳಾದ ಮತ್ತಿಹಳ್ಳಿ ವೀರಣ್ಣ, ಪಲ್ಲಾಗಟ್ಟೆ ಶಿವಾನಂದಪ್ಪ, ಎಂ.ಚಂದ್ರಶೇಖರ್, ಶ್ರೀಮತಿ ಸುರೇಖಾ ಎಂ.ಚಿಗಟೇರಿ, ನಲ್ಲೂರು ಎಸ್.ರಾಘವೇಂದ್ರ, ಎಂ.ವಿಕ್ರಂ, ವೃತ್ತಿಪರ ನಿರ್ದೇಶಕ ಮುಂಡಾಸ್ ವೀರೇಂದ್ರ, ವಿಶೇಷ ಆಹ್ವಾನಿತರುಗಳಾದ ಬೆಳ್ಳೂಡಿ ಮಂಜುನಾಥ್, ಎಂ.ದೊಡ್ಡಪ್ಪ, ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳಾದ ಬೆಳಗಾವಿ ಬಸವರಾಜಪ್ಪ, ಜಂಬಗಿ ರಾಧೇಶ್, ಕೋಗುಂಡಿ ಕೊಟ್ರೇಶ್ ಅವರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದು, ದೇವರಮನೆ ಶಿವಕುಮಾರ್ ಅವರಿಗೆ ಪುಷ್ಪ ಗುಚ್ಛ ನೀಡಿ ಅಭಿನಂದಿಸಿದರು.

ಶ್ರೀಮತಿ ಎ.ಎಂ.ತೇಜಸ್ವಿನಿ ಅವರ ಪ್ರಾರ್ಥನೆ ನಂತರ ಪ್ರಧಾನ ವ್ಯವಸ್ಥಾಪಕ ಡಿ.ವಿ.ಆರಾಧ್ಯಮಠ ಸ್ವಾಗತಿಸಿದರು. ವೃತ್ತಿಪರ ನಿರ್ದೇಶಕ ಮಲ್ಲಿಕಾರ್ಜುನ ಕಣವಿ ಅವರಿಂದ ವಂದನಾರ್ಪಣೆ, ನಿರ್ದೇಶಕ ಇ.ಎಂ.ಮಂಜುನಾಥ ಅವರಿಂದ ಕಾರ್ಯಕ್ರಮ ನಿರೂಪಣೆ ನಡೆಯಿತು.