ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸುಳ್ಳು ಪ್ರಕರಣಗಳ ದಾಖಲು

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸುಳ್ಳು ಪ್ರಕರಣಗಳ ದಾಖಲು

ದಾವಣಗೆರೆ, ಸೆ.11- ಗೌರಿ ಲಂಕೇಶ್‌ ಅವರು ಕೆಲವು ವಿಚಾರಧಾರೆಗಳನ್ನು ಅಳವಡಿಸಿಕೊಂಡು  ಪತ್ರಕರ್ತರಿಗೆ ಮಾದರಿಯಾಗಿದ್ದರು. ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದ್ದರು. ಇಂತಹ ನೇರ, ದಿಟ್ಟ ಪತ್ರಕರ್ತರು ದೇಶದಲ್ಲಿ ಬಹಳ ಜನ ಇದ್ದಾರೆ. ಆದರೆ, ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಭಯ ಹುಟ್ಟಿಸುವ ವಾತಾವರಣ ಸೃಷ್ಠಿಯಾಗಿದೆ ಎಂದು ವಕೀಲ ಅನೀಸ್‌ ಪಾಷ ಆತಂಕ ವ್ಯಕ್ತಪಡಿಸಿದರು.

ಪ್ರಗತಿಪರ ಚಿಂತಕಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಸ್ಮರಣಾರ್ಥ ತಮ್ಮ ಕಚೇರಿಯಲ್ಲಿ ಮೊನ್ನೆ ಹಮ್ಮಿಕೊಂಡಿದ್ದ `ಗೌರಿ ನೆನಪು’ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಅವರು ಮಾತನಾಡಿದರು. 

ದೇಶದಲ್ಲಿ ಇರುವ ಕೆಲವು ದುಷ್ಟ ಶಕ್ತಿಗಳು ಒಳ್ಳೆಯ ವಿಚಾರವಂತರನ್ನು ಹತ್ಯೆ ಮಾಡಿದರೆ ವಿಚಾರಗಳು ಸತ್ತುಹೋಗುತ್ತವೆಯೇನೋ ಎಂಬ ಭಾವನೆಯಲ್ಲಿದ್ದಾರೆ. ವಿಚಾರವಂತ ವ್ಯಕ್ತಿಗಳನ್ನು ಹತ್ಯೆ ಮಾಡುವುದರಿಂದ ವಿಚಾರಗಳು ಹೆಚ್ಚು ಗಟ್ಟಿಗೊಳ್ಳುತ್ತವೆಯೇ ಹೊರತು ಗೌಣಗೊಳ್ಳುವುದಿಲ್ಲ ಎಂದರು.

ಸರ್ವೋಚ್ಛ ನ್ಯಾಯಾಲಯವು ಕೂಡ ಪ್ರತಿ ಹಂತದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಸತ್ಯವನ್ನು ಪ್ರತಿಪಾದನೆ ಮಾಡುವ ನಿಟ್ಟಿನಲ್ಲಿ ಬಹಳಷ್ಟು ತೀರ್ಪುಗಳನ್ನು ನೀಡಿ ಪತ್ರಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ. ಯಾವುದೇ ಸರ್ಕಾರ ಅಧಿಕಾರದ ಲ್ಲಿದ್ದಾಗ ಪತ್ರಕರ್ತರು ಆ ಸರ್ಕಾರದ ಕೆಲಸ, ಕಾರ್ಯಗಳ ಮತ್ತು ನ್ಯೂನತೆಗಳನ್ನು ನೇರ ವಾಗಿ ದಿಟ್ಟತನದಿಂದ ಪ್ರಶ್ನೆ ಮಾಡಿದಾಗ ದೇಶವು ಸುಭದ್ರವಾಗಿರುವುದಲ್ಲದೆ, ಪ್ರಜೆ ಗಳು ಸಮೃದ್ಧಿ ಮತ್ತು ನೆಮ್ಮದಿಯಿಂದ ಬದು ಕಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ
ಯುವತಿಯ ಮೇಲೆ ನಡೆದಂತಹ ಅತ್ಯಾಚಾರ ಮತ್ತು ಹತ್ಯೆ ನಡೆದ ಬಗ್ಗೆ ಮಾಹಿತಿಯನ್ನು ಬಿತ್ತರಿಸಿದ ಕಾರಣಕ್ಕಾಗಿ ಸಿದ್ಧೀಕ್‌ ಕಪ್ಪನ್‌ ಎಂಬ ಪತ್ರಕರ್ತರನ್ನು ದೇಶ ದ್ರೋಹದ ಪ್ರಕರಣದಲ್ಲಿ ಬಂಧಿಸಿ, ಕಾರಾಗೃಹದಲ್ಲಿ ಇರಿಸಲಾಗಿದೆ. ಹೀಗೆ ಪ್ರತಿ ಹಂತದಲ್ಲೂ ಪತ್ರಕರ್ತರ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರು ಮತ್ತು ಪತ್ರಕರ್ತರು ಸರ್ಕಾರದ ತಪ್ಪುಗಳನ್ನು ದಿಟ್ಟತನದಿಂದ, ನಿರ್ಭೀತಿಯಿಂದ ಪ್ರಶ್ನೆ ಮಾಡುವಂತಹ ಕಾಲಘಟ್ಟದಲ್ಲಿದ್ದೇವೆ. ಹಾಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಗೌರಿ ಲಂಕೇಶ್‌ ಅವರ ಆಶಯಗಳನ್ನು ಈಡೇರಿಸೋಣ ಎಂದು ಕರೆ ನೀಡಿದರು.

ಪ್ರಗತಿಪರ ಚಿಂತಕ ಕತ್ತಲಗೆರೆ ತಿಪ್ಪಣ್ಣ  ಮಾತನಾಡಿ, ಮಾಧ್ಯಮಗಳು ತಪ್ಪು ಮಾಡುವವರನ್ನು ತಿದ್ದುವಂತಹ ಛಡಿಯಂತಿರಬೇಕು. ಆದರೆ ಕೆಲವರು ಹೊಂದಾಣಿಕೆ ವೃತ್ತಿಯನ್ನು ನಡೆಸುತ್ತಿದ್ದಾರೆ. ಈಗ ಕೋಮುವಾದಿ ಶಕ್ತಿಗಳ ವಿರುದ್ಧ ಮಾತನಾಡಬೇಕಾದರೆ ತುಂಬಾ ಧೈರ್ಯ ಬೇಕಾಗಿದೆ. ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಬೇಕಾಗಿದ್ದ ಮಹಿಳಾ ಸಂಸದರು ತಿರಸ್ಕಾರ ಭಾವನೆಯಿಂದ ಮಾತನಾಡುತ್ತಿದ್ದಾರೆ ಎಂದು ವಿಷಾದಿಸಿದರು.

ಮಾದಿಗ ದಂಡೋರ ಸಮಿತಿಯ ಜಿಲ್ಲಾಧ್ಯಕ್ಷ  ಗುಡ್ಡಪ್ಪ ಮಾತನಾಡಿ, ದೇಶದ ವ್ಯವಸ್ಥೆಯು ತುಂಬಾ ಹದಗೆಟ್ಟಿದ್ದು, ಹೋರಾಟಗಾರರು ಕೇವಲ ಹೋರಾಟಕ್ಕಷ್ಟೇ ಸೀಮಿತವಾಗದೆ ಸಕ್ರಿಯ ರಾಜಕೀಯದಲ್ಲಿ ಭಾಗಿಯಾಗಿ ಅಧಿಕಾರಕ್ಕೆ ಬಂದಾಗ ಮಾತ್ರ ದೇಶವನ್ನು ಸುಭದ್ರವಾಗಿ ಮುನ್ನಡೆಸಬಹುದು ಎಂದು ಅಭಿಪ್ರಾಯಿಸಿದರು.

ಈ ಸಂದರ್ಭದಲ್ಲಿ ವಕೀಲರಾದ ಜಸ್ಟೀನ್‌ ಜೈಕುಮಾರ್‌, ಸತೀಶ್‌ ಅರವಿಂದ್‌, ಗೌಸ್‌ ಖಾನ್‌, ತೆರಿಗೆ ಸಲಹೆಗಾರರಾದ ಬಾಷಾ ಸಾಬ್‌, ಆಮ್‌ ಆದ್ಮಿ ಪಕ್ಷದ ಅದಿಲ್‌ ಖಾನ್‌, ವಕೀಲರಾದ ಖಲೀಲ್‌, ಉಷಾ ಕೈಲಾಸದ್‌, ಅಹ್ಮದ್‌ ಷರೀಫ್‌, ರಹಮತ್, ಪ್ರಕಾಶ್‌, ಮುಸ್ತಾಫಾ ಮತ್ತಿತರರು ಉಪಸ್ಥಿತರಿದ್ದರು