ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ

ದಾವಣಗೆರೆ, ಸೆ.8- ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಡಳಿತ ಮುಂಭಾಗದಲ್ಲಿ ಇಂದು ಧರಣಿ ಸತ್ಯಾಗ್ರಹ ನಡೆಸಿದರು.

ಜೀವನ ನಡೆಸಲು ಅಗತ್ಯವಾಗಿ ಬೇಕಾದ ಆಹಾರ ಉತ್ಪಾದಿಸುವ ಕೃಷಿ ರಂಗ ದುಸ್ಥಿತಿಯತ್ತ ಸಾಗಿದೆ. 1990 ರಿಂದ ಇದುವರೆಗೂ 3.5 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ ವರ್ಷ ಗ್ರಾಮೀಣ ಕೃಷಿ ತ್ಯಜಿಸಿ ನಗರದತ್ತ ಮುಖ ಮಾಡಿದ್ದಾರೆ. ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಬೇರೆ ಬೇರೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ವಸ್ತುಗಳಿಗೆ ಆಯಾ ಕಂಪನಿಗಳ ಮಾಲೀಕರೇ ಬೆಲೆ ನಿಗದಿಪಡಿಸುತ್ತಾರೆ. ಆದರೆ ರೈತ ತಾನು ಬೆಳೆದ ಬೆಳೆಗಳಿಗೆ ಬೆಲೆ ನಿಗದಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗೆ ಈ ವ್ಯವಸ್ಥೆ ಮುಂದುವರೆದರೆ ಕೃಷಿ ರಂಗ ಅವ ನತಿಯತ್ತ ಸಾಗಿ, ಆಹಾರದ ಅಭಾವ ಸೃಷ್ಠಿಯಾಗುವು ದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಪ್ರತಿ ವರ್ಷ ಬೆಲೆ ಘೋಷಣೆಯು ಹಣದುಬ್ಬರ ದರಕ್ಕೆ ಅನುಗುಣವಾಗಿರಲಿ. ಘೋಷಿತ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸಿದರೆ ಅಂತವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಇದಕ್ಕೆ ಪೂರಕವಾದ ಕಠಿಣ ಕಾನೂನು ರೂಪಿಸಬೇಕು. ಇಲ್ಲದಿದ್ದರೆ ಭಾರತೀಯ ಕಿಸಾನ್ ಸಂಘವು ಮುಂಬರುವ ಅಧಿವೇಶನದಲ್ಲಿ ಸಂಸದರ ಮೇಲೆ ಒತ್ತಡ ತಂದು ಖಾಸಗಿ ಬಿಲ್ ಮಂಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಧರಣಿ ಸತ್ಯಾಗ್ರಹದಲ್ಲಿ ಸಂಘದ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಇತರೆ ಪದಾಧಿಕಾರಿಗಳಾದ ವಸಂತಮ್ಮ, ಪ್ರವೀಣ್, ತಿಪ್ಪೇಶ್, ಎಂ.ಕೆ. ಶಾಂತರಾಜ್, ಪ್ರಭು, ನೀಲಕಂಠ, ಮುರುಗೇಶ್, ಸಂತೋಷ್ ಮತ್ತಿತರರಿದ್ದರು.