ಮಕ್ಕಳ ಆರೋಗ್ಯ ಸುಧಾರಣೆಗೆ ಉಚಿತ ಔಷಧಿ

ಮಕ್ಕಳ ಆರೋಗ್ಯ ಸುಧಾರಣೆಗೆ ಉಚಿತ ಔಷಧಿ

ಜಿಲ್ಲೆಯ ಸುಮಾರು 8 ಸಾವಿರ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ, ಸ್ಪಿರುಲಿನ ಚಿಕ್ಕಿ ಸೇರಿದಂತೆ ಆಯುಷ್ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ.  ಕಳೆದ ಒಂದು ತಿಂಗಳಲ್ಲಿ ಚೂರ್ಣ ತೆಗೆದುಕೊಳ್ಳುತ್ತಿದ್ದ ಮಕ್ಕಳ ಪೈಕಿ ತೀವ್ರ ಅಪೌಷ್ಟಿಕದಲ್ಲಿದ್ದ 10 ಮಕ್ಕಳ ಆರೋಗ್ಯ ಸುಧಾರಣೆಗೊಂಡಿದ್ದು, 600 ಮಕ್ಕಳು ಸಾಮಾನ್ಯ ಹಂತಕ್ಕೆ ತಲುಪಿವೆ.  ಸಿಎಸ್‍ಆರ್ ಫಂಡ್ ಅಡಿ 20 ರಿಂದ 30 ಲಕ್ಷ ರೂ. ಅನುದಾನಲ್ಲಿ ಆಯುಷ್ ಔಷಧಿಗಳ ಕಿಟ್‍ಗಳನ್ನು ತುಮಕೂರಿನಿಂದ ತರಿಸಿದ್ದು, ಪೋಷಕರು ನಿರ್ಲಕ್ಷ್ಯ ವಹಿಸದೇ ನಿರಂತರವಾಗಿ ಮಕ್ಕಳಿಗೆ ನೀಡಬೇಕು.

-ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ

ದಾವಣಗೆರೆ, ಸೆ.6- ಕೋವಿಡ್-19 ಸೋಂಕಿನ ವಿರುದ್ಧ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವರ್ಧನೆ ಹಾಗೂ ಸದೃಢ ಆರೋಗ್ಯಕ್ಕಾಗಿ ಅಪೌಷ್ಟಿಕತೆಯಿಂದ ಬಳಲುತ್ತಿ ರುವ ಮಗುವಿಗೆ ಆಯುಷ್ ಇಲಾಖೆಯಿಂದ 175 ರೂ. ಮೌಲ್ಯದ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ತಾಯಂದಿರು ಇದನ್ನು ವ್ಯರ್ಥ ಮಾಡದೇ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್  ಕರೆ ನೀಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ 75ನೇ ವರ್ಷದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ಪೋಷಣ್ ಅಭಿಯಾನ ಮಾಸಾಚರಣೆ ಹಾಗೂ ಮಾತೃ ವಂದನಾ ಸಪ್ತಾಹದ ಅಂಗವಾಗಿ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ ಆಯುಷ್ ಬಾಲ ಸಂಜೀವಿನಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂಬ ವರದಿಗಳ ಹಿನ್ನೆಲೆ ಯಲ್ಲಿ ಮಕ್ಕಳ ಆರೋಗ್ಯ ಸದೃಢತೆಗಾಗಿ ಆದ್ಯತೆ ನೀಡಲಾಗುತ್ತಿದೆ. ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಕೋವಿಡ್ ಅಲ್ಲದೇ ಟೈಫಾಯ್ಡ್, ಜಾಂಡೀಸ್‌ನಂತಹ ಇತರೆ ವೈರಲ್ ಕಾಯಿಲೆ ಬರುತ್ತಿರುವುದರಿಂದ ಸಾಮಾನ್ಯ ಕೆಮ್ಮು, ಶೀತ, ಜ್ವರ ಬಂದರೂ ಕೋವಿಡ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಆಸ್ಪತ್ರೆಗಳಲ್ಲಿ ಕೋವಿಡ್ ಲೈಕ್ ಇಲ್‍ನೆಸ್ ಲಕ್ಷಣಗಳು ಕಂಡುಬಂದರೆ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದು ಅವರು ಕರೆ ನೀಡಿದರು.

ಅಪೌಷ್ಟಿಕ ಮಕ್ಕಳ ತಾಯಂದಿರು ಹಾಗೂ 6 ವರ್ಷದೊಳಗಿನ ತಂದೆ ತಾಯಿ ಇಬ್ಬರಿಗೂ ಆದ್ಯತಾ ಗುಂಪುಗಳಾಗಿ ಪರಿಗಣಿಸಿ, ಕೋವಿಡ್ ನಿಯಂತ್ರಣ ವ್ಯಾಕ್ಸಿನ್ ಹಾಕಲಾಗುತ್ತಿದೆ. ಇನ್ನೂ ಶೇ.15 ರಷ್ಟು ಪೋಷಕರು ಬಾಕಿ ಉಳಿದಿದ್ದು, ಶೀಘ್ರದಲ್ಲಿ ಪೂರೈಸಲಾಗುವುದು ಎಂದರು.

 ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರ್‍ಗೌಡ ಮಾತನಾಡಿ, ಜಿಲ್ಲೆಯಲ್ಲಿ 180 ಸ್ಯಾಮ್ ಮಕ್ಕಳು ಹಾಗೂ 5,400 ಮ್ಯಾಮ್ ಮಕ್ಕಳು ಸೇರಿದಂತೆ ಒಟ್ಟು 5,580 ಮಕ್ಕಳಿಗೆ ಆಯುಷ್ ಇಲಾಖೆ ಯಿಂದ ರೋಗ ನಿರೋ ಧಕ ಶಕ್ತಿ ಹೆಚ್ಚಿಸುವಂತಹ ಅರವಿಂದಾಸವ ಮತ್ತು ಕೂಷ್ಮಾಂಡ ರಸಾಯನ ಔಷಧಿಗಳನ್ನು ನೀಡುತ್ತಿದ್ದು, ಇದರಿಂದ ಉತ್ತಮ ಹಸಿವು, ನಿದ್ರೆ, ಮಾನಸಿಕ ಶಾಂತಿಯನ್ನು ಕಾಪಾಡಿ ಕೊಳ್ಳುವುದರೊಂದಿಗೆ, ಕೋವಿಡ್ ಸೋಂಕನ್ನು ತಡೆಗಟ್ಟಬಹುದು ಎಂದವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್ ಮಾತನಾಡಿ, ಈ ಹಿಂದೆ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದರೆ, ಅಂಗನವಾಡಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಈಗ ಜಿ.ಪಂ ಸಿಇಒ ಅವರ ಆಸಕ್ತಿಯಿಂದಾಗಿ 30 ಲಕ್ಷ ರೂ. ಅನುದಾನ ವೆಚ್ಚದಲ್ಲಿ ಗ್ರಾಸಿಂ ಇಂಡಸ್ಟ್ರಿಯಿಂದ ಮಕ್ಕಳಿಗೆ ಚೂರ್ಣ ಹಾಗೂ ಆಯುಷ್ ಇಲಾಖೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ತರಿಸುತ್ತಿರುವು ದರಿಂದ ಅಪೌಷ್ಟಿಕ ಮಕ್ಕಳ ಬೆಳವಣಿಗೆಗೆ ಹೆಚ್ಚು ಉಪಯುಕ್ತವಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್ ಮತ್ತು ಇತರರು ಉಪಸ್ಥಿತರಿದ್ದರು.