ಕಸ್ತೂರಿಬಾ ಸಮಾಜದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ

ಕಸ್ತೂರಿಬಾ ಸಮಾಜದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ

ಗಡಿಭದ್ರತಾ ಪಡೆಯ ನಿವೃತ್ತ ಹವಾಲ್ದಾರ್‌ ಸುರೇಶ್‌ ರಾವ್‌ ಘೋರ್ಪಡೆ ಅವರಿಗೆ ಗೌರವಾರ್ಪಣೆ

ದಾವಣಗೆರೆ, ಸೆ.6- ನಗರದ ಕಸ್ತೂರಿಬಾ ಸಮಾಜದ ವತಿಯಿಂದ ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವವನ್ನು ಕಸ್ತೂರಬಾ ಸಮಾಜದ ಕಚೇರಿ ಆವರಣದಲ್ಲಿ ಕಳೆದ ವಾರ ಆಚರಿಸಲಾಯಿತು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗಡಿಭದ್ರತಾ ಪಡೆಯ ನಿವೃತ್ತ ಹವಾಲ್ದಾರ್‌ ಸುರೇಶ್‌ ರಾವ್‌ ಘೋರ್ಪಡೆ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸಮಾಜದ ಗೌರವಾಧ್ಯಕ್ಷರಾದ ಶ್ರೀಮತಿ ಸರೋಜ ಚಂದ್ರಶೇಖರ್‌ ಕಾರ್ಗಿಲ್‌ ಯೋಧರಿಗೆ ನುಡಿ ನಮನ ಸಲ್ಲಿಸಿ ಮಾತನಾಡಿ, ತಮ್ಮ ಅಳಿಯ ಕರ್ನಲ್‌ ರವೀಂದ್ರನಾಥ್‌ ಅವರು ಕಾರ್ಗಿಲ್‌ ಹೀರೋ ಆಗಿದ್ದರು. ಕಾರಣ 2-3 ಬಾರಿ ಬೆಟಾಲಿಯನ್‌ಗಳು ಟ್ರೋ ಲೋಲಿಂಗನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿ ವಿಫಲರಾದಾಗ 2 ರಜಪುತಾನ ರೈಫಲ್ಸ್‌ನ ಕಮಾಂಡಿಂಗ್‌ ಆಫೀಸರ್‌ ರವೀಂದ್ರನಾಥ್‌ ಅವರ ನೇತೃತ್ವದಲ್ಲಿ ಇವರ ಬೆಟಾಲಿಯನ್‌ ಟೋ ಲೋಲಿಂಗನ್ನು ವಶಪಡಿಸಿಕೊಂಡು, ಅದರ ಮೇಲೆ ಭಾರತದ ಧ್ವಜವನ್ನು ಹಾರಿಸಿದರು. ಇದು ಕಾರ್ಗಿಲ್‌ ಯುದ್ಧದಲ್ಲಿ ಭಾರತಕ್ಕೆ ದೊರೆತ ಮೊದಲ ವಿಜಯ. ಇವರ 2 ರಜಪುತಾನ ರೈಫಲ್‌ 150 ವರ್ಷಗಳಿಂದ ಸೋಲನ್ನೇ ಕಂಡಿಲ್ಲವೆಂದು ಅವರು ಹೇಳುತ್ತಿದ್ದರು. ಈ ವಿಜಯವನ್ನು ತಂದುಕೊಟ್ಟ ರವೀಂದ್ರನಾಥ್‌ ಅವರಿಗೆ ಭಾರತ ಸರ್ಕಾರ `ವೀರ ಚಕ್ರ’ವನ್ನು ನೀಡಿ ಗೌರವಿಸಿತು ಎಂದು ಹೇಳಿದರು.

ರವೀಂದ್ರನಾಥ್‌ ಅವರ ಧರ್ಮಪತ್ನಿ – ನನ್ನ ಮಗಳು ಶ್ರೀಮತಿ ಅನಿತಾ ರವೀಂದ್ರ ಅವರು ಯುದ್ಧದಲ್ಲಿ ಭಾಗವಹಿಸಿದ ವಿಷಯವನ್ನು ನಾವೆಲ್ಲ ಗಾಬರಿಯಾಗಬಾರದೆಂದು ನಮಗೆ ತಿಳಿಸದೆ ತಾನೋಬ್ಬಳೇ ಧೈರ್ಯದಿಂದ ಪರಿಸ್ಥಿತಿ ಎದುರಿಸಿದ್ದಳು. ಇಂತಹ ಅಳಿಯ, ಮಗಳ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ.

ರವೀಂದ್ರ ಅವರ ಬೆಟಾಲಿಯನ್‌ ಲೇ ಸಮೀಪಿಸಿದ್ದಾಗ ನಾನು, ನನ್ನ ಇಬ್ಬರು ತಂಗಿಯರು ಅಲ್ಲಿಗೆ ಭೇಟಿ ನೀಡಿ, ದ್ರಾಸ್‌ನಲ್ಲಿ ಟೋಲೋಲಿಂಗ್‌ ಕೆಳಗೆ ನಡೆದ ಪ್ರಥಮ ವಿಜಯೋತ್ಸವದಲ್ಲಿ ಭಾಗವಹಿಸಿದ್ದೆವು. ಅದೊಂದು ಮರೆಯಲಾಗದ ಅವಿಸ್ಮರಣೀಯ ಕ್ಷಣ. ಯುದ್ಧದಲ್ಲಿ ಗೆದ್ದ ರವಿಂದ್ರ ಅವರು ಮನೆ ಬಾಗಿಲಲ್ಲೇ ಬಂದ ಸಾವನ್ನು ಗೆಲ್ಲಲಾಗಲಿಲ್ಲವೆಂದು ಅವರನ್ನು ನೆನೆದು ಭಾವುಕರಾದರು.

ಸಮಾಜದ ಅಧ್ಯಕ್ಷರಾದ ಪ್ರೊ. ಶಕುಂತಲ ಗುರುಸಿದ್ದಯ್ಯ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ 300 ವರ್ಷಗಳ ಮೊದಲೇ ಸ್ವಾತಂತ್ರ್ಯಕ್ಕಾಗಿ ಸಾಧುಗಳಿಂದ ಸ್ವಾತಂತ್ರ್ಯ ಚಳುವಳಿ ನಡೆದಿದ್ದನ್ನು ಮಾರ್ಮಿಕವಾಗಿ ವಿವರಿಸಿದರು. 

ಶ್ರೀಮತಿ ಗಂಗಮ್ಮ ಕುಂಬಿ ಸ್ವಾಗತಿಸಿದರು. ಪ್ರೊ. ಮಂಜುಳ ಮಂಜಪ್ಪ ಅವರು ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಕವಿತ ಕೊಟ್ರಪ್ಪ ವಂದಿಸಿದರು. ಶ್ರೀಮತಿ ಹೆಚ್.ಕೆ. ಸತ್ಯಭಾಮ ಮಂಜುನಾಥ್‌ ನಿರೂಪಿಸಿದರು.

ಶ್ರೀಮತಿ ಶಶಿಕಲಾ ರುದ್ರಯ್ಯ, ಶ್ರೀಮತಿ ತಾರ ಚಿಕ್ಕೇಗೌಡ, ಶ್ರೀಮತಿ ಶಕುಂತಲ ಪರಮೇಶ್ವರಪ್ಪ, ಶ್ರೀಮತಿ ಸರಳ ಆಮ್ಯೆ, ಶ್ರೀಮತಿ ವತ್ಸಲ ಶಿವಮಲ್ಲಪ್ಪ, ಶ್ರೀಮತಿ ಛಾಯಾ ಹಿರೇಮಠ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.