ಬೊಮ್ಮಾಯಿಯಿಂದ ಬಿಜೆಪಿಗೆ ಬಲ

ಬೊಮ್ಮಾಯಿಯಿಂದ ಬಿಜೆಪಿಗೆ ಬಲ

ಜಿಎಂಐಟಿ ಕಾಲೇಜಿನ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಗಾಂಧಿ ಭವನ, ಪೊಲೀಸ್ ಪಬ್ಲಿಕ್ ಶಾಲೆ ಹಾಗೂ ಜಿಎಂಐಟಿ ಕೇಂದ್ರ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಗಾಂಧಿ ಭವನ, ಪೊಲೀಸ್ ಪಬ್ಲಿಕ್ ಶಾಲೆ, ಜಿಎಂ ಕೇಂದ್ರ ಗ್ರಂಥಾಲಯ ಉದ್ಘಾಟನೆ

ಅಲ್ಪ ಅವಧಿಯಲ್ಲೇ ಸರ್ಕಾರಕ್ಕೆ ಮಹತ್ವಪೂರ್ಣ ಆರಂಭ: ಕೇಂದ್ರ ಗೃಹ ಸಚಿವ ಅಮಿತ್ ಷಾ

ದಾವಣಗೆರೆ, ಆ. 2 – ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಬಲಗೊಳಿಸುವ ಕಾರ್ಯ ಮಾಡಲಾಗಿದೆ ಎಂಬ ಭಾವನೆ ವರಿಷ್ಠರಲ್ಲಿ ಬಂದಿದೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್ ಷಾ ಅವರು ಬೊಮ್ಮಾಯಿಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಗರದ ಜಿ.ಎಂ.ಐ.ಟಿ. ಕಾಲೇಜಿನ ಆವರಣದಲ್ಲಿ ಇಂದು ಆಯೋಜಿಸಲಾಗಿದ್ದ ಗಾಂಧಿ ಭವನ, ಪೊಲೀಸ್ ಪಬ್ಲಿಕ್ ಶಾಲೆ ಹಾಗೂ ಜಿಎಂಐಟಿ ಕೇಂದ್ರ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮಗಳನ್ನು ನೆರವೇರಿಸಿ ಮಾತನಾ ಡುತ್ತಿದ್ದ ಅಮಿತ್ ಷಾ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಯಾದ ನಂತರ ಕೈಗೊಳ್ಳುತ್ತಿರುವ ಕಾರ್ಯಗಳನ್ನು ದೆಹಲಿ ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರು ಅಲ್ಪ ಅವಧಿಯಲ್ಲೇ ಸರ್ಕಾರಕ್ಕೆ ಮಹತ್ವಪೂರ್ಣ ಆರಂಭ ನೀಡಿದ್ದಾರೆ ಎಂದರು.

ಸರ್ಕಾರ ನಡೆಸುವಲ್ಲಿ ಹಾಗೂ ಸಾರ್ವಜನಿಕ ಜೀವನದಲ್ಲಿ ಬೊಮ್ಮಾಯಿ ಅನುಭವಿಯಾಗಿ ದ್ದಾರೆ. ಬಹಳ ವರ್ಷಗಳಿಂದ ಅವರು ಬಿಜೆಪಿಯಲ್ಲಿದ್ದಾರೆ. ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಇನ್ನೊಮ್ಮೆ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನನಗಿದೆ ಎಂದವರು ಹೇಳಿದರು.

ಕರ್ನಾಟಕದಲ್ಲಿ ಹೊಸ ವ್ಯಕ್ತಿಗೆ ಅವಕಾಶ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ತಿಳಿಸಿದ್ದರು. ಅದರಂತೆ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ನೀಡಲಾಗಿತ್ತು ಎಂದ ಅಮಿತ್ ಷಾ, ಯಡಿಯೂರಪ್ಪ ಅವಧಿಯಲ್ಲಿ ಕರ್ನಾಟಕದಲ್ಲಿ ವಿಕಾಸದ ಯುಗ ಆರಂಭವಾಗಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶದಲ್ಲೀಗ ಸಾವಿರಾರು ಆಕ್ಸಿಜನ್ ಘಟಕಗಳನ್ನು ತೆರೆಯುವ ಕಾರ್ಯ ನಡೆದಿದೆ. ಮುಂದೊಮ್ಮೆ ಕೊರೊನಾದ ಇನ್ನೊಂದು ಅಲೆ ಬಂದರೂ ಸಹ, ಅತ್ಯಂತ ವೇಗವಾಗಿ ಆಕ್ಸಿಜನ್ ವಿಷಯದಲ್ಲಿ ಭಾರತ ಆತ್ಮನಿರ್ಭರ್ ಆಗಲಿದೆ. ಆಕ್ಸಿಜನ್‌ಗಾಗಿ ಬೇರೆಯವರನ್ನು ಅವಲಂಬಿಸುವ ಅಗತ್ಯ ಬರುವುದಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು  ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಮಿತ್ ಷಾ ಅವರು ಈ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತ್ವರಿತ ವರದಿಗಾಗಿ ಮೊಬೈಲ್ ಫೊರೆನ್ಸಿಕ್ ಲ್ಯಾಬ್ ತೆರೆಯಬೇಕು ಹಾಗೂ ಅಪರಾಧ ನಡೆದ ಸ್ಥಳದಲ್ಲಿ ತನಿಖೆಗಾಗಿ ಆಫೀಸರ್ ಆನ್ ಸೀನ್ ನೇಮಿಸಬೇಕು ಎಂದು ತಿಳಿಸಿದ್ದರು. ಈ ಎರಡೂ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ಬಿ.ಎಂ. ಶಿವಲಿಂಗಸ್ವಾಮಿ, ಶೆಟ್ರು ಸಿದ್ದರಾಮಯ್ಯ ಹಾಗೂ ಹೆಚ್. ಮರುಳಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಎಸ್.ಎ. ರವೀಂದ್ರನಾಥ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಗೃಹ ಸಚಿವ ಆರಗ ಜ್ಞಾನೇಂದ್ರ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೃಷಿ ಸಚಿವ ಬಿ.ಸಿ. ಪಾಟೀಲ್, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಶಾಸಕರುಗಳಾದ ಎಸ್.ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ಎಂ.ಪಿ. ರೇಣುಕಾಚಾರ್ಯ, ಕೆ. ಕರುಣಾಕರ ರೆಡ್ಡಿ, ಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ, ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್, ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ. ಪಿ.ಎಸ್.ಹರ್ಷ, ಜಿಲ್ಲಾಧಿಕಾರಿ ಮಹಾತೇಶ್ ಬೀಳಗಿ, ಜಿ.ಪಂ. ಸಿಇಒ ವಿಜಯ ಮಹಾಂತೇಶ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಅವರು ಸ್ವಾಗತಿಸಿದರೆ, ಸಂಸದ ಜಿ.ಎಂ. ಸಿದ್ದೇಶ್ವರ ವಂದಿಸಿದರು.