ಬಿಜೆಪಿ ಕಿತ್ತೊಗೆಯುವವರೆಗೂ ವಿಶ್ರಮಿಸಬೇಡಿ

ಬಿಜೆಪಿ ಕಿತ್ತೊಗೆಯುವವರೆಗೂ ವಿಶ್ರಮಿಸಬೇಡಿ

ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕರೆ

ದಾವಣಗೆರೆ, ಸೆ.2- ಭ್ರಷ್ಟಾಚಾರದಲ್ಲಿ ಮುಳುಗಿ ರುವ, ದೇಶದಲ್ಲಿ ಕೋಮುಭಾವನೆ ಸೃಷ್ಟಿಸುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವವರೆಗೂ ವಿರಮಿಸಬೇಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕರೆ ನೀಡಿದರು.

ನಗರದ ಬಾಪೂಜಿ ಸಮುದಾಯ ಭವನದಲ್ಲಿ ಗುರುವಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರತಿ ಮನೆ ಮನೆಗೂ ತೆರಳಿ ಜನರಿಗೆ ತಿಳಿಸಬೇಕು. ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಜನರ ಬದುಕನ್ನು ಬೀದಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಸಾರ್ವಜನಿಕರನ್ನು ಜಾಗೃತಗೊಳಿಸಬೇಕು ಎಂದು ಹೇಳಿದರು.

ಭಾರತ ದೇಶದಲ್ಲಿ ಸಂವಿಧಾನದ 15ನೇ ವಿಧಿ ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳ ಅಥವಾ ಇತರ ಯಾವುದೇ ಪ್ರಜೆಯ ವಿರುದ್ಧ ತಾರತಮ್ಯ ಮಾಡಬಾರದು ಎಂದು ಹೇಳುತ್ತದೆ. 25ನೇ ವಿಧಿಯು ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಮುಕ್ತ ವೃತ್ತಿ, ಅಭ್ಯಾಸ ಮತ್ತು ಧರ್ಮ ಪ್ರಚಾರದ ಬಗ್ಗೆ ಹೇಳುತ್ತದೆ. ಆದರೆ ಸಂವಿಧಾವನ್ನು ಕಾಪಾಡಬೇಕಾದ ಸರ್ಕಾರ ಸಂವಿಧಾನದ ಈ ವಿಧಿಗಳನ್ನು ಗಾಳಿಗೆ ತೂರಿ ಅಧಿಕಾರ ನಡೆಸುತ್ತಿದೆ.

ದೇಶದ ಸಂವಿಧಾನವನ್ನು ಬದಲಿಸುವ ಹುನ್ನಾರ ಮಾಡುತ್ತಿರುವ ಭ್ರಷ್ಟ ಹಾಗೂ ಸಂವಿಧಾನ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಎಂದ ಅವರು, ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಮಯ ನೀಡಬೇಕು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು.

70 ವರ್ಷ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಪದೇ ಪದೇ ಕೇಳುತ್ತಿರುವ ಬಿಜೆಪಿ, ಈಗ ಇವರು ಖಾಸಗಿ ವ್ಯಕ್ತಿಗಳಿಗೆ ಮಾರುತ್ತಿರುವ ಸರ್ಕಾರದ ಸಂಸ್ಥೆಗಳು ಇದೇ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ ಸಂಸ್ಥೆಗಳು ಎಂಬುದನ್ನೇ ಮರೆತಂತಿದೆ ಎಂದು ಕಿಡಿಕಾರಿದರು.

ಮಹಿಳೆಯರನ್ನು, ಯುವಕರನ್ನು ಹೆಚ್ಚಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು, ಪಕ್ಷ ಸಂಘಟನೆಗೆ ಒತ್ತು ನೀಡಿ ಎಂದು ಜಿಲ್ಲಾ ಪದಾಧಿಕಾರಿಗಳಿಗೆ ಸಲಹೆ ನೀಡಿದ ಸಲೀಂ, ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಸಿದ್ಧರಾಗಬೇಕು. ಇದಕ್ಕೆ ಪೂರಕವಾಗಿ ಪ್ರಜಾಪ್ರತಿನಿಧಿ ಹಾಗೂ ವಾರ್ಡ್ ಸಮಿತಿಗಳನ್ನು ಸೆ.30 ರ ಒಳಗೆ ಮತ್ತು ಬೂತ್ ಸಮಿತಿಗಳನ್ನು ನವೆಂಬರ್ ಕೊನೆಯ ಒಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕರುಗಳಾದ ಹೆಚ್.ಪಿ.ರಾಜೇಶ್, ಡಿ.ಜಿ.ಶಾಂತನಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಜಿ.ಪಂ. ಮಾಜಿ ಸದಸ್ಯರುಗಳಾದ ಕೆ.ಎಸ್.ಬಸವರಾಜ್, ಜಿ.ಸಿ.ನಿಂಗಪ್ಪ, ಕರಿಬಸವನಗೌಡ್ರು, ಶಶಿಕಲಾ, ಜಿಲ್ಲಾ ವಕ್ತಾರರಾದ ಶಾಮನೂರು ಟಿ.ಬಸವರಾಜ್, ನಾಗೇಂದ್ರಪ್ಪ, ನಾಗರತ್ನಮ್ಮ, ಮುಖಂಡರುಗಳಾದ ಮುದೇಗೌಡ್ರು ಗಿರೀಶ್, ಕೆ.ಜಿ.ಶಿವಕುಮಾರ್, ಮಾಲತೇಶ್ ರಾವ್ ಜಾಧವ್, ಎಂ.ಹಾಲೇಶ್, ಮರಿಯೋಜಿ ರಾವ್, ಗದಿಗೇಶ್, ಅಬಿದ್ ಅಲಿ, ಬಿ.ಜಿ.ನಾಗರಾಜ್, ಷಂಶೀರ್ ಅಹ್ಮದ್, ಅಮಾನುಲ್ಲಾ, ಎ.ಬಿ.ಹನುಮಂತಪ್ಪ, ವಿವಿಧ ಘಟಕಗಳಾದ ಬಿ.ಹೆಚ್.ವೀರಭದ್ರಪ್ಪ, ನಿಖಿಲ್ ಕೊಂಡಜ್ಜಿ, ಅನಿತಾಬಾಯಿ ಮಾಲತೇಶರಾವ್ ಜಾಧವ್, ಹರೀಶ್ ಕೆ.ಎಲ್.ಬಸಾಪುರ, ನಲ್ಕುಂದ ಹಾಲೇಶ್, ಹೆಚ್.ಜಯಣ್ಣ, ರಾಘವೇಂದ್ರ ಗೌಡ, ಶಿವಗಂಗಾ ಬಸವರಾಜ್, ಆರೀಫ್ ಖಾನ್, ಪ್ರಕಾಶ್ ಪಾಟೀಲ್, ಅಲಿ ರೆಹಮತ್, ನಂಜಾನಾಯ್ಕ, ಸುಭಾನ್ ಸಾಬ್, ಮಂಜುನಾಥ್, ಪಾಲಿಕೆ ಸದಸ್ಯರುಗಳಾದ ಕೆ.ಚಮನ್ ಸಾಬ್, ಅಬ್ದುಲ್ ಲತೀಫ್, ಹರಿಹರ ರೇವಣಸಿದ್ದಪ್ಪ, ಡಾ.ರೇವಣಸಿದ್ದಪ್ಪ ಶಿವನಹಳ್ಳಿ ಮತ್ತಿತರರು ಮಾತನಾಡಿದರು.

ಸಭೆಯಲ್ಲಿ ಕೆ.ಪಿ.ಪಾಲಯ್ಯ, ಸೈಯದ್ ಸೈಪುಲ್ಲಾ, ಕೆಪಿಸಿಸಿ  ವೀಕ್ಷಕರುಗಳಾದ ಬಾಲರಾಜ್, ವಿಜಯಕುಮಾರ್, ಅಮೃತೇಶ್ ಸ್ವಾಮಿ, ಕೆ.ಸಿ.ಲಿಂಗರಾಜ್, ನಿಟುವಳ್ಳಿ ನಾಗರಾಜ್, ಎಂ.ಟಿ.ಸುಭಾಶ್ ಚಂದ್ರ, ಜಯದೇವ ನಾಯ್ಕ, ರಾಘವೇಂದ್ರ ನಾಯ್ಕ, ಕೊಟ್ರೇಶ್ ನಾಯ್ಕ, ರಾಕೇಶ್  ಮತ್ತಿತರರಿದ್ದರು.

ಸೇವಾದಳದ ಡೋಲಿ ಚಂದ್ರು, ರಮೇಶ್, ಅಬ್ದುಲ್ ಜಬ್ಬಾರ್ ಅವರಿಂದ ವಂದೇ ಮಾತರಂ ಗೀತೆಯೊಂದಿಗೆ ಆರಂಭವಾದ ಈ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಕೆ.ಹೆಚ್.ಓಬಳೇಶಪ್ಪ, ಪರಮೇಶಪ್ಪನವರಿಗೆ ಸಂತಾಪ ಸೂಚಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಸ್ವಾಗತಿಸಿದರು. ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್ ನಿರೂಪಿಸಿದರು. ಅಯೂಬ್ ಪೈಲ್ವಾನ್ ವಂದಿಸಿದರು.