ಜನ ಮನ ರಂಜಿಸಿದ ‘ಜಾನಪದ ಸಂಭ್ರಮ’

ಜನ ಮನ ರಂಜಿಸಿದ ‘ಜಾನಪದ ಸಂಭ್ರಮ’

ದಾವಣಗೆರೆ, ಸೆ.2-  ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಇವರ ಸಂಯುಕ್ತಾಶ್ರಯದಲ್ಲಿ ಇಂದು ನಡೆದ `ಜಾನಪದ ಸಂಭ್ರಮ’ ಜನ ಮನ ರಂಜಿಸುವಲ್ಲಿ ಯಶಸ್ವಿಯಾಯಿತು.

ಗ್ರಾಮೀಣ ಜಾನಪದ ಸೊಗಡಿನ ಗಂಡು ಮೆಟ್ಟಿನ ಕಲೆ ಡೊಳ್ಳು ಕುಣಿತವನ್ನು ನಿಟುವಳ್ಳಿಯ ಅನುರಾಧ ಮತ್ತು ಸಂಗಡಿಗರು ಗಂಡಸರಿಗಿಂತ ನಾವೇನು ಕಡಿಮೆ ಇಲ್ಲ ಎನ್ನುವಂತೆ ಪ್ರದರ್ಶಿಸಿದ್ದು ವಿಶೇಷ ಎನಿಸಿತು. ಅದರಂತೆ ಚಿನ್ನಸಮುದ್ರದ ಉಮೇಶ್ ನಾಯ್ಕ ಅವರ `ತಿಂಗಾಳು ಮುಳುಗಿದವೋ, ರಂಗೋಲಿ ಬೆಳಗಿದವೋ’ ಜಾನಪದ ಗೀತೆ, ಐಸಿರಿ ಮತ್ತು ಸಂಗಡಿಗರ ಗೀ ಗೀ ಪದ, ಕಬ್ಬಳದ ಶುಭ ಸಂಗಡಿಗರ `ಲಂಬಾಣಿ ನೃತ್ಯ’, ಮಾಗಡಿ ನಾಗರತ್ನಬಾಯಿ ಮತ್ತು ಸಂಗಡಿಗರ ಜಾನಪದ ಗೀತೆಗಳು, ದಾವಣಗೆರೆ ಸುಷ್ಮಿತಾ ಮತ್ತು ಸಂಗಡಿಗರ `ವೀರಗಾಸೆ’ ನೃತ್ಯ, ಬಸಾಪುರದ ಜೇತನ್ ಮತ್ತು ಸಂಗಡಿಗರ ಜಾನಪದ ಹಾಡುಗಳು ಹಾಗೂ ಸಿದ್ಧಮ್ಮನ ಹಳ್ಳಿಯ ಭಾಗ್ಯಮ್ಮ ಸಂಗಡಿಗರ ಸೋಬಾನೆ ಪದಗಳು ಶ್ರೋತೃಗಳ ಮನ ಸೂರೆಗೊಂಡವು.

ಬೀಸುವ ಕಲ್ಲಿನಿಂದ ಬೀಸುವ, ಒನಕೆಯಿಂದ ಭತ್ತ ಕುಟ್ಟುವ ಮೂಲಕ ವಿಧ್ಯುಕ್ತವಾಗಿ ಜಾನಪದ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ಜಾನಪದ ಮನಸುಗಳು, ಪ್ರಾಜ್ಞರು, ಜನಪದ ಕಲಾವಿದರು, ವಿದ್ಯಾರ್ಥಿಗಳು, ಸಾಹಿತಿಗಳು, ಚಿಂತಕರು ಕಾರ್ಯಕ್ರಮವನ್ನು ಸಾಕ್ಷೀಕರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಮಾತಾ ಮಂಜವ್ವ ಜೋಗತಿ ಅವರು ಮಾತನಾಡಿ, ಅನುದಾನದ ಕೊರತೆ, ಕೋವಿಡ್ ಹಿನ್ನೆಲೆಯಲ್ಲಿ ಬಹುತೇಕ ಕಲಾವಿದರಿಗೆ ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಗದಿರಬಹುದು. ಆದರೆ ಮುಂದಿನ ದಿನಗಳಲ್ಲಿ ಅನುದಾನ ಬಂದ ನಂತರ ಹೆಚ್ಚು ಹೆಚ್ಚು ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಪ್ರತಿಯೊಬ್ಬರೂ ಕೂಡ ತಾವು ಮಾಡುವ ಕಾಯಕದಲ್ಲಿ ದೇವರನ್ನು ಕಾಣಬೇಕು. ಎಂಥದೇ ಸಂಕಷ್ಟದ ಸಂದರ್ಭಗಳು ಎದುರಾಗಲಿ ಧೈರ್ಯವಾಗಿ, ಸಮರ್ಥವಾಗಿ ಎದುರಿಸಬೇಕು. ವಿದ್ಯಾರ್ಥಿಗಳೇ ಇರಲಿ, ಯಾರೇ ಆಗಲಿ ಧೃತಿಗೆಡದೇ ಆತ್ಮಹತ್ಯೆ ಮಾಡಿಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಹೇಳಿದರು.

ಜಾನಪದ ಕಲಾವಿದ ಯುಗಧರ್ಮ ರಾಮಣ್ಣ  ತತ್ವಪದ ಹಾಡುವ ಮೂಲಕ `ಹಳ್ಳ್ಯಾಗ್ ಇರೋದ್ ಗಿಡಮೂಲಿಕೆ, ಪ್ಯಾಟ್ಯಾಗ್ ಇರೋದ್ ಥೇಟ್ ಬುಡಬುಡಕಿ’ ಎಂದು ಗ್ರಾಮೀಣ ಜಾನಪದ ಸೊಗಡಿರುವ ತಾಕತ್ತು, ಪ್ರಾಮುಖ್ಯತೆ  ಕುರಿತು ಮಾತನಾಡಿದರು.

`ಆಧುನಿಕತೆ ಮತ್ತು ಜನಪದ’ ಕುರಿತು ಜಾನಪದ ವಿದ್ವಾಂಸ ಡಾ. ಎಂ.ಜಿ. ಈಶ್ವರಪ್ಪ ಮಾತನಾಡಿ, ಜಾಗತೀಕರಣ, ನಗರೀಕರಣ, ಆಧುನೀಕರಣಗಳಾದರೂ ಜಾನಪದದ ಮೂಲ ಗುಣವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಶ್ರಮದ ಜೊತೆಗೆ ಸಾಹಿತ್ಯ ಸೃಷ್ಟಿಸುವುದನ್ನು ಜನಪದರಲ್ಲಿ ಕಾಣಲು ಸಾಧ್ಯವಿದೆ. ಜಾನಪದ ಆಧುನಿಕವಾಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಬೀಸುವ ಕಲ್ಲು, ಒನಕೆ ಮುಂತಾದ ಹಳ್ಳಿಗರು ಬಳಕೆ ಮಾಡುತ್ತಿದ್ದ ವಸ್ತುಗಳು ಕೇವಲ ಪ್ರದರ್ಶನದ ವಸ್ತುಗಳಾಗಿವೆ ಎಂದು ವ್ಯಾಕುಲತೆ ವ್ಯಕ್ತಪಡಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್ ಡಿಸೋಜ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಉಪಸ್ಥಿತರಿದ್ದರು.

ನಾಡಗೀತೆ ನಂತರ ಕು. ಐಸಿರಿ ಪ್ರಾರ್ಥಿ ಸಿದರು. ಜಾನಪದ ಅಕಾಡೆಮಿ ಸದಸ್ಯರಾದ ಶ್ರೀಮತಿ ರುದ್ರಾಕ್ಷಿಬಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತಾ ಸ್ವಾಗತಿಸಿದರು. ರಾಘವೇಂದ್ರ ನಾಯರಿ ಕಾರ್ಯಕ್ರಮವನ್ನು ನಿರೂಪಿಸಿದರು.