`ಮಣ್ಣಿನೊಂದಿಗೆ ಮಾತುಕತೆ’ : ರೈತರಿಂದ ಉತ್ತಮ ಸ್ಪಂದನೆ

`ಮಣ್ಣಿನೊಂದಿಗೆ ಮಾತುಕತೆ’ : ರೈತರಿಂದ ಉತ್ತಮ ಸ್ಪಂದನೆ

ಜಗಳೂರು, ಆ.31- ತಾಲ್ಲೂಕಿನ ಭರಮಸಮುದ್ರ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ  ಆಯೋಜಿಸಿದ್ದ `ಮಣ್ಣಿನೊಂದಿಗೆ ಮಾತುಕತೆ’ ಕಾರ್ಯಕ್ರಮ ನೂರಾರು ರೈತರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಕುರಿತು ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಗಂಗಾವತಿ ಕೃಷಿ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಪಿ.ಆರ್.ಬದ್ರಿಪ್ರಸಾದ್, `ಮಣ್ಣಿನೊಂದಿಗೆ ಮಾತುಕತೆ’ ಕಾರ್ಯಕ್ರಮ ಬಹಳ ಉಪಯುಕ್ತವಾಗಿದ್ದು, ಇದರಿಂದ ರೈತರಿಗೆ ಅವಶ್ಯಕ ಕೃಷಿ ಮಾಹಿತಿಗಳು ದೊರೆಯುತ್ತವೆ. ಅಷ್ಟೇ ಅಲ್ಲದೇ ಅವರಿಗೆ ವಿಚಾರಗಳು ವಿನಿಮಯವಾಗು ವುದರಿಂದ ಹೊಸ ಹೊಸ  ಆವಿಷ್ಕಾರಗಳು ನಡೆಯುತ್ತವೆ ಎಂದು ತಿಳಿಸಿದರು.

ರೈತರ ಜೀವನ ಸುಧಾರಣೆಯಾಗುವುದರ ಜೊತೆಗೆ ಬೆಳೆದಂತಹ ಬೆಳೆಗೆ ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೇ ಸ್ವಂತ ಮಾರುಕಟ್ಟೆ ನಿರ್ಮಿಸಲು ಸಹಕಾರಿಯಾಗುತ್ತದೆ. ಮುಂದೆ ರೈತರು ಸ್ವಾವಲಂಬಿ ಜೀವನ ನಡೆಸಬಹುದು ಎಂದು ರೈತರಿಗೆ ಸಲಹೆ ನೀಡಿದರು.

ಕೃಷಿ ಸಹಾಯಕ ನಿರ್ದೇಶಕ ಶ್ರೀನಿವಾಸುಲು ಮಾತನಾಡಿ, ಭರಮಸಮುದ್ರದಲ್ಲಿ ಮಣ್ಣಿನೊಂದಿಗೆ ಮಾತುಕತೆ ಕಾರ್ಯಕ್ರಮ ನಡೆಸಲು ಕಳೆದ ಒಂದು ತಿಂಗಳಿನಿಂದ ಚರ್ಚೆ ನಡೆಯುತ್ತಿತ್ತು.  ಮಹಾಂತೇಶ್ ಬ್ರಹ್ಮ ಮತ್ತು ಗ್ರಾಮ ಪಂಚಾಯತಿ ಸದಸ್ಯ ಜೆ.ಟಿ.ಬಸವರಾಜ್‌ ಅವರ ಸಹಕಾರದಿಂದ  ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಸಹಕಾರಿಯಾಯಿತು ಎಂದರು.

ಪಶು ಇಲಾಖೆ ಸಹಾಯಕ ನಿರ್ದೇಶಕ ಕೆ.ವಿ‌.ಲಿಂಗರಾಜ್ ಮಾತನಾಡಿದರು.  ಹೊಲದ ಮಾಲೀಕ ಗಂಗಾಧರ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಆತ್ಮ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ರೇಣುಕುಮಾರ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಅನಿಲ್ ಕುಮಾರ್, ಗ್ರಾಮ ಪಂಚಾಯತಿ ಸದಸ್ಯರಾದ ಜೆ‌.ಟಿ.ಬಸವರಾಜ್, ಹನುಮಕ್ಕ, ಲಕ್ಷ್ಮಿ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್, ಗುಮಾಸ್ತ ತಿಪ್ಪೇಸ್ವಾಮಿ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.