ಸ್ಮಾರ್ಟ್ ಸಿಟಿ : ಪಾಲಿಕೆಯ ಕಾಂಗ್ರೆಸ್‌ ಸದಸ್ಯರ ಪ್ರತಿಭಟನೆ

ಸ್ಮಾರ್ಟ್ ಸಿಟಿ : ಪಾಲಿಕೆಯ ಕಾಂಗ್ರೆಸ್‌ ಸದಸ್ಯರ ಪ್ರತಿಭಟನೆ

ನಿರ್ದೇಶಕರ ಸ್ಥಾನಕ್ಕೆ ಪಕ್ಷದ ಸದಸ್ಯರ ಹೆಸರು ಕೈ ಬಿಟ್ಟಿದ್ದಕ್ಕೆ ಆಕ್ಷೇಪ

ದಾವಣಗೆರೆ, ಆ.30- ಸ್ಮಾರ್ಟ್ ಸಿಟಿ ಲಿಮಿಟೆಡ್ ನಿರ್ದೇಶಕರ ಸ್ಥಾನಕ್ಕೆ ನಗರ ಪಾಲಿಕೆಯಿಂದ ಕಾಂಗ್ರೆಸ್‌ನ ಇಬ್ಬರು ಸದಸ್ಯರನ್ನು ಬಿಟ್ಟು ಬಿಜೆಪಿಯ ನಾಲ್ವರು ಸದಸ್ಯರ ಹೆಸರು ಕಳುಹಿಸಿರುವುದನ್ನು ಆಕ್ಷೇಪಿಸಿ, ಕಾಂಗ್ರೆಸ್ ನ ಪಾಲಿಕೆ ಸದಸ್ಯರು ನಗರ ಪಾಲಿಕೆ ಆಯುಕ್ತರ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು. 

ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಮತ್ತು ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಅವರು ಸ್ಮಾರ್ಟ್ ಸಿಟಿ ನಿರ್ದೇಶಕರ ಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ಸಭೆ, ಸಮಾಲೋಚನೆ ನಡೆಸದೇ ಏಕಾಏಕಿಯಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದಾಗಿ ಆರೋಪಿಸಿ ಪ್ರತಿಭಟನಾ ನಿರತ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.  

ಈ ಹಿಂದೆ ಅಜಯ್ ಕುಮಾರ್ ಮೇಯರ್ ಆಗಿದ್ದಾಗ ಕೌನ್ಸಿಲ್ ಸಭೆ ನಡೆಸಿ ನಾಲ್ವರನ್ನು ಸ್ಮಾರ್ಟ್ ಸಿಟಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಕಾಂಗ್ರೆಸ್ ಪಾಲಿಕೆಯ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಚಮನ್ ಸಾಬ್, ಬಿಜೆಪಿಯ ಸದಸ್ಯರಾದ ಎಸ್.ಟಿ. ವೀರೇಶ್,  ಸ್ವಾಗಿ ಶಾಂತಕುಮಾರ್ ಅವರ ಹೆಸರನ್ನು ಕಳುಹಿಸಿಕೊಡಲಾಗಿತ್ತು. ಎಸ್.ಟಿ. ವೀರೇಶ್ ಅವರು ಮಹಾಪೌರಾಗಿದ್ದು, ಈ ಹಿನ್ನೆಲೆಯಲ್ಲಿ ವೀರೇಶ್ ಅವರ ಬದಲಿಗೆ ಒಬ್ಬರ ಹೆಸರು ಶಿಫಾರಸು ಮಾಡಬೇಕಿತ್ತು. ಅದು ಬಿಟ್ಟು ಕೌನ್ಸಿಲ್ ಸಭೆಯಲ್ಲಿ ತೆಗೆದು ಕೊಂಡಿದ್ದ ನಿರ್ಧಾರ ಬದಲಾಯಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಒಬ್ಬರನ್ನು ನೇಮಕ ಮಾಡುವುದನ್ನು ಬಿಟ್ಟು ಬಿಜೆಪಿಯ ನಾಲ್ವರನ್ನು ಆಯ್ಕೆ ಮಾಡಿ ಕಳುಹಿಸಲು ರೂಪಿಸಿರುವ ಹಿಂದಿನ ಷಡ್ಯಂತ್ರವೇನು? ಎಂದು ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದ್ದಾರೆ. 

ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಸದಸ್ಯರಾದ ಚಮನ್ ಸಾಬ್, ಮಂಜುನಾಥ ಗಡಿಗುಡಾಳ್, ವಿನಾಯಕ್ ಪೈಲ್ವಾನ್, ಜಾಕೀರ್, ಉಮೇಶ್, ಜಗದೀಶ್, ನಾಗರಾಜ್ ಪಾಮೇನಹಳ್ಳಿ, ಕಲ್ಲಳ್ಳಿ ನಾಗರಾಜ್, ವಿನಾಯಕ ಪೈಲ್ವಾನ್ ಸೇರಿದಂತೆ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.