ಸದಾಶಿವ ಆಯೋಗದ ವರದಿ ಬಹಿರಂಗಕ್ಕೆ ಒತ್ತಾಯ

ಸದಾಶಿವ ಆಯೋಗದ ವರದಿ ಬಹಿರಂಗಕ್ಕೆ ಒತ್ತಾಯ

ಮಾದಿಗ ದಂಡೋರ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾದಾರ ಚನ್ನಯ್ಯ ಗುರು ಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ದಾವಣಗೆರೆ, ಆ.30- ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಈಗಲಾದರೂ ಬಹಿರಂಗಪಡಿಸಬೇಕು. ಇಲ್ಲವೇ ಚರ್ಚೆಗೆ ಅವಕಾಶ ಕೊಡಬೇಕು ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಗರದ ಶಾಂತಿ ರಾಯಲ್ ಹೋಟೆಲ್ ಸಭಾಂಗಣದಲ್ಲಿ ಇಂದು ನಡೆದ ಮಾದಿಗ ದಂಡೋರ ರಾಜ್ಯ ಸಮಿತಿ ಪದಾಧಿಕಾರಿಗಳು, ಜಿಲ್ಲೆಗಳ ಅಧ್ಯಕ್ಷರ ಕಾರ್ಯಕಾರಿಣಿ ಸಭೆಯಲ್ಲಿ ಶ್ರೀಗಳು ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. 

ಸರ್ಕಾರವು ನ್ಯಾಯಮೂರ್ತಿ ಎ.ಜೆ. ಸದಾಶಿವ ವರದಿ ಕೊಟ್ಟ ನಂತರ ಬಹಿರಂಗ ಮಾಡದಿದ್ದರಿಂದ ಮಾದಿಗ ಸಮುದಾಯಕ್ಕೆ ಬಹಳಷ್ಟು ಅನುಕೂಲ ಇದೆ. ನಮಗೆ ಅನಾನು ಕೂಲ ಮಾಡಲಾಗಿದೆ ಎಂಬ ಭಾವನೆಗಳು ನಮ್ಮ ಅನ್ಯ ಸಹೋದರ ಸಮುದಾಯಗಳ ತಲೆಯಲ್ಲಿ ಬಂದಿತು. ಸರ್ಕಾರ ವರದಿ ಬಂದ ನಂತರ ಬಹಿರಂಗಪಡಿಸಿದ್ದರೆ ಅಥವಾ ಚರ್ಚೆಗೆ ಅವಕಾಶ ಕೊಟ್ಟಿದ್ದರೆ, ಅನ್ಯ ಸಮುದಾಯಗಳಲ್ಲಿ ಈಗ ಉದ್ಭವಿಸಿರುವ ಭಾವನೆಗಳು ಇರುತ್ತಿರ ಲಿಲ್ಲ. ಆದ್ದರಿಂದ ಈ ವರದಿಯಲ್ಲಿನ ವಿಷಯ ಗಳ ಸಾಧಕ-ಬಾಧಕ ತಿಳಿಯುವಂತಾಗಲು ಚರ್ಚೆ ನಡೆಯಲಿ ಎಂದು ಅಭಿಪ್ರಾಯಪಟ್ಟರು. 

ವಿಧಾನಸಭೆಯಲ್ಲಿ ನಮ್ಮ ಸಮಾಜದ ಆರು ಜನರು ಬುದ್ಧಿವಂತಿಕೆಯಿಂದ ಶಾಸಕರಾಗಿದ್ದಾರೆ. ಅವರುಗಳು ಉಲ್ಟಾ ಪಲ್ಟಾ ಮಾತನಾಡಿಕೊಂಡು ಹೋದರೆ ಇರುವ ಸ್ಥಾನಗಳು ಕಡಿಮೆ ಆಗುತ್ತವೆ ಅನ್ನುವುದನ್ನು ಸಮಾಜದ ಜನ ಅರ್ಥ ಮಾಡಿಕೊಳ್ಳಬೇಕು. ಜನಪ್ರತಿನಿಧಿಗಳು ಸಹ ಹೋರಾಟಗಾರರ ಜೊತೆಗೆ ಇದ್ದಾರೆ. ಈ ವಿಚಾರವಾಗಿ ಹೋರಾಟ ನಡೆಸುತ್ತಿರುವ ಎಲ್ಲಾ ಸಂಘಟನೆಗಳು ಒಗ್ಗಟ್ಟಿನಿಂದ ಬರಬೇಕು ಎಂದು ಹೇಳಿದರು. 

ನಮ್ಮ ಸಮುದಾಯ ಮೀಸಲಾತಿಯನ್ನು ನೆಚ್ಚಿಕೊಂಡು ಶಿಕ್ಷಣ ಮತ್ತು ಉದ್ಯೋಗ ಬಯಸುತ್ತಿದೆ. ಆದರೆ, ಬೇರೆ ಸಮುದಾಯಗಳು ಔದ್ಯೋಗಿಕವಾಗಿ ಬೆಳೆದಿವೆ. ಆದ್ದರಿಂದ ನಾವೂ ಈ ಮೀಸಲಾತಿಯನ್ನು ನೆಚ್ಚಿಕೊಳ್ಳದೆ ಸ್ವಾವಲಂಬಿಗಳಾಗಿ ಬದುಕಲು ಉದ್ಯಮಗಳಿಗೆ ಕೈ ಹಾಕಬೇಕು. ನಮ್ಮ ಕುಲಕಸುಬಾಗಿರುವ ಚಮ್ಮಾರಿಕೆಯನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವರ್ಗೀಕರಣ ತಾರ್ಕಿಕ ಅಂತ್ಯ ಕಾಣುತ್ತೆ ಅನ್ನುವ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳು ಮೀಸಲಾತಿ ಹೆಚ್ಚಳ, ಹಿಂದುಳಿದ ವರ್ಗಗಳು ಪರಿಶಿಷ್ಟ ಜಾತಿ, ಪಂಚಮಸಾಲಿ ಸಮಾಜ 2ಎ, ಯಾದವರು ನಮಗೆ ಎಸ್ಟಿಗೆ ಸೇರಿಸಬೇಕು ಎಂದು ಎಲ್ಲ ಸಮುದಾಯಗಳು ಹೋರಾಟಗಳನ್ನು ಪ್ರಾರಂಭಿಸಿದವು. ಇದು ಸರ್ಕಾರಕ್ಕೆ ಒಂದು ರೀತಿ ಜೇನುಗೂಡು ಆಯಿತು. ನಾವೇಕೆ ಜೇನುಗೂಡಿಗೆ ಕಲ್ಲು ಹೊಡೆಯಬೇಕು ಅನ್ನುವ ಭಾವನೆ ಸರ್ಕಾರದಲ್ಲಿ ಮೂಡಿದೆ. ಅದರ ಮಧ್ಯೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಂಘ ಪರಿವಾರಕ್ಕೆ ಮೀಸಲಾತಿ ವರ್ಗೀಕರಣಕ್ಕೆ ಬಾಹ್ಯ ಬೆಂಬಲ ಕೊಡುವರಿದ್ದಾರೆ. ಪರಿಸ್ಥಿತಿ ಸೂಕ್ಷ್ಮಆಗಿರುವುದರಿಂದ ನಿರ್ಧಾರ ಕೈಗೊಳ್ಳಲು ಕಾಲಾವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೂ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ, ಸಚಿವ ಗೋವಿಂದ ಕಾರಜೋಳ, ನಮ್ಮ ಶಾಸಕರು ಎಲ್ಲರೂ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದು ಬೇಗನೆ ಅಂತ್ಯ ಕಾಣಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ಸಾನ್ನಿಧ್ಯ ವಹಿಸಿ ಮಾತನಾಡಿದ ಕೋಡಿ ಹಳ್ಳಿ ಆದಿಜಾಂಬವ ಗುರುಪೀಠದ ಶ್ರೀ ಷಡಕ್ಷ ರಮುನಿ ಸ್ವಾಮೀಜಿ, ಸದಾಶಿವ ಆಯೋಗದ ವರದಿ ಜಾರಿ ಮಾಡಲು ಹಿಂದೆ ಪಾದಯಾತ್ರೆ ಮಾಡಲು ಹೊರಟಿದ್ದಾಗ, ಸಮಾಜದಲ್ಲಿ ಒಡಕು ಉಂಟಾಯಿತು. ಹೋರಾಟದ ಶಕ್ತಿ ಕುಂದಿಸಬಾರದು. ಪಾದಯಾತ್ರೆಗೆ ಹಣ ಬೇಕಿಲ್ಲ, ಒಳ್ಳೆಯ ಮನಸ್ಸು ಇದ್ದರೆ ಸಾಕು. ಸಮಾಜ ಮತ್ತು ಸ್ವಾಮೀಜಿಗಳಲ್ಲೂ ಒಗ್ಗಟ್ಟಿಲ್ಲ. ಎಲ್ಲಾ ಸ್ವಾಮೀಜಿಗಳನ್ನು ಒಂದೇ ವೇದಿಕೆಗೆ ತರುವಂತಹ ಕೆಲಸ ಆಗಬೇಕು. ಜನಪ್ರತಿನಿಧಿಗಳು ಅಧಿಕಾರದ ಹಂಗಿನಿಂದ ಹೊರ ಬಂದು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಮಾದಿಗ ದಂಡೋರದ ರಾಜ್ಯಾಧ್ಯಕ್ಷ ಬಿ. ನರಸಪ್ಪ ದಂಡೋರ, ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ, ಎಂ.ಸಿ.ಶ್ರೀನಿವಾಸ, ಎಚ್.ರಂಗನಾಥ್, ಸಮಾಜದ ಮುಖಂಡ ಬಿ.ಹೆಚ್. ವೀರಭದ್ರಪ್ಪ ಸೇರಿದಂತೆ ಇತರರು ಇದ್ದರು.