ಶಿಕ್ಷಣದಲ್ಲಿ ಹಿಂದುಳಿದವರವನ್ನು ಗುರ್ತಿಸಿ, ಮುಂದೆ ತರಲು ಪ್ರಯತ್ನಿಸುವವನೇ ನಿಜವಾದ ಗುರು : ಸುಮತಿ ಜಯಪ್ಪ ವಿಶ್ಲೇಷಣೆ

ಶಿಕ್ಷಣದಲ್ಲಿ ಹಿಂದುಳಿದವರವನ್ನು ಗುರ್ತಿಸಿ, ಮುಂದೆ ತರಲು ಪ್ರಯತ್ನಿಸುವವನೇ ನಿಜವಾದ ಗುರು : ಸುಮತಿ ಜಯಪ್ಪ ವಿಶ್ಲೇಷಣೆ

ಮಲೇಬೆನ್ನೂರು, ಆ.30- ಶಿವ ಸ್ವರೂಪಿಯಾಗಿ, ಕ್ಷ-ಕಿರಣೋಪಾದಿಯಲ್ಲಿ ಕರ್ಮ ಎಸಗುವವನೇ ನಿಜವಾದ ಶಿಕ್ಷಕ ಎಂದು ಉಪನ್ಯಾಸಕರಾದ ಶ್ರೀಮತಿ ಸುಮತಿ ಜಯ್ಯಪ್ಪ ವಿಶ್ಲೇಷಿಸಿದರು.

ಕುಂಬಳೂರು ಗ್ರಾಮದ ಬಸವ ಗುರುಕುಲ ವಿದ್ಯಾಸಂಸ್ಥೆಯ ಶರಣ ಬಿ. ಪುಟ್ಟಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಹನುಮಂತಪ್ಪ ಜಾಡರ್‌ ಮತ್ತು ಸಿ. ಮಾಲತೇಶ್ ಅವರುಗಳಿಗೆ ಶಾಲೆಯ ಹಿರಿಯ ವಿದ್ಯಾರ್ಥಿಗಳು ನಿನ್ನೆ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಶಿಕ್ಷಕನಾದವನು ವಿದ್ಯಾರ್ಥಿಗಳನ್ನು ತಾರತಮ್ಯ ಭಾವದಿಂದ ನೋಡದೆ ಎಲ್ಲಾ ವಿದ್ಯಾರ್ಥಿಗಳು ನನ್ನ ಮಕ್ಕಳಿದ್ದಂತೆ ಎಂದುಕೊಂಡು ಸೇವೆ ಸಲ್ಲಿಸಿದಾಗ ಮಾತ್ರ ಆ ವ್ಯಕ್ತಿಗೊಂದು ಗೌರವ ಸಿಗಲು ಸಾಧ್ಯವಾಗುತ್ತದೆ. ಅಂತಹ ಕೆಲಸವನ್ನು ಹನುಮಂತಪ್ಪ ಜಾಡರ್, ಮಾಲತೇಶ್ ಶಿಕ್ಷಕರು ಮಾಡಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಟ್ಟೆ ಪಾಡಿಗಾಗಿ ಶಿಕ್ಷಕನಾಗಿದ್ದೇನೆಂದುಕೊಂಡು ಕಾಟಾಚಾರಕ್ಕೆ ಕೆಲಸ ಮಾಡುವವನು ನಿಜವಾದ ಶಿಕ್ಷಕನಲ್ಲ. ತನ್ನ ವೃತ್ತಿ ಮತ್ತು ತಾನು ಬೋಧಿಸುವ ವಿಷಯ ಹಾಗೂ ವಿದ್ಯಾರ್ಥಿಗಳನ್ನು ಪ್ರೀತಿಸಿದಾಗ ಮಾತ್ರ ಅವನೊಬ್ಬ ಶ್ರೇಷ್ಠ ಶಿಕ್ಷಕನಾಗಲು ಸಾಧ್ಯವಾಗುತ್ತದೆ ಎಂದು ಸುಮತಿ ಪ್ರತಿಪಾದಿಸಿದರು.

ಮಕ್ಕಳನ್ನು ಹುರಿದುಂಬಿಸಿ, ಪ್ರೇರೇಪಿಸಿ, ಸ್ಫೂರ್ತಿ ತುಂಬುವವನು ಬೆಸ್ಟ್‌ ಟೀಚರ್‌ ಆಗಿರುತ್ತಾನೆ. ಶಿಕ್ಷಕರಾದ ವರು ಜಾಣ ಮಕ್ಕಳನ್ನು ಮಾತ್ರ ಗುರ್ತಿಸಿ, ಗೌರವಿಸಿದರೆ ಸಾಲದು. ಶಿಕ್ಷಣದಲ್ಲಿ ಹಿಂದುಳಿದರವನ್ನು ಗುರ್ತಿಸಿ, ಅವರನ್ನು ಮುಂದೆ ತರಲು ಪ್ರಯತ್ನಿಸುವವನೇ ನಿಜವಾದ ಗುರುವಾಗಿರುತ್ತಾನೆ ಎಂದು  ಅವರು ಅಭಿಪ್ರಾಯಪಟ್ಟರು.

ಗುರುವಂದನೆ ಸ್ವೀಕರಿಸಿದ ನಿವೃತ್ತ ಶಿಕ್ಷಕರಾದ ಹನು ಮಂತಪ್ಪ ಜಾಡರ್ ಮತ್ತು ಸಿ. ಮಾಲತೇಶ್ ಮಾತನಾಡಿ, ನೀವು ತೋರಿಸಿದ ಪ್ರೀತಿ, ಅಭಿಮಾನದಿಂದಾಗಿ ನಮ್ಮ ಜೀವನವೇ ಪಾವನವಾಗಿದೆ. ನಾವು ಹೇಳಿಕೊಟ್ಟ ಶಿಕ್ಷಣ, ಸಂಸ್ಕಾರ ಹಾಗೂ ಸಂಸ್ಕೃತಿ ಕಲಿತು ಇವತ್ತು ಪ್ರತಿಯೊಬ್ಬರೂ ಉತ್ತಮ ಪ್ರಜೆಗಳಾಗಿರುವುದನ್ನು ನೋಡಿ ಖುಷಿಯಾಗಿ ಮಾತೇ ಬರದಂತಾಗಿದೆ ಎಂದು ಕಣ್ತುಂಬಿಕೊಂಡರು.

ಶಾಲೆಯ ಮುಖ್ಯ ಶಿಕ್ಷಕ ಕೆ. ಶಿರಸಾಚಾರ್ ಅಧ್ಯಕ್ಷತೆ ವಹಿಸಿದ್ದರು. ಶರಣ ಸಂಗಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸಪ್ಪ ಶಿವಪ್ಪ ಗುಂಡಣ್ಣ ಮುಖ್ಯ ಅತಿಥಿಯಾಗಿ ಮಾತನಾಡಿದರು. 

ಪ್ರಾಸ್ತಾವಿಕ ನುಡಿಗಳನ್ನಾಡಿದ ಹಿರಿಯ ವಿದ್ಯಾರ್ಥಿ ಬಿ.ಹೆಚ್. ಕಿರಣ್ ಕುಮಾರ್, ಶಿಕ್ಷಕರಾದ ಹನುಮಂತಪ್ಪ ಜಾಡರ್, ಮಾಲತೇಶ್ ಮತ್ತು ಶಿರಸಾಚಾರ್ ಅವರು ಕೆತ್ತನೆ ಮಾಡಿದ ಸುಂದರ ಮೂರ್ತಿಗಳಾಗಿ ನಾವು ಇಂದು ಇದ್ದೇವೆ ಎಂದು ಧನ್ಯವಾದ ಹೇಳಿದರು. ಹಿರಿಯ ವಿದ್ಯಾರ್ಥಿಗಳಾದ ಹರೀಶ್ ಹನುಮಂತಪ್ಪ ಜಾಡರ್ ಹಾಗೂ ಅವಿನಾಶ್ ಮಾಲತೇಶ್ ಅವರ ಪರಿಚಯವನ್ನು ಮಾಡಿ, ಸಂಬಳ ಇಲ್ಲದೆ ಸೇವೆ ಸಲ್ಲಿಸಿದ ಇಂತಹ ಶಿಕ್ಷಕರಿಂದಾಗಿ ನಾವೆಲ್ಲರೂ ಇಂದು ಕೈ ತುಂಬಾ ಸಂಬಳ ತೆಗೆದುಕೊಳ್ಳುವಂತಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಗ್ರಾ.ಪಂ. ಅಧ್ಯಕ್ಷೆ ಶೋಭಾ ಶಿವಕುಮಾರ್, ಸದಸ್ಯರಾದ ಎನ್. ಕಲ್ಲೇಶ್, ಹರೀಶ್, ನಾಗೇಂದ್ರ, ತಾ.ಪಂ. ಮಾಜಿ ಅಧ್ಯಕ್ಷ ಆದಾಪುರ ವೀರಭದ್ರಪ್ಪ, ಗ್ರಾಮದ ಮುಖಂಡರಾದ ಕೆ. ತೀರ್ಥಪ್ಪ, ಹುಲ್ಲುಮನಿ ನಿಂಗಪ್ಪ, ಹಳೇಮನಿ ಶಂಭುಲಿಂಗಪ್ಪ, ಕೊಂಡಜ್ಜಿ ಹನುಮಂತಪ್ಪ, ನಿವೃತ್ತ ಶಿಕ್ಷಕ ಗಂಗಪ್ಪ, ಶಿಕ್ಷಕರಾದ ಕುಮಾರ್, ಭೀಮಪ್ಪ, ಸುರೇಶ್, ಯುವ ಮುಖಂಡ ಎಂ. ವಾಸುದೇವ ಮೂರ್ತಿ, ಹಿರಿಯ ವಿದ್ಯಾರ್ಥಿಗಳಾದ ಎಂ.ಪಿ. ಸಂತೋಷ್, ನಂದಕುಮಾರ್ ಪಾಟೀಲ್, ಬಿ.ಜಿ. ನಿರಂಜನ್‌, ಶಾಮನೂರಿನ ಗ್ಯಾರಳ್ಳಿ ಶಿವಯೋಗಿ, ಭದ್ರಾ ಕಾಲೇಜು ಟ್ರಸ್ಟಿ ಎಂ. ಸಂಕೇತ್‌, ಗುತ್ತಿಗೆದಾರ ಕ್ಯಾಂಪಿನ ಸಿ.ಹೆಚ್. ರವಿ, ಸ.ಹಿ.ಪ್ರಾ. ಶಾಲೆಎಸ್‌ಡಿಎಂಸಿ ಅಧ್ಯಕ್ಷ ಎಂ.ಹೆಚ್. ಶರಣ್, ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹರಿಹರ ಬಿಇಒ ಕಚೇರಿಯ ಎಸಿಒ ಕೆ.ಎಸ್. ತೀರ್ಥಪ್ಪ ಸ್ವಾಗತಿಸಿದರು. ಉಪನ್ಯಾಸಕ ಎ.ಟಿ. ಪ್ರಕಾಶ್‌ ನಿರೂಪಿಸಿದರು.