ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ : ಓರ್ವ ಬಾಲಕಿ, ಮಹಿಳೆ ಸಾವು

ದಾವಣಗೆರೆ, ಆ.30-  ಕಾರೊಂದು ಅಪ ಘಾತವಾಗಿ ಓರ್ವ ಮಹಿಳೆ ಮತ್ತು ಬಾಲಕಿ ಯೋರ್ವಳು ಮೃತಪಟ್ಟು, ಇನ್ನುಳಿದವರು ಗಾಯ ಗೊಂಡ ಘಟನೆ ದಾವಣಗೆರೆ ಗ್ರಾಮಾಂತರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಧಾರವಾಡದ ಜಯನಗರ ವಾಸಿ ವೀಣಾ (32), ಬೆಳಗಾಂ ಜಿಲ್ಲೆಯ ಪರಸಗಡ ಸಿಂಧೋಗಿ ಗ್ರಾಮದ ವೈಷ್ಣವಿ (6)  ಮೃತ ದುರ್ದೈವಿಗಳು. ರೇಣುಕ (56), ಸಂದೀಪ್ (8), ಆಶ್ವಿನಿ (32), ಒಂದೊವರೆ ವರ್ಷದ ಈಶಾನ್ವಿ ಹಾಗೂ ಕಾರು ಚಾಲಕ ಆದರ್ಶ ಗಾಯಗೊಂಡವರು.

ನಗರದ ನಿಜಲಿಂಗಪ್ಪ ಬಡಾವಣೆ ವಾಸಿ, ಖಾಲಿ ಚೀಲ ವ್ಯಾಪಾರಿ ಎಂ. ಮಲ್ಲಿಕಾರ್ಜುನ ಎಂಬುವರ ಸಂಬಂಧಿಕರಾದ  ಈ 6 ಮಂದಿ ಧಾರವಾಡ ನಗರ ದಿಂದ ದೇವರ ಕಾರ್ಯಕ್ರಮಕ್ಕೆ ಬೆಂಗಳೂರು ನಗರಕ್ಕೆ ಹೋಗುತ್ತಿದ್ದಾಗ ದಾವಣ ಗೆರೆ – ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ-48ರ ಹೆಚ್. ಕಲಪನಹಳ್ಳಿ ಗ್ರಾಮದ ಅಪೂರ್ವ ರೆಸಾರ್ಟ್ ಹತ್ತಿರ ಭಾನುವಾರ ಸಂಜೆ ಕಾರು ರಸ್ತೆ ಬದಿಯ ಡಿವೈಡರ್ ಕಟ್ಟೆಗೆ ಬಡಿದು ಅದರ ಮೇಲೆ  ಸಾಗಿ ಪಲ್ಟಿಯಾಗಿದೆ. ಪರಿಣಾಮ ಗಾಯ ಗೊಂಡ ವರಲ್ಲಿ ವೀಣಾ ಮತ್ತು ವೈಷ್ಣವಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.