ಬಿಜೆಪಿ ವಾಲ್ಮೀಕಿ ನಾಯಕ ಸಮಾಜದ ಪರ ಎಂದು ಸಾಬೀತು

ಬಿಜೆಪಿ ವಾಲ್ಮೀಕಿ ನಾಯಕ ಸಮಾಜದ ಪರ ಎಂದು ಸಾಬೀತು

ಹರಪನಹಳ್ಳಿ : ಎಸ್ಟಿ ಘಟಕದ ಉಪಾಧ್ಯಕ್ಷ ಹರ್ತಿಕೋಟಿ ವೀರೇಂದ್ರ ಸಿಂಹ  

ಹರಪನಹಳ್ಳಿ, ಆ.30-  ರಾಜ್ಯದ ವಾಲ್ಮೀಕಿ ನಾಯಕ ಸಮಾಜದವರ ಬಹುದಿನಗಳ ಬೇಡಿಕೆಯಾದ ಪರಿಶಿಷ್ಟ ಪಂಗಡದ ಸಚಿವಾಲಯ ಹಾಗೂ ಯಡಿಯೂರಪ್ಪನವರ ಕಾಲಾವಧಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆ ನೀಡುವ ಮುಖಾಂತರ 4ನೇ ಅತಿ ದೊಡ್ಡ ಸಮಾಜವಾದ ವಾಲ್ಮೀಕಿ ನಾಯಕ ಸಮಾಜದ ಪರವಾಗಿ ಬಿಜೆಪಿ ಇದೆ ಎಂದು ಸಾಬೀತು ಮಾಡಿದೆ ಎಂದು ಬಿಜೆಪಿ ಎಸ್‌ಟಿ ಘಟಕದ ರಾಜ್ಯ ಉಪಾಧ್ಯಕ್ಷ ಹರ್ತಿಕೋಟಿ ವೀರೇಂದ್ರ ಸಿಂಹ ಹೇಳಿದರು.

ಪಟ್ಟಣದ ಬಾಬು ಜಗಜೀವನ್‌ ರಾಂ ಭವನದಲ್ಲಿ  ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ 77 ಪಾಳೆ ಪಟ್ಟುಗಳಲ್ಲಿ ಹರಪನಹಳ್ಳಿ ಪಾಳೇಗಾರರು ವೀರರು, ಶೂರರಾಗಿದ್ದು,  ಹರಪನಹಳ್ಳಿ ತಾಲ್ಲೂಕಿನ ನಿರ್ಣಾಯಕ ಮತದಾರರರು ವಾಲ್ಮೀಕಿ ನಾಯಕರು ಎಂದರೆ ತಪ್ಪಾಗಲಾರದು. 

ಬಹುದಿನಗಳ ಬೇಡಿಕೆಯಾದ 7.5 ಮೀಸಲಾತಿ ವಿಚಾರವಾಗಿ  ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೀಘ್ರದಲ್ಲಿ ಮೀಸಲಾತಿ  ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಎಸ್‌ಟಿ ಘಟಕದ ಅಧ್ಯಕ್ಷ,  ಚಲನ ಚಿತ್ರ ನಟ ಬಂಗಾರು ಹನುಂಮತ ಮಾತನಾಡಿ,  ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ವಾಲ್ಮೀಕಿ ನಾಯಕ ಜನಾಂಗ ಸುಮಾರು 50 ಸಾವಿರ ಜನಸಂಖ್ಯೆ ಇದ್ದು, ಶೇಕಡ 80 ರಷ್ಟು ಜನರು ಬಿಜೆಪಿಗೆ ಮತ ನೀಡಿದ್ದಾರೆ ಎಂದರು. 

ಬಿಜೆಪಿ ತಾಲ್ಲೂಕು ಎಸ್‌ಟಿ ಘಟಕದ ಅಧ್ಯಕ್ಷ ತಳವಾರ ಮನೋಜ್‌ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,   ತಾಲ್ಲೂಕಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವಾಲ್ಮೀಕಿ ನಾಯಕ ಸಮಾಜದವರು ಶಾಸಕರ ಪರವಾಗಿ ಮತ ನೀಡಿದ್ದಾರೆ. ಮುಂದೆಯು ಸಹ ಅವರ ಜೊತೆಗೆ ಇರುತ್ತೇವೆ ಎಂದರು.

ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ನಿಟ್ಟೂರು
ಸಣ್ಣ ಹಾಲಪ್ಪ, ಜಿಲ್ಲಾ ಬಿಜೆಪಿ ಎಸ್‌ಟಿ ಘಟಕದ ಕಾರ್ಯದರ್ಶಿ ಆರ್. ಲೋಕೇಶ್‌, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಟಿ. ನಾಗರಾಜಪ್ಪ ಮಾತನಾಡಿ,  ಪಟ್ಟಣದಲ್ಲಿರುವ ವಾಲ್ಮೀಕಿ ಸಮುದಾಯ ಭವನ ಪೂರ್ಣಗೊಳಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡೋಣ ಎಂದರು. 

ತಾಲ್ಲೂಕು ಬಿಜೆಪಿ ಕಾರ್ಯದರ್ಶಿಗಳಾದ  ಉದಯಕುಮಾರ ಹಾಗೂ ಬಸವರಾಜ ಮಾತನಾಡಿದರು. 

ಸಭೆಯಲ್ಲಿ ಬಿಜೆಪಿ ತಾಲ್ಲೂಕು ಎಸ್‌ಟಿ ಘಟಕದ ಕಾರ್ಯದರ್ಶಿ ನಾಗರಾಜ ರಾಂಪುರ, ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ, ಮುಖಂಡರುಗಳಾದ ಎಚ್.ಟಿ. ಗಿರೀಶಪ್ಪ, ದ್ಯಾಪನಾಯಕನಹಳ್ಳಿ ಜಿ.ಕೆ. ಬಸವರಾಜ, ಕೆ.ಎಂ. ಪ್ರಾಣೇಶ್‌, ದಾದಾಪುರದ ಶಿವಾನಂದ, ನೀಲಗುಂದ ತಿಮ್ಮೇಶ, ಜೋಗಿ ಬಸವರಾಜ, ನಂದಿಬೇವೂರು ರಾಜಪ್ಪ,  ಆಲೂರು ಶ್ರೀನಿವಾಸ್‌, ಕಡತಿ ರಮೇಶ್, ಚೌಡಾಪುರದ ಷಣ್ಮುಖಪ್ಪ ಇನ್ನಿತರರಿದ್ದರು.