ಗಾಳಿಗೆ ತೂರುತ್ತಿರುವ ಧಾರ್ಮಿಕ ಭಾವನೆ, ಮಾನವೀಯ ಮೌಲ್ಯಗಳು

ಗಾಳಿಗೆ ತೂರುತ್ತಿರುವ ಧಾರ್ಮಿಕ ಭಾವನೆ, ಮಾನವೀಯ ಮೌಲ್ಯಗಳು

ದಾವಣಗೆರೆ, ಆ.30- ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಗ್ರಾಮೀಣ ಬಡ ಕಲಾವಿದರ ಪಾತ್ರ ಹಿರಿದು. ಸರ್ಕಾರ ಅವರನ್ನು ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮುಕ್ತಕಂಠದಿಂದ ಪ್ರಶಂಸಿಸಿದರು.

ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ (ದಾವಣಗೆರೆ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಬೆಂಗಳೂರು) ಇವರ ಸಂಯುಕ್ತಾಶ್ರಯದಲ್ಲಿ
ನಗರದ ಕುವೆಂಪು ಕನ್ನಡ ಭವನದಲ್ಲಿ 75 ನೇ  ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ಇಂದು ಆಯೋಜನೆಗೊಂಡಿದ್ದ ಎರಡು ದಿನಗಳ
ರಂಗ ಕಾರ್ಯಾಗಾರ, ಮೂಡಲಪಾಯ, ಬಯಲಾಟ ಉತ್ಸವ ಹಾಗೂ ಗ್ರಾಮೀಣ ಕಲಾವಿದರ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ದುರ್ನೀತಿ, ದುರ್ನಡತೆ, ದುರ್ಬುದ್ಧಿ, ದುರಾಸೆಗಳೇ ಹೆಚ್ಚಾಗಿ ವಿಜೃಂಭಿಸುತ್ತಿರುವ ನಾಜೂಕಿನ ಈ ಪ್ರಪಂಚದಲ್ಲಿ ಧಾರ್ಮಿಕ ಭಾವನೆಗಳು, ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಲಾಗಿದೆ ಎಂದು ವಿಷಾದಿಸಿದರು.

ದೇಶದ ಸಂಸ್ಕೃತಿ, ಪರಂಪರೆ, ಮಾನವೀಯ ಮೌಲ್ಯಗಳು ಏನಾದರೂ ಉಳಿದಿದ್ದರೆ ಅದು ಗ್ರಾಮೀಣ ಬಡ ಕಲಾವಿದರಲ್ಲಿ ಮಾತ್ರ. ಆದರೆ ಅಂತಹ ಕಲಾವಿದರು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ ಎಂದರು. 

ಕಳೆದ ಎರಡು ದಶಕಗಳಿಂದ ನಿರಂತರವಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಕಾರ್ಯ ಹಾಗೂ ಸಂಘದ ಅಧ್ಯಕ್ಷ ಎನ್.ಎಸ್. ರಾಜು ಅವರ ಸಮಾಜ ಸೇವೆ ಅನನ್ಯವಾದುದು. ಅವರು ಬಯಲಾಟ ಅಕಾಡೆಮಿಯ ಸದಸ್ಯರಾಗಿದ್ದು, ಮುಂದೆ ಅಧ್ಯಕ್ಷರಾಗಿ ಇನ್ನೂ ಹೆಚ್ಚಿನ ಸೇವೆಯಲ್ಲಿ ತೊಡಗಲಿ ಎಂದು ಶ್ರೀಗಳು ಆಶಿಸಿದರು.

ರಂಗ ತಜ್ಞ  ಮೈಸೂರಿನ ಪಾಪು ಶ್ರೀನಿವಾಸ ಅವರು ಮದ್ದಳೆ ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಜಾನಪದ, ರಂಗಭೂಮಿ, ಬಯಲಾಟ, ದೊಡ್ಡಾಟ ಮುಂತಾದ ಗ್ರಾಮೀಣ ಕಲಾ ಪ್ರಾಕಾರಗಳನ್ನು ಒಳಗೊಂಡ ಕಲಾ ಕ್ಷೇತ್ರ ಕೂಡ ಮುದ್ರಣ ಮತ್ತು ದೃಶ್ಯ ಮಾಧ್ಯಮದಷ್ಟೇ ಪ್ರಬಲ ಮಾಧ್ಯಮ ಎಂದು ಪ್ರತಿಪಾದಿಸಿದರು.

ಕಲಾವಿದರು ಸಮಾಜದ ಪಾಲುದಾರರು ಕೂಡ ಹೌದು. ಅವರು ಮನುಷ್ಯ ಸಂಬಂಧಗಳನ್ನು ನಿರಂತರವಾಗಿ ಬೆಸೆಯುವ ಕೆಲಸ ಮಾಡುತ್ತಾ ಬಂದಿದ್ದಾರೆ. ಕಲಾವಿದರು ಕಪಟಿಗಳಲ್ಲ. ನಿಷ್ಕಲ್ಮಶ ಮನಸ್ಸುಳ್ಳವರಾಗಿದ್ದು, ಅವರು  ಕೂಡಿಸುವ ಮಂದಿಯೇ ಹೊರತು, ಕಾಡುವ ಮಂದಿಯಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಹಿರಿಯ ನ್ಯಾಯವಾದಿ ಎಲ್.ಹೆಚ್. ಅರುಣ್ ಕುಮಾರ್ ಮಾತನಾಡಿ, ಜಾಗತೀಕರಣ ವ್ಯವಸ್ಥೆಯಲ್ಲಿ ಹೆಚ್ಚು ಶೋಷಣೆಗೊಳಗಾಗುತ್ತಿರುವವರು ರೈತರು ಮತ್ತು ಕಲಾವಿದರು. ಕೋವಿಡ್ ನಿಂದಾಗಿ ಕಲಾವಿದರ ಸ್ಥಿತಿ ಶೋಚನೀಯವಾಗಿದ್ದರೂ ಸಹ ಸರ್ಕಾರ ಅವರ ನೆರವಿಗೆ ಧಾವಿಸದಿರುವುದು ತುಂಬಾ ನೋವಿನ ಸಂಗತಿ ಎಂದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷರೂ, ಹಿರಿಯ ಕಲಾವಿದರಾದ ಚಳ್ಳಕೆರೆಯ ಕೆ.ಪಿ. ಭೂತಯ್ಯ, ರಂಗ ಸಂಘಟಕ ಬೆಂಗಳೂರಿನ ಸಿ.ಎಂ. ಸುರೇಶ,  ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ನಾಟಕ ಅಕಾಡೆಮಿ ಸದಸ್ಯೆ ಕೊಡಗಿನ ಶ್ರೀಮತಿ ರಾಧ ಮಾತನಾಡಿದರು. ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಿ. ವಾಮದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕಲಾವಿದ ಕತ್ತಿಗೆ ಪರಮೇಶ್ವರಪ್ಪ ಪ್ರಾರ್ಥಿಸಿದರು. ಸದಾನಂದ ಕುಂಬಳೂರು ನಿರೂಪಿಸಿದರು. ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ಎನ್.ಎಸ್. ರಾಜು ಸ್ವಾಗತಿಸಿದರು.