ವಾಲ್ಮೀಕಿ ಜಯಂತಿ ವೇಳೆಗೆ ಎಸ್ಟಿ ಮೀಸಲಾತಿ ಹೆಚ್ಚಿಸಿ

ವಾಲ್ಮೀಕಿ ಜಯಂತಿ ವೇಳೆಗೆ ಎಸ್ಟಿ ಮೀಸಲಾತಿ ಹೆಚ್ಚಿಸಿ

ಬೆಂಗಳೂರು, ಆ.18- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಭೇಟಿ ಮಾಡಿ, ಎಸ್ಟಿ ಮೀಸಲಾತಿ ಹೆಚ್ಚಳ ಕುರಿತು ಚರ್ಚಿಸಿತು.

ಬಹುವರ್ಷಗಳ ಬೇಡಿಕೆಯಾಗಿದ್ದ ಎಸ್ಟಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲು ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿಗಳನ್ನು ಎಸ್ಟಿ ಸಮುದಾಯದ ಪರವಾಗಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅಭಿನಂದಿಸಿದರು.

ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕಾಗಿದ್ದು, ಈ ಕುರಿತು ಈಗಾಗಲೇ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ನೇತೃತ್ವದ ಆಯೋಗವು ವರದಿ ಸಲ್ಲಿಸಿ ವರ್ಷ ಕಳೆದಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ವಾಲ್ಮೀಕಿ ಜಾತ್ರೆಯಲ್ಲಿ ಮಾತುಕೊಟ್ಟು ಬಂದಿದ್ದರು. ಆದಾದ ನಂತರ ನಾವು ಅವರನ್ನು ಮತ್ತು ನಿಮ್ಮನ್ನು ಭೇಟಿ ಮಾಡಿ, ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ಇದುವರೆಗೂ ಆ ಕೆಲಸವಾಗಿಲ್ಲ. ಈಗ ನೀವು ಮುಖ್ಯಮಂತ್ರಿ ಆಗಿರುವುದು ನಮ್ಮ ಸಮಾಜದವರೇ ಮುಖ್ಯಮಂತ್ರಿ ಆದಷ್ಟು ಸಂತೋಷವಾಗಿದೆ. ಮೀಸಲಾತಿ ಹೆಚ್ಚಳ ವಿಷಯದ ಬಗ್ಗೆ ಮಾಹಿತಿ ನಿಮಗಿದ್ದು, ಬರುವ ವಾಲ್ಮೀಕಿ ಜಯಂತಿ ವೇಳೆಗೆ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಬೇಕೆಂಬುದು ನಮ್ಮ ಮನವಿ ಮತ್ತು ಆಗ್ರಹವಾಗಿದೆ ಎಂದು ಸ್ವಾಮೀಜಿ ಅವರು ಬೊಮ್ಮಾಯಿ ಅವರಿಗೆ ಹೇಳಿದರು.

ಸಚಿವ ಶ್ರೀರಾಮುಲು, ಶಾಸಕರುಗಳಾದ ಸತೀಶ್ ಜಾರಕಿಹೊಳಿ, ಶಿವನಗೌಡ ನಾಯಕ, ಎಸ್.ವಿ.ರಾಮಚಂದ್ರ, ತುಕಾರಾಂ, ಅನಿಲ್ ಚಿಕ್ಕಮಾದು, ರಾಜಾ ವೆಂಕಟಪ್ಪ ನಾಯಕ ಅವರೂ ಕೂಡಾ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಸಿಎಂ ಗಮನ ಸೆಳೆದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮೀಸಲಾತಿ ಹೆಚ್ಚಳ ವಾಲ್ಮೀಕಿ ಸಮಾಜದ ಪ್ರಮುಖವಾದ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆೆ ಇಟ್ಟಿದ್ದೇವೆ. ಅದಕ್ಕಾಗಿ ಇನ್ನೂ ಸ್ವಲ್ಪ ಸಮಯಾವಕಾಶ ನೀಡಿ ಎಂದು ಸ್ವಾಮೀಜಿಯವರನ್ನು ಕೇಳಿಕೊಂಡರು.  ನಾನು ಕೂಡಾ ನಿಮ್ಮವನಾಗಿ ಕೆಲಸ ಮಾಡಲು ಸಿದ್ದನೆಂದು ನಿಯೋಗಕ್ಕೆ ಭರವಸೆ ನೀಡಿದರು.

ಮುಖ್ಯಮಂತ್ರಿಗಳ ಮಾತಿನಿಂದ ಸಮಾಧಾನಗೊಂಡ ಸ್ವಾಮೀಜಿ, ನಿಮ್ಮ ಅವಧಿಯಲ್ಲೇ ಈ ಕೆಲಸ ಆಗಬೇಕೆಂದು ಮತ್ತೊಮ್ಮೆ ಮನವಿ ಮಾಡಿದರು. ಆಗ ಮುಖಮಂತ್ರಿಗಳು, ಸ್ವಾಮೀಜಿ ಜೊತೆ ಪ್ರತ್ಯೇಕವಾಗಿ ಮಾತನಾಡುವ ಇಂಗಿತ ವ್ಯಕ್ತಪಡಿಸಿ, ಸಮಯ ತಿಳಿಸುತ್ತೇನೆಂದು ಸಭೆಯನ್ನು ಮುಕ್ತಾಯ ಮಾಡಿದರು. 

ಈ ವೇಳೆ ಸಭೆಯಲ್ಲಿದ್ದ ಸಮಾಜದ ಮುಖಂಡರು ವಾಲ್ಮೀಕಿ ಸಮಾಜಕ್ಕೆ ಇನ್ನೆರಡು ಸಚಿವ ಸ್ಥಾನ ನೀಡಿ ಎಂದು ಸಿಎಂ ಅವರನ್ನು ಒತ್ತಾಯಿಸಿದಾಗ ನೋಡೋಣ ಎಂಬ ಉತ್ತರವನ್ನು ಮಾತ್ರ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯರೂ ಆದ ವಾಲ್ಮೀಕಿ ಮಹಾಸಭಾದ ರಾಜ್ಯಾಧ್ಯಕ್ಷ ಜಿ.ಟಿ.ಚಂದ್ರಶೇಖರಪ್ಪ, ನಿವೃತ್ತ ಡಿಸಿ ಶಿವಪ್ಪ, ಕೆ.ಎಸ್.ಮೃತ್ಯುಂಜಯಪ್ಪ, ಸಾಹಿತಿ ಕೆಂಪನಹಳ್ಳಿ ಅನುಸೂಯ, ಚಳ್ಳಗೆರೆಯ ಸಣ್ಣ ತಮ್ಮಪ್ಪ ಬಾರ್ಕಿ, ಹೋರಾಟಗಾರರಾದ ಸಿರಿಗೆರೆ ತಿಪ್ಪೇಶ್, ಬಸವರಾಜ್ ನಾಯಕ, ಚಿತ್ರದುರ್ಗದ ಶ್ರೀನಿವಾಸ್ ನಾಯಕ ಮತ್ತಿತರರು ನಿಯೋಗದಲ್ಲಿದ್ದರು.