ನೈತಿಕ ಪೊಲೀಸ್ ಗಿರಿ ಆರೋಪದಡಿ ಕೆಆರ್‌ಎಸ್ ಪಕ್ಷದ ಮೂವರ ಬಂಧನ

ದಾವಣಗೆರೆ, ಆ.8- ನೈತಿಕ ಪೊಲೀಸ್ ಗಿರಿ ಮಾಡುತ್ತಿದ್ದ ಆರೋಪದಡಿ ಕೆ.ಆರ್‍.ಎಸ್ ಪಕ್ಷದ ಮೂವರು ಕಾರ್ಯಕರ್ತರನ್ನು ಇಲ್ಲಿನ ಕೆಟಿಜೆ ನಗರ ಪೊಲೀಸರು ಇಂದು ಬಂಧಿಸಿದ್ದಾರೆ.

ನಿಟ್ಟುವಳ್ಳಿ ವಾಸಿಗಳೆನ್ನಲಾದ ಮಾಲತೇಶ, ಶಶಿಕುಮಾರ, ಅಭಿಷೇಕ್ ಬಂಧಿತರು.

ಕಳೆದ ಜುಲೈ 31, 2021 ರಂದು ಬೆಳಗ್ಗೆ ನಿಟ್ಟುವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕ ಲಸಿಕಾ ಅಭಿಯಾನ ನಡೆಯುವ ಜಾಗದಲ್ಲಿ ನೂಕು ನುಗ್ಗಲು ಇದ್ದಾಗ, ಠಾಣೆಯ ಪೊಲೀಸ್ ಸಿಬ್ಬಂದಿ ಗಣೇಶ ಸ್ಥಳಕ್ಕೆ ತೆರಳಿ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದು ಕೊಂಡು ಸರದಿ ಸಾಲಿನಲ್ಲಿ ನಿಲ್ಲುವಂತೆ ಸೂಚಿಸಿ, ಸ್ಥಳದ ಲ್ಲಿಯೇ ಕರ್ತವ್ಯದಲ್ಲಿದ್ದರು. ಆಗ ಬಂಧಿತರು ಸ್ಥಳಕ್ಕೆ ಬಂದು ಯಾರೂ ಸರತಿ ಸಾಲಿನಲ್ಲಿ ನಿಲ್ಲಬೇಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಒಳಗೆ ನುಗ್ಗಿ ವಿಡಿಯೋ ಮಾಡಿಕೊಂಡು ಫೇಸ್ ಬುಕ್‌ನಲ್ಲಿ ಲೈವ್ ವಿಡಿಯೋ ಮಾಡುವುದಾಗಿ ಹೇಳಿ  ಸಾರ್ವಜನಿಕರಿಗೆ ಪ್ರಚೋದನೆ ನೀಡಿದರು.

ಆಗ ಹೆಚ್ಚಿನ ಬಂದೋಬಸ್ತ್ ಕರ್ತವ್ಯಕ್ಕೆ ಎಎಸ್ಐ ದಾದಾಪೀರ್, ದೇವೆಂದ್ರಪ್ಪ ಹಾಗೂ 7 ಮಂದಿ ಪೊಲೀಸರು ಸಾರ್ವಜನಿಕರಿಗೆ ಸರದಿ ಸಾಲಿನಲ್ಲಿ ನಿಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಅಶಾಂತಿ ಸೃಷ್ಟಿಸಿ ಗಲಭೆಗೆ ಪ್ರಚೋದನೆ ನೀಡಿದ್ದರೆಂದು ದೂರಲಾಗಿದೆ. 

ಪೊಲೀಸರಿಗೇ ಬೆದರಿಸಿ ಹಣಕ್ಕೆ ಬೇಡಿಕೆ : ಈ ಪ್ರಕರಣ ತಹಶೀಲ್ದಾರ್ ಅವರಲ್ಲಿ ವಿಚಾರಣೆಯಲ್ಲಿದ್ದರೂ ಬಂಧಿತರು, ಈ ಶುಕ್ರವಾರ ಸಂಜೆ ಠಾಣೆಯ ಮುಂಭಾಗದ ರಸ್ತೆಯಲ್ಲಿ  ಠಾಣೆಗೆ ಬರುತ್ತಿದ್ದ ಪೊಲೀಸ್ ಸಿಬ್ಬಂದಿ ಗಣೇಶನನ್ನು ತಡೆದು ನಿಟ್ಟುವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಮಾಡಿದ ವಿಡಿಯೋ ತೋರಿಸಿ ಇದನ್ನು ಡಿಲೀಟ್ ಮಾಡಬೇಕೆಂದರೆ ಮೂರು ಜನಕ್ಕೆ 30 ಸಾವಿರ ಹಣ ನೀಡಬೇಕು. ಇಲ್ಲವಾದರೆ ಮೇಲಾಧಿಕಾರಿ ಗಳಿಗೆ ದೂರು ಕೊಟ್ಟು ನಿನ್ನ ಕೆಲಸ ಕಳೆಯುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ದೂರಲಾಗಿದೆ.

ಕಳೆದ ಜುಲೈ ತಿಂಗಳಲ್ಲಿ ಕೆಎಸ್ಆರ್‌ಟಿಸಿ ಇಲಾಖೆ ನೌಕರರಿಗೆ, ಸಾರಿಗೆ ಇಲಾಖೆ ನೌಕರರಿಗೆ ಹಾಗೂ ಇನ್ನಿತರೆ ಇಲಾಖೆ ನೌಕರರಿಗೆ ವಿಡಿಯೋ ಮಾಡಿ ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೀಗೆ ಸಾರ್ವಜನಿಕರನ್ನು ಮತ್ತು ಸರ್ಕಾರಿ ನೌಕರರನ್ನು ಭ್ರಷ್ಟಚಾರ ನಿರ್ಮೂಲನೆ ನೆಪದಲ್ಲಿ ಹಣ ಮಾಡಲು ನೈತಿಕ ಪೊಲೀಸ್ ಗಿರಿ ಮಾಡುವ ಮನೋಭಾವವುಳ್ಳವರಾಗಿರುವ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.